“ದಿ ವಿಲನ್’ ಯಾವಾಗ ಬರ್ತದೆ ಗುರು … ಗಾಂಧಿನಗರದ ಮಂದಿ ಅದೆಷ್ಟು ಮಂದಿಯಲ್ಲಿ ಹೀಗೆ ಕೇಳುತ್ತಿದ್ದಾರೋ ಲೆಕ್ಕವಿಲ್ಲ. ಅದಕ್ಕೆ ಕಾರಣ ಪ್ರೇಮ್ ತಂದಿಟ್ಟ ಟೆನ್ಷನ್. ಆರಂಭದಲ್ಲಿ “ದಿ ವಿಲನ್’ ಚಿತ್ರ ಗಣೇಶನ ಹಬ್ಬಕ್ಕೆ ಬಿಡುಗಡೆಯಾಗುತ್ತದೆ ಎಂದು ಹೇಳಲಾಗಿತ್ತು. ಹಾಗಾಗಿ, ಅದೆಷ್ಟೋ ಸಿನಿಮಾಗಳು ತಮ್ಮ ಬಿಡುಗಡೆಯನ್ನು ಮುಂದಕ್ಕೆ ಹಾಕಿಕೊಂಡವು. ಆದರೆ, ಪ್ರೇಮ್ ಪ್ಲ್ಯಾನ್ ಬದಲಿಸಿ, ಗಣೇಶನ ಹಬ್ಬದ ದಿನ ಚಿತ್ರ ಬಿಡುಗಡೆಯ ದಿನಾಂಕವನ್ನಷ್ಟೇ ಅನೌನ್ಸ್ ಮಾಡುತ್ತೇನೆ ಎಂದಿದ್ದಾರೆ.
ಈ ಮೂಲಕ “ದಿ ವಿಲನ್’ ಬಿಡುಗಡೆಯ ಕುತೂಹಲ ಮುಂದುವರೆದಿದೆ. ಈ ನಡುವೆಯೇ ಚಿತ್ರ ಸೆಪ್ಟೆಂಬರ್ 27 ರಂದು ಬಿಡುಗಡೆಯಾಗುತ್ತದೆ ಎಂಬ ಮತ್ತೂಂದು ಸುದ್ದಿ ಓಡಾಡುತ್ತಿದೆ. ಹಾಗಾದರೆ ಬಿಡುಗಡೆ ಯಾವಾಗ? ಈ ಪ್ರಶ್ನೆಗೆ ಪ್ರೇಮ್ ಬಳಿಯೂ ಉತ್ತರವಿಲ್ಲ. “ಕೆಲಸಗಳು ಜೋರಾಗಿ ನಡೆಯುತ್ತಿದೆ. ನಾನು ಚೆನ್ನೈ-ಬೆಂಗಳೂರು ಓಡಾಡಿಕೊಂಡಿದ್ದೇನೆ. ಚಿತ್ರದ ಫೈನಲ್ ಒರಿಜಿನಲ್ ಕಾಪಿ ನನಗೆ ಈ ತಿಂಗಳ 22 ರಂದು ಸಿಗುವ ಸಾಧ್ಯತೆ ಇದೆ.
ಒಂದೆರಡು ದಿನ ಆಚೀಚೆ ಆದರೂ ಆಗಬಹುದು’ ಎನ್ನುತ್ತಾರಷ್ಟೇ. ಈಗಾಗಲೇ “ದಿ ವಿಲನ್’ ಚಿತ್ರ ಸೆನ್ಸಾರ್ ಆಗಿದ್ದು, “ಯು/ಎ’ ಪ್ರಮಾಣ ಪತ್ರ ಸಿಕ್ಕಿದೆ. ಎಲ್ಲಾ ಓಕೆ ಚಿತ್ರದ ಅವಧಿ ಎಷ್ಟು ಎಂದು ನೀವು ಕೇಳಬಹುದು. 2 ಗಂಟೆ 55 ನಿಮಿಷ. ಹೌದು, “ದಿ ವಿಲನ್’ ಅವಧಿ 2 ಗಂಟೆ 55 ನಿಮಿಷವಾಗಿದ್ದು, ಇತ್ತೀಚಿನ ದಿನಗಳಲ್ಲಿ ಬರುತ್ತಿರುವ ದೀರ್ಘಾವಧಿ ಸಿನಿಮಾ ಇದಾಗಿದೆ.
ಈ ಬಗ್ಗೆ ಮಾತನಾಡುವ ಪ್ರೇಮ್, “ನನ್ನ “ಜೋಗಿ’ ಚಿತ್ರ ಕೂಡಾ 2.50 ನಿಮಿಷ ಇತ್ತು. ಈ ಚಿತ್ರದಲ್ಲಿ ಇಬ್ಬರು ಹೀರೋಗಳಿದ್ದಾರೆ. ಸಾಕಷ್ಟು ಸನ್ನಿವೇಶಗಳಿವೆ. ಸೆಂಟಿಮೆಂಟ್ ಕೂಡಾ ಇದೆ. ತುಂಬಾ ಸ್ಪೀಡ್ ಆಗಿ ಸಿನಿಮಾ ಸಾಗುತ್ತದೆ’ ಎಂದು ಚಿತ್ರದ ಬಗ್ಗೆ ಹೇಳುತ್ತಾರೆ ಪ್ರೇಮ್. ಚಿತ್ರದಲ್ಲಿ ಶಿವರಾಜಕುಮಾರ್, ಸುದೀಪ್, ಆ್ಯಮಿ ಜಾಕ್ಸನ್, ಮಿಥುನ್ ಚಕ್ರವರ್ತಿ ಪ್ರಮುಖ ಪಾತ್ರ ಮಾಡಿದ್ದಾರೆ. ಸಿ.ಆರ್.ಮನೋಹರ್ ಈ ಚಿತ್ರದ ನಿರ್ಮಾಪಕರು.