Advertisement

ಬೆಳಕಿನ ನಿರೀಕ್ಷೆಯಲ್ಲಿ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಪ್ರದೇಶದ ನಿವಾಸಿಗಳು

12:14 PM Dec 16, 2024 | Team Udayavani |

ಮಂಗಳೂರು: ವಿದ್ಯುತ್‌ ಸಂಪರ್ಕ ಇಲ್ಲದೆ ಸಂಕಷ್ಟದಲ್ಲಿರುವ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ ಬೆಳ್ತಂಗಡಿ ತಾಲೂಕಿನ ಕೆಲವು ಗ್ರಾಮಗಳಿಗೆ ವಿದ್ಯುತ್‌ ಸಂಪರ್ಕ ಪಡೆಯುವ ನಿಟ್ಟಿನಲ್ಲಿ ಪರಿವೇಶ್‌ 2.0 ಪೋರ್ಟಲ್‌ನಲ್ಲಿ ಅರ್ಜಿ ಸಲ್ಲಿಸುವ ನಿಟ್ಟಿನಲ್ಲಿ ಕೆಲಸಗಳು ನಡೆಯುತ್ತಿದ್ದು, ಇದಕ್ಕಾಗಿ ಮೆಸ್ಕಾಂ ಏಜೆನ್ಸಿಯೊಂದನ್ನು ನಿಯೋಜಿಸಿದೆ.

Advertisement

ಆ ಸಂಬಂಧ ಸರ್ವೇ ಕಾರ್ಯವನ್ನು ಜ.15ರೊಳಗೆ ಪೂರ್ಣಗೊಳಿಸುವಂತೆ ಜಿಲ್ಲಾಧಿಕಾರಿಯವರು ನಿರ್ದೇಶಿಸಿದಂತೆ ಮೆಸ್ಕಾಂ ಮತ್ತು ಏಜೆನ್ಸಿ ಕಾರ್ಯ ಪ್ರವೃತ್ತವಾಗಿದೆ. ಒಂದು ಗ್ರಾಮದ ಸರ್ವೇಗೆ ಒಂದು ವಾರ ಬೇಕಾಗಿದ್ದು, ಅಪ್‌ ಲೋಡ್‌ ಮಾಡಲು 3 ದಿನ ಬೇಕಾಗಿದೆ.

ಪ್ರಸ್ತುತ 3 ಗ್ರಾಮಗಳಲ್ಲಿ ಸರ್ವೇ ಕಾರ್ಯ ಮುಗಿದಿದ್ದು, ಉಳಿದ ಗ್ರಾಮಗಳಲ್ಲಿ ಇನ್ನಷ್ಟೇ ಈ ಪ್ರಕ್ರಿಯೆ ಆರಂಭವಾಗಬೇಕಿದೆ ಎಂದು
ಮೆಸ್ಕಾಂ ಅಧಿಕಾರಿಗಳು ತಿಳಿಸಿದ್ದಾರೆ.

ದೇಶವು ಸ್ವಾತಂತ್ರ್ಯದ ಅಮೃತ ಮಹೋತ್ಸವ ಸಂಭ್ರಮದಲ್ಲಿದ್ದರೂ ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯ
ಬೆಳ್ತಂಗಡಿ ತಾಲೂಕಿನ ನಾರಾವಿ, ಕುತ್ಲೂರು, ಸುಲ್ಕೇರಿಮೊಗ್ರು, ನಾವರ, ಸವಣಾಲು, ನಾವೂರು, ಮಲವಂತಿಗೆ ಗ್ರಾಮಗಳಲ್ಲಿ
ವಾಸವಾಗಿರುವ ಆದಿವಾಸಿ ಮಲೆಕುಡಿಯ ಕುಟುಂಬದ ಮನೆಗಳಿಗೆ ವಿದ್ಯುತ್‌ ಸಂಪರ್ಕ ಒದಗಿಸುವ ಜಿಲ್ಲಾಡಳಿತದ ಪ್ರಯತ್ನಕ್ಕೆ ಇನ್ನೂ ಫಲ ಸಿಕ್ಕಿಲ್ಲ. ಇಲ್ಲಿ ಸುಮಾರು 120 ಕುಟುಂಬಗಳಿಗೆ ಇನ್ನೂ ವಿದ್ಯುತ್‌ ಸಂಪರ್ಕ ಸಿಕ್ಕಿಲ್ಲ.

ಸುಲ್ಕೇರಿ ಮೊಗ್ರು ಗ್ರಾಮದ ಸುಲ್ಕೇರಿ ಮೊಗ್ರು, ಪಾಂಜಲ, ಮಾಳಿಗೆ ಪರಿಶಿಷ್ಟ ಪಂಗಡದ ಕಾಲನಿಗೆ ವಿದ್ಯುತ್‌ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ 2016ರಲ್ಲಿ ಸ್ಥಳೀಯರೇ ಅರಣ್ಯ ಹಕ್ಕು ಕಾಯ್ದೆಯಡಿ ಕೇಂದ್ರ ಸರಕಾರದ “ಪರಿವೇಶ್‌ ಪೋರ್ಟಲ್‌’ನಲ್ಲಿ ಸುಮಾರು
50 ಸಾವಿರ ರೂ. ವೆಚ್ಚ ಮಾಡಿ, ತಜ್ಞರೊಬ್ಬರ ಸಹಕಾರದಿಂದ ಅರ್ಜಿ ಸಲ್ಲಿಸಿದ್ದರು. 2019ರಲ್ಲಿ ಈ ಅರ್ಜಿ ವಿಲೇವಾರಿಯಾಗಿ “ಕಾಮಗಾರಿ ಕೈಗೊಳ್ಳಬಹುದು’ ಎಂದು ಅನುಮತಿ ಸಿಕ್ಕಿದೆ.

Advertisement

ಅದರಂತೆ ಮೆಸ್ಕಾಂ ಅನುದಾನ ಮೀಸಲಿಟ್ಟು ಕಾಮಗಾರಿ ನಡೆಸಲು ಮುಂದಾಯಿತು. ಈ ವೇಳೆ ಅರಣ್ಯ ಇಲಾಖೆಯವರು “ಅರಣ್ಯ ಸಂರಕ್ಷಣ ಕಾಯ್ದೆ 1980’ರಡಿ ಅನುಮತಿ ಪಡೆಯಲಾಗಿಲ್ಲ ಎಂದು ತಕರಾರು ತೆಗೆದ ಕಾರಣ ವಿದ್ಯುತ್‌ ಸಂಪರ್ಕ ಪಡೆಯುವ ಪ್ರಯತ್ನಕ್ಕೆ ಮತ್ತೆ ತಡೆ ಬಿತ್ತು. ಮತ್ತೆ ಪ್ರತ್ಯೇಕವಾಗಿ ಅರಣ್ಯ ಸಂರಕ್ಷಣ ಕಾಯ್ದೆ 1980ರಡಿ ವಿದ್ಯುತ್‌ ಸಂಪರ್ಕಕ್ಕಾಗಿ ಅರ್ಜಿ ಸಲ್ಲಿಸಲಾಗಿದ್ದು, ಐದು ವರ್ಷವಾದರೂ ಈ ನಿಟ್ಟಿನಲ್ಲಿ ಯಾವುದೇ ಬೆಳವಣಿಗೆ ಆಗದಿರುವುದು ಸ್ಥಳೀಯರ ಅಸಮಾಧಾನಕ್ಕೆ ಕಾರಣವಾಗಿದೆ.

ಸರಕಾರ ಇಚ್ಛಾಶಕ್ತಿ ತೋರಿಸಲಿ
ಈ ಗ್ರಾಮಗಳ ಜನರಿಗೆ ಸಂವಿಧಾನ ಬದ್ಧವಾಗಿ ದೊರೆಯಬೇಕಾದ ಮೂಲಸೌಕರ್ಯ ದೊರೆಯದೆ ಇಂದಿಗೂ ಚಿಮಿಣಿ ದೀಪದ ಬೆಳಕಿನಲ್ಲಿ ರಾತ್ರಿ ಕಳೆಯುವಂತಾಗಿದೆ. ರಸ್ತೆ ಸಂಪರ್ಕವೂ ಸರಿಯಾಗಿಲ್ಲದೆ ಸ್ಥಳೀಯರ ಪಾಡು ಹೇಳ ತೀರದಾಗಿದೆ. ಸರಕಾರಕ್ಕೆ ಅಭಿವೃದ್ಧಿಯ ಇಚ್ಛಾಶಕ್ತಿ ಇದ್ದರೆ ಯಾವುದೇ ಕೆಲಸಗಳನ್ನು ಮಾಡಬಹುದು. ರಾಜ್ಯ ಸರಕಾರಿ, ಜಿಲ್ಲಾಡಳಿತ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಕರ್ನಾಟಕ ಅರಣ್ಯ ಹಕ್ಕುಗಳ ಸಮನ್ವಯ ಸಮಿತಿ ಸಂಚಾಲಕ ಶೇಖರ್‌ ಲಾಯಿಲ ಆಗ್ರಹಿಸಿದ್ದಾರೆ.

ಸೋಲಾರ್‌ ಕೂಡ ನಿಷ್ಪ್ರಯೋಜಕ
ಈಗ ಗ್ರಾಮಕ್ಕೆ ಒಂದರಂತೆ ಸೋಲಾರ್‌ ಪಾರ್ಕ್‌ ಮಾಡಲು ಪ್ರಯತ್ನಗಳು ನಡೆಯುತ್ತಿದ್ದರೂ ಕಾಡಿನಿಂದ ಕೂಡಿದ
ಪ್ರದೇಶವಾಗಿದ್ದರಿಂದ ಸೋಲಾರ್‌ ಪ್ರಯೋಜನವಾಗುವುದಿಲ್ಲ. ಕೆಲವು ಮನೆಗಳಿಗೆ ಅಳವಡಿಸಿದ ಸೋಲಾರ್‌ ದೀಪಗಳು ನಿರೀಕ್ಷಿತ
ಪ್ರಮಾಣದಲ್ಲಿ ನೆರವಾಗಿಲ್ಲ. ಗ್ರಾಮದಲ್ಲಿ ಸೋಲಾರ್‌ ಪಾರ್ಕ್‌ ನಿರ್ಮಿಸಿದರೂ ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ವಿದ್ಯುತ್‌
ಸರಬರಾಜು ಹೇಗೆ ಮಾಡುವುದು ಎಂಬುದು ಸ್ಥಳೀಯರ ಪ್ರಶ್ನೆ.

ಎಚ್‌ಟಿ ಎಬಿ ಬಂಚ್‌ ಕೇಬಲ್‌ ಅಳವಡಿಕೆ ಚಿಂತನೆ
ವಿದ್ಯುತ್‌ ಸಂಪರ್ಕಕ್ಕೆ ಅನುಮತಿ ದೊರೆತ ಬಳಿಕ, ಈ ಗ್ರಾಮಗಳಿಗೆ ಎಚ್‌ಟಿ ಎಬಿ ಬಂಚ್‌ ಕೇಬಲ್‌ ಮೂಲಕ ವಿದ್ಯುತ ಪೂರೈಸಲು
ಮೆಸ್ಕಾಂ ಉದ್ದೇಶಿಸಿದೆ. ಇದರಲ್ಲಿ ವಿದ್ಯುತ್‌ ತಂತಿಗಳ ಬದಲಾಗಿ ಕಂಬಗಳಲ್ಲಿಯೇ ಕೇಬಲ್‌ ನಲ್ಲಿ ವಿದ್ಯುತ್‌ ಸರಬರಾಜು ಮಾಡಲಾಗುತ್ತದೆ. ಇದರಿಂದ ಗಾಳಿ ಮಳೆಗೆ ಮರಗಳು ಬಿದ್ದು ವಿದ್ಯುತ್‌ ವ್ಯತ್ಯಯವಾಗುವುದನ್ನು ತಪ್ಪಿಸಬಹುದಾಗಿದೆ ಎನ್ನುವುದು ಮೆಸ್ಕಾಂ ಅಧಿಕಾರಿಗಳ ಮಾತು.

ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಡಿಸಿ ಪತ್ರ
ಈ ನಡುವೆ ನ.26ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ಜರಗಿದ ಜಿಲ್ಲಾಧಿಕಾರಿಗಳ ಸಭೆಯಲ್ಲಿ ಅರಣ್ಯ ಮತ್ತು ಅರಣ್ಯದಂಚಿನಲ್ಲಿರುವ ಬುಡಕಟ್ಟು ಸಮುದಾಯದವರಿಗೆ ರಸ್ತೆ, ವಿದ್ಯುತ್‌, ಕುಡಿಯುವ ನೀರು ಮೊದಲಾದ ಮೂಲಸೌಕರ್ಯಗಳನ್ನು ತುರ್ತಾಗಿ ಒದಗಿಸುವಂತೆ ಸೂಚನೆ ನೀಡಿದ್ದರು. ಇದರ ಆಧಾರದಲ್ಲಿ ದ.ಕ. ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್‌ ಅವರು ಡಿ.5ರಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಇಲಾಖೆ ಸರಕಾರದ ಅಪರ ಮುಖ್ಯ ಕಾರ್ಯದರ್ಶಿಗೆ ಪತ್ರ
ಬರೆದು, ಸುಲ್ಕೇರಿ ಮೊಗ್ರು ಗ್ರಾಮದ ವಿದ್ಯುತ್‌ ಸಂಪರ್ಕಕ್ಕೆ ಸಂಬಂಧಿಸಿ ಬಾಕಿಯಾಗಿರುವ ಪ್ರಸ್ತಾವನೆಗೆ ಶೀಘ್ರ ಅನುಮೋದನೆ ನೀಡುವಂತೆ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next