Advertisement
ಧರ್ಮಸ್ಥಳ, ಸುಬ್ರಹ್ಮಣ್ಯ ಸೌತಡ್ಕ ಕ್ಷೇತ್ರಗಳಲ್ಲದೆ ಬೆಂಗಳೂರು, ಮಂಗಳೂರು ನಗರಗಳಿಗೂ ಉಪ್ಪಿನಂಗಡಿ ಸಂಪರ್ಕ ಕೊಂಡಿಯಾಗಿದೆ. ಗತಕಾಲದಿಂದಲೂ ಪಂಚಾಯತ್ ವ್ಯಾಪ್ತಿಯ ಬಸ್ ನಿಲ್ದಾಣವನ್ನೇ ಸಾರಿಗೆ ಸಂಸ್ಥೆ ಅವಲಂಬಿಸಿದೆ. ಸ್ವಂತ ಬಸ್ ನಿಲ್ದಾಣ ನಿರ್ಮಿಸುವಲ್ಲಿ ನಿಗಮ ಆಸಕ್ತಿ ವಹಿಸಿಲ್ಲ. ದಿನನಿತ್ಯ ಕೆಎಸ್ಸಾರ್ಟಿಸಿಯ 400ಕ್ಕೂ ಅಧಿಕ ಬಸ್ಸುಗಳು ಇದೇ ನಿಲ್ದಾಣದಲ್ಲಿ ಆಶ್ರಯ ಪಡೆಯುತ್ತಿವೆ. ಖಾಸಗಿ ಬಸ್‌ಗಳ ಜತೆಗೆ ಪೈಪೋಟಿ ನಡೆಸುತ್ತಿವೆ. ಇಲ್ಲಿ ಬಸ್ ನಿಲುಗಡೆಗೆ ಸಾಕಷ್ಟು ಸ್ಥಳಾವಕಾಶವಿಲ್ಲದೆ ಸಮಸ್ಯೆಯಾಗುತ್ತಿದೆ. ಈ ಕುರಿತು ಸ್ಥಳೀಯ ಸಾರಿಗೆ ನಿಯಂತ್ರಣಧಿಕಾರಿಗಳೇ ಹಿರಿಯ ಅಧಿಕಾರಿಗೆ ಪತ್ರ ಬರೆದಿದ್ದಾರೆ.
ನಿಲ್ದಾಣದಲ್ಲಿ ಬಸ್ಸುಗಳ ಸಂಖ್ಯೆ ಹೆಚ್ಚುತ್ತಿರುವುದನ್ನು ಗಮನಿಸಿ ಪಂಚಾಯತ್ ಆಡಳಿತ ಸಮಿತಿಯ ಸದಸ್ಯರು ಹಾಗೂ ಅಧ್ಯಕ್ಷರು ಸಾರಿಗೆ ಸಚಿವರಿಗೆ ಒತ್ತಡ ಹೇರಲು ಜಿಲ್ಲೆಯ ಉಸ್ತುವಾರಿ ಸಚಿವರಿಗೆ ಮನವಿ ಮಾಡಿಕೊಂಡಿದ್ದಾರೆ. ನಿಲ್ದಾಣದಲ್ಲಿ ಸ್ಥಳಾವಕಾಶ ಕೊರತೆಯಿಂದ ಬೆಂಗಳೂರು, ತಿರುಪತಿ, ಚೆನ್ನೈಗೆ ತೆರಳುವ ಬಸ್‌ಗಳು ಹೆದ್ದಾರಿಯಲ್ಲೆ ನೇರ ಚಲಿಸುವಂತಾಗಿದೆ. ಇನ್ನಾದರೂ ಸಾರಿಗೆ ನಿಗಮ ಎಚ್ಚೆತ್ತುಕೊಳ್ಳಬೇಕಾಗಿದೆ. ಸಾರಿಗೆ ಸಂಸ್ಥೆಯ ಬಸ್‌ಗಳ ಸಂಖ್ಯೆ ಹೆಚ್ಚುತ್ತಿದ್ದರೂ ಖಾಸಗಿಯವರಿಗೆ ಸ್ಪರ್ಧೆ ನೀಡುತ್ತಾರೆ ವಿನಾ ಸ್ವಂತ ನಿಲ್ದಾಣಕ್ಕಾಗಿ ನಿವೇಶನ ಹುಡುಕುವಲ್ಲಿ ಆಸಕ್ತಿ ವಹಿಸುತ್ತಿಲ್ಲ ಎಂದು ಸ್ಥಳೀಯರಾದ ಇಸ್ಮಾಯಿಲ್ ತಂಙಳ್ ಲಕ್ಷ್ಮೀ ನಗರ ಹೇಳಿದ್ದಾರೆ. ಸಚಿವರಿಗೆ ಪತ್ರ
ಬಸ್ ನಿಲ್ದಾಣದ ಸಮಸ್ಯೆ ಇರುವುದು ಮನವರಿಕೆಯಾಗಿದೆ. ವಿಧಾನ ಸಭೆ ಚುನಾವಣೆಗೂ ಮೊದಲೇ ಪ್ರತ್ಯೇಕ ಸಾರಿಗೆ ಬಸ್ ನಿಲ್ದಾಣ ಕೋರಿಕೆಯ ಸಾರಿಗೆ ಸಚಿವರಿಗೆ ಪತ್ರ ಬರೆದಿದ್ದೆ. ಮುಂದಿನ ಅಧಿವೇಶನದಲ್ಲಿ ಈ ಬಗ್ಗೆ ವಿವರಣೆ ಕೇಳುತ್ತೇನೆ.
– ಸಂಜೀವ ಮಠಂದೂರು
ಶಾಸಕರು, ಪುತ್ತೂರು
Related Articles
ಸಾರಿಗೆ ಸಂಸ್ಥೆಯ ಬಸ್‌ಗಳಿಗೆ ನಿಲ್ದಾಣದಲ್ಲಿ ಸ್ಥಳಾವಕಾಶ ಇಲ್ಲದೆ ಹೆದ್ದಾರಿಯಲ್ಲೇ ಸಂಚರಿಸುವಂತಾಗಿದೆ. ಈ ಕುರಿತು ಕರ್ನಾಟಕ ಸಾರಿಗೆ ಸಂಸ್ಥೆ ವರಿಷ್ಠಾಧಿಕಾರಿಗಳ ಕಚೇರಿಗೆ ಮನವಿ ಸಲ್ಲಿಸಲಾಗಿದ್ದು, ಎಲ್ಲ ಬಸ್ ನಿಲ್ದಾಣಕ್ಕೆ ಬಂದು ಹೋಗುವಂತೆ ಆದೇಶ ಹೊರಡಿಸಿದ್ದಾರೆ. ಆದರೆ ಪಾಲನೆಯಾಗುತ್ತಿಲ್ಲ.
– ಜತೀಂದ್ರ ಶೆಟ್ಟಿ
ಅಧ್ಯಕ್ಷರು, ನಮ್ಮೂರು ನೆಕ್ಕಿಲಾಡಿ ಸಂಘಟನೆ
Advertisement
ಎಂ.ಎಸ್. ಭಟ್