ಬೆಂಗಳೂರು: ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ (ಕೆಐಎಡಿಬಿ) ತನ್ನ ವಿವಿಧ ಯೋಜನೆಗಳ ಭೂಸ್ವಾಧೀನ ಹಾಗೂ ಅಭಿವೃದ್ಧಿ ವೆಚ್ಚ ನಿಭಾಯಿಸುವುದಕ್ಕಾಗಿ ಹಣಕಾಸು ಸಂಸ್ಥೆಗಳಿಂದ ಪಡೆಯುವ ಸಾಲದ ಮಿತಿಯನ್ನು ಈಗಿರುವ 500 ಕೋಟಿ ರೂ.ಗಳಿಂದ 5000 ಕೋಟಿ ರೂ.ಗಳಿಗೆ ಹೆಚ್ಚಳ ಮಾಡುವ ಮಹತ್ವದ ನಿರ್ಧಾರಕ್ಕೆ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಲಾಗಿದೆ.
ಸಂಪುಟ ಸಭೆಯ ಬಳಿಕ ಕಾನೂನು ಮತ್ತು ಸಂಸದೀಯ ವ್ಯವಹಾರ ಸಚಿವ ಎಚ್.ಕೆ. ಪಾಟೀಲ್ ಪತ್ರಿಕಾಗೋಷ್ಠಿಯಲ್ಲಿ ಈ ವಿಚಾರ ತಿಳಿಸಿದರು.ರಾಜ್ಯದಲ್ಲಿ ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗೆ ಭೂ ವಶಪಡಿಸಿಕೊಳ್ಳುತ್ತಿದೆ. ಭೂ ಸ್ವಾಧೀನಕ್ಕೆ ಅಗತ್ಯವಿರುವ ಹಣ ಕ್ರೋಢೀಕರಣ ಹಾಗೂ ಬ್ಯಾಂಕ್ ಸಾಲಕ್ಕೆ ಸರಕಾರಿ ಗ್ಯಾರಂಟಿ ಹೆಚ್ಚಿಸಲು ಈ ನಿರ್ಧಾರದಿಂದ ಅನುಕೂಲವಾಗಲಿದೆ ಎಂದರು.
ವಿಸ್ತರಿಸಲಾದ ಸರಕಾರಿ ಗ್ಯಾರಂಟಿಯ ಮೇಲೆ ಶೇ. 1ರಷ್ಟು ಕಮಿಷನ್ ಅನ್ನು ಕೆಐಎಡಿಬಿ ಪಾವತಿಸಬೇಕಾಗುತ್ತದೆ. ರಾಜ್ಯದಲ್ಲಿ 24 ಕೈಗಾರಿಕಾ ಪ್ರದೇಶಗಳ ಅಭಿವೃದ್ಧಿಗಾಗಿ 28,741 ಎಕರೆ ಭೂಮಿಯನ್ನು ಸ್ವಾಧೀನಪಡಿಸಿಕೊಳ್ಳಲಾಗುತ್ತಿದೆ. ಇದಕ್ಕೆ ಒಟ್ಟು 26,505 ಕೋಟಿ ರೂ. ಭೂ ಸ್ವಾಧೀನ ವೆಚ್ಚ 5,875 ಕೋಟಿ ರೂ. ಅಭಿವೃದ್ಧಿ ವೆಚ್ಚ ಸೇರಿ ಒಟ್ಟು 32,380 ಕೋಟಿ ರೂ. ಬೇಕಾಗುತ್ತದೆ. ಸರಾಸರಿ ಮಾಸಿಕ ವೆಚ್ಚವೇ 2,000 ಕೋಟಿ ರೂ. ಆಗುತ್ತದೆ. ಈ ಕಾರಣಕ್ಕಾಗಿ ಸಾಲದ ಮಿತಿಯನ್ನು 500 ಕೋಟಿ ರೂ.ನಿಂದ 5000 ಕೋಟಿ ರೂ.ಗೆ ಹೆಚ್ಚಳ ಮಾಡಲು ಸರಕಾರ ನಿರ್ಧರಿಸಿದೆ ಎಂದು ತಿಳಿಸಿದರು.
ಗೋಣಿ ಚೀಲ ಖರೀದಿಗೆ
10.88 ಕೋಟಿ ರೂ.
2024-25ನೇ ಸಾಲಿನಲ್ಲಿ ರಾಜ್ಯ ಸರಕಾರ ಖರೀದಿಸಿದ ಭತ್ತ ಹಾಗೂ ಬಿಳಿಜೋಳ ತುಂಬಿಸಲು ಅಗತ್ಯವಾದ 15 ಲಕ್ಷ ಗೋಣಿಚೀಲ ಖರೀದಿ ಮಾಡುವುದಕ್ಕೆ 10.88 ಕೋಟಿ ರೂ. ನೀಡಲು ಸಂಪುಟ ಸಭೆಯಲ್ಲಿ ತೀರ್ಮಾನಿಸಲಾಗಿದೆ.ಜೆಮ್ ಪೋರ್ಟಲ್ ಮೂಲಕ ಆವರ್ತಕ ನಿಧಿಯಡಿ ಲಭ್ಯವಿರುವ ಅನುದಾನದಡಿ ಗೋಣಿ ಚೀಲ ಖರೀದಿಸಲಾಗುತ್ತದೆ ಎಂದು ಸಚಿವ ಪಾಟೀಲ್ ತಿಳಿಸಿದರು.