Advertisement

ವೆಚ್ಚ ಪರಿಷ್ಕರಣೆ: 188.73 ಕೋ.ಯಿಂದ 209.13 ಕೋ.ರೂ.ಗೆ ಹೆಚ್ಚಳ

11:24 PM Jan 02, 2025 | Team Udayavani |

ಬೆಂಗಳೂರು: ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಕೇಂದ್ರ ಪುರಸ್ಕೃತ ಯೋಜನೆ ಅಡಿ ಕೈಗೆತ್ತಿಕೊಳ್ಳಲಿರುವ ಮೀನುಗಾರಿಕೆ ಬಂದರು ನಿರ್ಮಾಣ ಕಾಮಗಾರಿಯ ಮೂಲ ಅಂದಾಜು ವೆಚ್ಚವನ್ನು ಸರಕಾರ ಪರಿಷ್ಕರಿಸಿದೆ.

Advertisement

ಗುರುವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಇದಕ್ಕೆ ಅನುಮೋದನೆ ನೀಡಿದ್ದು, ಯೋಜನೆಯ ಮೂಲ ಅಂದಾಜು ಪಟ್ಟಿಯಲ್ಲಿದ್ದ 188.73 ಕೋಟಿ ರೂ.ಗಳನ್ನು ಅದನ್ನು 209.13 ಕೋಟಿ ರೂ.ಗೆ ಹೆಚ್ಚಿಸಲಾಗಿದೆ. ಇದರೊಂದಿಗೆ ರಾಜ್ಯದ ಪಾಲು ಕೂಡ ಏರಿಕೆಯಾಗಿದ್ದು, 21.13 ಕೋಟಿಯಿಂದ 41.53 ಕೋಟಿ ರೂ.ಗೆ ಹೆಚ್ಚಳವಾಗಿದೆ.

ಕಾಮಗಾರಿ ಅನುಷ್ಠಾನಕ್ಕಾಗಿ ಆಗತ್ಯವಿರುವ ಮೊತ್ತವನ್ನು 2024-25ನೇ ಸಾಲಿನಲ್ಲಿ ಮೀನುಗಾರಿಕೆ ಇಲಾಖೆಯಡಿ ಕೈಗೆತ್ತಿಕೊಳ್ಳಲು ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಯೋಜನೆಗೆ ಸಂಬಂಧಿಸಿ ಹೆಜಮಾಡಿ ಗ್ರಾಮದ 14 ಸ್ಥಳಗಳ ಒಟ್ಟು 12.20 ಎಕರೆ ಜಮೀನನ್ನು ಭೂಸ್ವಾಧೀನಪಡಿಸಿಕೊಳ್ಳಲಾಗುವುದು ಎಂದರು.

2026ರ ಫೆಬ್ರವರಿ 17ರ ಒಳಗೆ ಈ ಕಾಮಗಾರಿಗೆ ಅವಶ್ಯವಿ ರುವ ಜಮೀನಿನ ಭೂಸ್ವಾಧೀನ ಪ್ರಕ್ರಿಯೆ ಮುಕ್ತಾಯಗೊಳಿಸಿ, ಕಾಮಗಾರಿ ಸಹ ಮುಕ್ತಾಯಗೊಳಿಸುವ ಗುರಿಯನ್ನು ಸರಕಾರ ಹೊಂದಿದೆ. ಹೆಜಮಾಡಿ ಕೋಡಿ ಮೀನುಗಾರಿಕೆ ಇಳಿದಾಣ ಕೇಂದ್ರದ ಸುತ್ತಮುತ್ತಲಿನ ಗ್ರಾಮದಲ್ಲಿ ಅಂದಾಜು 150 ಯಾಂತ್ರೀಕೃತ, 600 ಮೋಟಾರೀಕೃತ, 400 ನಾಡದೋಣಿಗಳು ಕಾರ್ಯಾಚರಿಸುತ್ತಿವೆ.

ಈ ಭಾಗದ ಮೀನುಗಾರರು ಪ್ರಸ್ತುತ ಮಂಗಳೂರು, ಮಲ್ಪೆ ಮೀನುಗಾರಿಕೆ ಬಂದರುಗಳನ್ನು ದೋಣಿಗಳ ನಿಲುಗಡೆಗೆ ಮತ್ತು ಮೀನು ಮಾರಾಟಕ್ಕಾಗಿ ಅವಲಂಬಿಸಿರುತ್ತಾರೆ. ಇದರಿಂದ ಮಂಗಳೂರು ಮತ್ತು ಮಲ್ಪೆ ಮತ್ತು ಮೀನುಗಾರಿಕೆ ಬಂದರಿನಲ್ಲಿ ದೋಣಿಗಳ ದಟ್ಟಣೆ ಹೆಚ್ಚಾಗಿರುವುದರಿಂದ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ ಮೀನುಗಾರಿಕೆ ಬಂದರು ನಿರ್ಮಾಣ ಮಾಡಲು ಉದ್ದೇಶಿಸಲಾಗಿದೆ.

Advertisement

ಬಂದರುಗಳ ಆಧುನೀಕರಣ
ಇದಲ್ಲದೆ ಕೇಂದ್ರ ಪುರಸ್ಕೃತ ಪ್ರಧಾನಮಂತ್ರಿ ಮತ್ಸé ಸಂಪದ ಯೋಜನೆಯಡಿ ಹಾಲಿ ಇರುವ ಮೀನುಗಾರಿಕೆ ಬಂದರುಗಳ ಆಧುನೀಕರಣ ಹಾಗೂ ಮೀನುಗಾರಿಕೆ ಬಂದರು ಮತ್ತು ಮೀನುಗಾರಿಕೆ ಇಳಿದಾಣ ಕೇಂದ್ರಗಳಲ್ಲಿ ನಿರ್ವಹಣೆ ಹೂಳೆತ್ತುವಿಕೆ ಕಾಮಗಾರಿಗಳನ್ನು ಒಟ್ಟು 84.57 ಕೋಟಿ ರೂ.ಗಳ ವೆಚ್ಚದಲ್ಲಿ ಕೈಗೊಳ್ಳಲು ಇದೇ ವೇಳೆ ಸಂಪುಟ ಆಡಳಿತಾತ್ಮಕ ಅನುಮೋದನೆ ನೀಡಿದೆ. ಕೆಟಿಟಿಪಿ ನಿಯಮಗಳನ್ವಯ ಪ್ರಸ್ತಾಪಿತ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ.

ಒಟ್ಟು ಯೋಜನಾ ವೆಚ್ಚ 84.57 ಕೋಟಿ ರೂ. ಇದ್ದು, ಮೀನುಗಾರರ ಹಿತದೃಷ್ಟಿಯಿಂದ ಮಲ್ಪೆ, ಗಂಗೊಳ್ಳಿ ಮತ್ತು ಮಂಗಳೂರು ಬಂದರುಗಳ ಆಧುನೀಕರಣ ಹಾಗೂ ಆಮದಳ್ಳಿ, ಹಾರವಾಡ ಮತ್ತು ಬೇಲೆಕೇರಿ ಹಾಗೂ ತದಡಿ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಈ ಕಾಮಗಾರಿಗಳನ್ನು ಕೈಗೊಳ್ಳಲು ರಾಜ್ಯ ಸರಕಾರದ ಪಾಲು 34.19 ಕೋಟಿ ರೂ., ಕೇಂದ್ರದ ಪಾಲು 50.38 ಕೋಟಿ ರೂ. ಆಗಿದೆ ಎಂದು ಎಚ್‌.ಕೆ. ಪಾಟೀಲ ಮಾಹಿತಿ ನೀಡಿದರು.

ಮಲ್ಪೆ, ಗಂಗೋಳ್ಳಿ ಮತ್ತು ಮಂಗಳೂರಿನಂತಹ ಪ್ರಮುಖ ಬಂದರುಗಳನ್ನು ನಿರ್ಮಿಸಿ ಅನೇಕ ವರ್ಷಗಳಾಗಿವೆ. ಈ ಮೂರು ಬಂದರುಗಳನ್ನು ನವೀಕರಿಸಿ ಅಭಿವೃದ್ಧಿಪಡಿಸುವ ನಿಟ್ಟಿನಿಂದ ಆಧುನೀಕರಣ ಕಾಮಗಾರಿ ಕೈಗೊಳ್ಳುವುದು ಅತ್ಯಗತ್ಯವಾಗಿದೆ. ಆಮದಳ್ಳಿ, ಹಾರವಾಡ ಮತ್ತು ಬೇಲಿಕೇರಿ ಹಾಗೂ ತದಡಿ ಮೀನುಗಾರಿಕೆ ಬಂದರು ಮತ್ತು ಇಳಿದಾಣ ಕೇಂದ್ರಗಳಲ್ಲಿ ಹೂಳೆತ್ತಲು ನಿರ್ಧರಿಸಲಾಗಿದೆ. ಒಟ್ಟಾರೆ ಮತ್ಸé ಸಂಪದ ಯೋಜನೆ ಅಡಿ ರಾಜ್ಯದಲ್ಲಿ 11 ಮೀನುಗಾರಿಕೆ ಬಂದರು ಮತ್ತು 15 ಮೀನುಗಾರಿಕೆ ಇಳಿದಾಣಗಳ ಆಧುನೀಕರಣಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

Advertisement

Udayavani is now on Telegram. Click here to join our channel and stay updated with the latest news.

Next