Advertisement
ಬಜಪೆ ಪೇಟೆಯಲ್ಲಿನ ಅದ್ಯಪಾಡಿ, ಮುಚ್ಚಾರು ಹಾಗೂ ಮಂಗಳೂರು, ಸುರತ್ಕಲ್ ಕಡೆಗೆ ಹೋಗುವ ಬಸ್‌ಗಳು ನಿಲ್ಲುವ ಭಾಗದಲ್ಲಿದ್ದ ಎರಡು ತಂಗುದಾಣವನ್ನು ಬಜಪೆ ಪಟ್ಟಣ ಪಂಚಾಯತ್ ಅಕ್ಟೋಬರ್ 31ರಂದು ತೆರವು ಮಾಡಿದೆ. ಬಜಪೆ ಪೇಟೆಯಲ್ಲಿ ನಡೆಯುತ್ತಿರುವ ರಸ್ತೆ ವಿಸ್ತರಣೆ ಹಾಗೂ ಕಾಂಕ್ರೀಟ್ ಕಾಮಗಾರಿಗಾಗಿ ಇವುಗಳನ್ನು ತೆರವು ಮಾಡಬೇಕು ಎಂದು ಲೋಕೋಪಯೋಗಿ ಇಲಾಖೆಯು ಬಜಪೆ ಪಟ್ಟಣ ಪಂಚಾಯತ್‌ಗೆ ಸೆ.11ರಂದು ಮನವಿ ಮಾಡಿತ್ತು. ಇದನ್ನು ಪರಿಗಣಿಸಿ ಪಟ್ಟಣ ಪಂಚಾಯತ್ ತನ್ನ ಕೆಲಸವನ್ನೇನೋ ಮಾಡಿತ್ತು.
ಬಸ್ ತಂಗುದಾಣ ಇಲ್ಲದೆ ಇರುವುದರಿಂದ ಜನರು ಈಗ ನೆರಳಿಗಾಗಿ ಪರಿತಪಿಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಮಧ್ಯಾಹ್ನದ ಹೊತ್ತಂತೂ ಇಲ್ಲಿ ನಿಲ್ಲುವುದಕ್ಕೆ ಸಾಧ್ಯವೇ ಇಲ್ಲದ ಸ್ಥಿತಿ ಇದೆ. ಜನರು ಅಂಗಡಿಗಳ ಮುಂಗಟ್ಟು, ಮರದ ನೆರಳಿನಲ್ಲಿ ನಿಂತು ಬಸ್ ಬರುವಾಗ ಓಡಿಕೊಂಡು ಬರಬೇಕಾಗಿದೆ. ಅಚ್ಚರಿ ಎಂದರೆ ಈಗ ಕೆಲವು ಬಸ್‌ಗಳೇ ಪ್ರಯಾಣಿಕರಿಗೆ ತಂಗುದಾಣವಾಗಿದೆ. ಮಂಗಳೂರು, ಸುರತ್ಕಲ್, ಪಣಂಬೂರು, ಅದ್ಯಪಾಡಿ, ಮುಚ್ಚಾರಿಗೆ ಹೋಗುವ ಬಸ್‌ಗಳಲ್ಲಿ ಕೆಲವು ಅರ್ಧ ಗಂಟೆ ಹೊತ್ತು ನಿಲ್ದಾಣದಲ್ಲಿ ನಿಲ್ಲುತ್ತವೆ. ಜನರು ಅದರಲ್ಲಿ ಹೋಗಿ ಕುಳಿತು ಬಿಸಿಲಿನಿಂದ ತಪ್ಪಿಸಿಕೊಳ್ಳುವುದೂ ಇದೆ. ಆದರೆ, ನಿಂತ ಬಸ್‌ಗಳಲ್ಲಿ ನೆರಳೇನೋ ಇರುತ್ತದೆ. ಆದರೆ, ಬಿಸಿಲಿನ ಝಳ ಹೊಡೆಯುತ್ತಿರುತ್ತದೆ! ಇನ್ನೊಂದು ಕಡೆ ಬಸ್ ಬರುವಾಗ ಬೇರೆ ಕಡೆಯಿಂದ ಓಡಿ ಬರುವುದೂ ಇದೆ. ಇದರಿಂದ ಅಪಾಯವೂ ಹೆಚ್ಚಾಗಿದೆ.
Related Articles
ಆವತ್ತು ರಸ್ತೆ ವಿಸ್ತರಣೆಗೆ ಬಸ್ ತಂಗುದಾನ ತೆರವು ಅನಿವಾರ್ಯ ಎಂದು ಲೋಕೋಪಯೋಗಿ ಇಲಾಖೆ ಮಾಡಿದ ಅವಸರವನ್ನು ನೋಡಿದರೆ ನಾಳೆಯೇ ಕಾಮಗಾರಿ ಆರಂಭದಂತೆ ಕಾಣುತ್ತಿತ್ತು. ಆದರೆ, 50 ದಿನ ಕಳೆದರೂ ಇನ್ನೂ ಕೆಲಸ ಶುರುವಾಗಿಲ್ಲ ಯಾಕೆ ಎನ್ನುವ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಕಾಮಗಾರಿ ಸದ್ಯಕ್ಕೆ ಆರಂಭವಾಗುವುದಿಲ್ಲ ಎಂದಾದರೆ ತಾತ್ಕಾಲಿಕ ತಂಗುದಾಣವಾದರೂ ನಿರ್ಮಿಸಿಕೊಡಿ ಎಂದು ಪ್ರಯಾಣಿಕರು ಆಗ್ರಹಿಸುತ್ತಿದ್ದಾರೆ.
Advertisement
-ಸುಬ್ರಾಯ ನಾಯಕ್ ಎಕ್ಕಾರು