ಬೆಳಗಾವಿ: ಮೈಕ್ರೋಫೈನಾನ್ಸ್ನಿಂದ ಸಾಲ ಪಡೆದು ಜಿಲ್ಲೆಯಲ್ಲಿ ಸುಮಾರು ಹದಿನೈದು ಸಾವಿರ ಜನ ಮಹಿಳೆಯರು ಮೋಸ ಹೋಗಿರುವ ಪ್ರಕರಣದ ತನಿಖೆಗೆ ಮೂವರು ಪೊಲೀಸ್ ಅಧಿಕಾರಿಗಳ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಹೇಳಿದರು.
ಬೆಳಗಾವಿಯಲ್ಲಿ ಮಾತನಾಡಿದ ಅವರು, ಮೈಕ್ರೋಫೈನಾನ್ಸ್ನಿಂದ ಸುಮಾರು ಹದಿನೈದು ಸಾವಿರ ಮಹಿಳೆಯರು. ಸಾಲ ಪಡೆದು, ಹೆಚ್ಚಿನ ಹಣ ಸಿಗುತ್ತದೆ ಎಂದು ಮೋಸಕ್ಕೆ ಒಳಗಾಗಿದ್ದಾರೆ. ಈ ಪ್ರಕರಣದಲ್ಲಿ ಮಹಿಳೆಯರಿಂದ ಸುಮಾರು ನೂರು ಕೋಟಿ ಪಡೆದಿದ್ದಾರೆಂಬ ಮಾಹಿತಿಯಿದೆ. ಹೀಗಾಗಿ ಈಗಾಗಲೇ ಪೊಲೀಸ್ ಅಧಿಕಾರಿಗಳ ತಂಡ ರಚಿಸಿ ತನಿಖೆಗೆ ಸೂಚಿಸಲಾಗಿದ್ದು, ಶೀಘ್ರವೇ ಸತ್ಯಾಸತ್ಯತೆ ತಿಳಿಯಲಿದೆ ಎಂದರು.
ಮಹಿಳೆಯರಿಗೆ ಮೋಸ ಮಾಡಿದ ಮಧ್ಯವರ್ತಿಗಳನ್ನು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಾರೆ. ಮೈಕ್ರೋಫೈನಾನ್ಸ್ ನಿಂದ ಮಹಿಳೆಯರಿಗೆ ಯಾವುದೇ ತರಹ ತೊಂದರೆ ಮಾಡಬಾರದು ಎಂದು ಈಗಾಗಲೇ ಸೂಚಿಸಲಾಗಿದೆ ಎಂದರು.
ಗುತ್ತಿಗೆದಾರ ಆತ್ಮಹತ್ಯೆ ಪ್ರಕರಣದ ಬಗ್ಗೆ ಪ್ರತಿಕ್ರಿಯಿಸಿ ಕೆ.ಎಸ್.ಈಶ್ವರಪ್ಪ ಅವರ ಕೇಸ್ ನಲ್ಲಿ ಸಂತೋಷ ಪಾಟೀಲ್ ಅವರು ಈಶ್ವರಪ್ಪನವರ ಹೆಸರು ಉಲ್ಲೇಖಿಸಿ ಆತ್ಮಹತ್ಯೆ ಮಾಡಿಕೊಂಡಿದ್ದ, ಆದರೆ ಪ್ರಿಯಾಂಕಾ ಖರ್ಗೆ ಅವರ ಹೆಸರು ಎಲ್ಲಿಯೂ ಉಲ್ಲೇಖವಿಲ್ಲ. ಹೀಗಾಗಿ ಈ ಕುರಿತು ತನಿಖೆ ನಡೆಯಲಿ. ತನಿಖೆಯಿಂದ ಸತ್ಯಾಸತ್ಯತೆ ತಿಳಿಯುತ್ತದೆ. ಬಿಜೆಪಿಯವರು ಪ್ರತಿಭಟನೆ ನಡೆಸಿದರೆ ಅಥವಾ ಆಗ್ರಹಿಸಿದರೆ ರಾಜೀನಾಮೆ ನೀಡುವುದಕ್ಕೆ ಆಗಲ್ಲ ಎಂದು ಜಾರಕಿಹೊಳಿ ಹೇಳಿದರು.
ಬೆಳಗಾವಿಯ ಕಸ ವಿಲೇವಾರಿ ಕುರಿತು ಪ್ರತಿಕ್ರಿಯೆ ನೀಡಿ, ನಾಲ್ಕು ಘಟಕಗಳನ್ನು ಮಾಡಬೇಕೆಂದು ನಾನು ಮೊದಲೇ ಹೇಳಿದ್ದೆ, ಈ ಕುರಿತು ಅಧಿಕಾರಿಗಳ ಸಭೆ ಕರೆದು ಸಮಸ್ಯೆ ಪರಿಹರಿಸಲಾಗುವುದು ಎಂದರು.