Advertisement

Bus Fare Hike: ಸರಕಾರದ ಹೊಟ್ಟೆಗೆ ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು?

11:45 PM Jan 02, 2025 | Team Udayavani |

ಬೆಂಗಳೂರು: ಬಸ್‌ ಪ್ರಯಾಣ ದರ ಏರಿಕೆ ವಿರುದ್ಧ ವಿಪಕ್ಷಗಳು ಸರಕಾರದ ವಿರುದ್ಧ ಮುಗಿಬಿದ್ದಿದ್ದು ಸಾರ್ವಜನಿಕ ವಲಯದಲ್ಲಿ ತೀವ್ರ ಅಸಮಾಧಾನ ವ್ಯಕ್ತವಾಗಿದೆ. ಆದರೆ ಸರಕಾರ ಮಾತ್ರ ಬಸ್‌ ದರ ಏರಿಕೆಯನ್ನು ಸಮರ್ಥಿಸಿಕೊಂಡಿದೆ.

Advertisement

ಬೆಲೆ ಏರಿಕೆ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ಧಾಳಿ ನಡೆಸಿರುವ ವಿಪಕ್ಷದ ನಾಯಕ ಆರ್‌. ಅಶೋಕ್‌, ಅಸಮರ್ಥ ಮುಖ್ಯಮಂತ್ರಿ ಎಂದು ಟೀಕಾಪ್ರಹಾರ ಮಾಡಿದ್ದಾರೆ. ಈ ಸರಕಾರದ ವಿರುದ್ಧ ನಾಡಿನ ಜನರು ದಂಗೆ ಏಳುವುದು ಅನಿವಾರ್ಯ ಎಂದಿದ್ದಾರೆ. ಸರಕಾರದ ಬಸ್‌ ಪ್ರಯಾ ಣ ದರ ಏರಿಕೆಯನ್ನು ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ವ್ಯಂಗ್ಯವಾಡಿದ್ದಾರೆ.

ಈ ಬಗ್ಗೆ ಜಾಲತಾಣ “ಎಕ್ಸ್‌’ನಲ್ಲಿ ಪ್ರತಿಕ್ರಿಯಿಸಿರುವ ಆರ್‌. ಅಶೋಕ್‌, ಅಧಿಕಾರಕ್ಕೆ ಬಂದ ದಿನದಿಂದ ಬೆಲೆ ಏರಿಕೆ, ತೆರಿಗೆ ಹೆಚ್ಚಳ ಎಂದು ಒಂದಲ್ಲ ಒಂದು ರೀತಿ ಜನರ ಸುಲಿಗೆ ಮಾಡುತ್ತಿರುವ ಕಾಂಗ್ರೆಸ್‌ ಸರಕಾರ ಈಗ ಬಸ್‌ ಪ್ರಯಾಣ ದರ ಶೇ. 15 ಏರಿಕೆ ಮಾಡಿದೆ. ಸಿದ್ದರಾಮಯ್ಯ ಅವರೇ ದಿನಬೆಳಗಾದರೆ ಒಂದಲ್ಲ ಒಂದು ಬೆಲೆ ಏರಿಕೆ ಮಾಡಿ ಕನ್ನಡಿಗರ ರಕ್ತ ಹೀರುತ್ತಿದ್ದೀರಲ್ಲ ನಿಮ್ಮ ಸರಕಾರದ ಬಕಾಸುರ ಹೊಟ್ಟೆ ತುಂಬಿಸಲು ಕನ್ನಡಿಗರು ಇನ್ನೆಷ್ಟು ತೆರಿಗೆ, ಶುಲ್ಕ ತೆರಬೇಕು ಎಂದು ಪ್ರಶ್ನಿಸಿದ್ದಾರೆ. ಸಿಎಂ ದುರಾಡಳಿತದಲ್ಲಿ ಪೆಟ್ರೋಲ್‌, ಡೀಸೆಲ್‌, ಆಸ್ತಿ ತೆರಿಗೆ ಏರಿಕೆ ಅನಿವಾರ್ಯವಾಗಿದೆ ಎಂದು ದೂರಿದ್ದಾರೆ.

ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫ‌ಲ
ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಪ್ರತಿಕ್ರಿಯಿಸಿದ್ದು, ಸಿದ್ದರಾಮಯ್ಯ ಅವರೇ ಯಾವ ಮುಖವಿಟ್ಟುಕೊಂಡು ನೀವು ರಾಜ್ಯದ ಜನತೆಗೆ ಪಂಚಭಾಗ್ಯ ಯೋಜನೆಯನ್ನು ಕೊಟ್ಟಿದ್ದೇವೆ ಎಂದು ಜಂಬ ಕೊಚ್ಚಿಕೊಳ್ಳುತ್ತೀರಿ? ಶಕ್ತಿ ಯೋಜನೆಗೆ ಹಣ ಒದಗಿಸಲು ವಿಫಲವಾಗಿರುವ ನೀವು ಸಾರಿಗೆ ಸಂಸ್ಥೆಯು ನಷ್ಟದ ಹಾದಿಯನ್ನು ತುಳಿಯಲು ಕಾರಣರಾಗಿದ್ದೀರಿ ಎಂದು ಕುಟುಕಿದ್ದಾರೆ.
ಮಹಿಳೆಯರಿಗೆ ಉಚಿತ ಪುರುಷರಿಗೆ ಅದರ ಹೊರೆ ಖಚಿತ ಎಂಬುದನ್ನು ಇದೀಗ ಶೇ. 15ಬಸ್‌ ಪ್ರಯಾಣ ದರ ಏರಿಸುವ ಮೂಲಕ ಸಾರಿಗೆ ವ್ಯವಸ್ಥೆ ಆಶ್ರಯಿಸಿರುವ ಜನರಿಗೆ ಬರೆ ಎಳೆದಿದ್ದೀರಿ. ಮಳಿಗೆಗಳಲ್ಲಿ ಬೈ-1,ಗೆಟ್‌-1 ಬೋರ್ಡ್‌ ಪ್ರದರ್ಶಿಸುವಂತೆ ಜನರಿಗೆ ಟೋಪಿ ಹಾಕಲು ಹೊರಟಿದ್ದೀರಿ ಎಂದು ಟೀಕಿಸಿದ್ದಾರೆ.

ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಲ್ವಾ ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ರಾಮಲಿಂಗಾರೆಡ್ಡಿ, 2020ರಂದು ಬಸ್‌ ಟಿಕೆಟ್‌ ಹೆಚ್ಚಳ ಮಾಡಲಾಗಿತ್ತು. 5 ವರ್ಷದಲ್ಲಿ ಈಗ ಡೀಸೆಲ್‌ ದರ ಹೆಚ್ಚಳವಾಗಿದೆ. ಖರ್ಚು ವೆಚ್ಚ ಕೂಡ ಹೆಚ್ಚಾಗಿದೆ. ಸಿಬಂದಿ ವೆಚ್ಚ ಕೂಡ ಶೇ. 18 ಏರಿಕೆಯಾಗಿದೆ. ಕಳೆದ 5-10 ವರ್ಷಗಳಿಂದ ಟಿಕೆಟ್‌ ದರ ಹೆಚ್ಚಿಸಿಲ್ಲ. ಸಂಬಳ ಮತ್ತು ಸಾರಿಗೆ ಸಂಸ್ಥೆ ಉಳಿಯಬೇಕಲ್ವಾ. ಆದಾಯ ಹೆಚ್ಚಳವಾದರೂ ಖರ್ಚು ಏರಿಕೆಯಾಗಿದೆ ಎಂದಿದ್ದಾರೆ.

Advertisement

ಬಾಣಂತಿಯರ ಸಾವು: ರಾಜೀನಾಮೆಗೆ ಆಗ್ರಹ
ಬೆಂಗಳೂರು: ರಾಜ್ಯದಲ್ಲಿ ಬಾಣಂತಿಯರ ಸರಣಿ ಸಾವು ಸಂಭವಿಸುತ್ತಿದ್ದರೂ ಸರಕಾರ ಮಾತ್ರ ಮೋಜು-ಮಸ್ತಿಯಲ್ಲಿದೆ. ಇದುವರೆಗೆ ಅದರ ಡೆತ್‌ ಆಡಿಟ್‌ ವರದಿಯೂ ಬಹಿರಂಗವಾಗಿಲ್ಲ. ನ್ಯಾಯಾಂಗ ತನಿಖೆಗೂ ಕೊಟ್ಟಿಲ್ಲ. ಈ ವೈಫ‌ಲ್ಯಗಳ ಹೊಣೆ ಹೊತ್ತು ಆರೋಗ್ಯ ಸಚಿವ ದಿನೇಶ್‌ ಗುಂಡೂರಾವ್‌ ರಾಜೀನಾಮೆ ಪಡೆಯಬೇಕು ಎಂದು ವಿಧಾನಸಭೆ ವಿಪಕ್ಷದ ನಾಯಕ ಆರ್‌. ಅಶೋಕ್‌ ಪತ್ರಿಕಾಗೋಷ್ಠಿಯಲ್ಲಿ ಆಗ್ರಹಿಸಿದರು.

ಕಾಂಗ್ರೆಸ್‌ ನಾಯಕರು ಮಹಿಳಾ ಸಶಕ್ತೀಕರಣದ ಬಗ್ಗೆ ಮಾತಾಡುತ್ತಾರೆ. ಗೃಹಲಕ್ಷ್ಮಿ ಎನ್ನುತ್ತಾರೆ. 2 ಸಾವಿರ ರೂ. ನೀಡುವ ಬದಲು ಮಹಿಳೆಯರ ಜೀವ ಉಳಿಸಿದರೆ ಸಾಕಿತ್ತು. ಬಾಣಂತಿಯರಿಗೆ ಬದುಕುವ ಗ್ಯಾರಂಟಿಯನ್ನು ಮೊದಲು ನೀಡಬೇಕು. ಸಚಿವ ದಿನೇಶ್‌ ಗುಂಡೂರಾವ್‌ ರಾಜೀನಾಮೆ ನೀಡಿ, ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ನೀಡಬೇಕು ಎಂದರು.

ಬಾಣಂತಿ ಸಾವು, ಪತಿಯಿಂದ ಆತ್ಮಹತ್ಯೆ ಯತ್ನ
ರಾಜ್ಯದಲ್ಲಿ ಬಾಣಂತಿಯರ ಮರಣ ಮೃದಂಗ ಇನ್ನೂ ನಿಂತಿಲ್ಲ. ಒಟ್ಟು 736 ತಾಯಂದಿರು ಮೃತಪಟ್ಟಿದ್ದಾರೆ. ಇದು ಸರಕಾರದ ಪ್ರಾಯೋಜಿತ ಕೊಲೆಯಾಗಿದ್ದು, ಸರಕಾರವೇ ನೇರ ಹೊಣೆಯಾಗಿದೆ. ಹುಬ್ಬಳ್ಳಿಯಲ್ಲಿ ಬಾಣಂತಿ ಸತ್ತಿದ್ದಕ್ಕೆ ಅವರ ಪತಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಿಪಟೂರಿನಲ್ಲೂ ಒಬ್ಬ ಬಾಣಂತಿ ಮೃತಪಟ್ಟಿದ್ದಾರೆ. ಆಸ್ಪತ್ರೆಗೆ ಪೂರೈಸಿದ ಐವಿ ದ್ರಾವಣದಿಂದಾಗಿ ಬಾಣಂತಿಯರು ಮೃತರಾಗುತ್ತಿದ್ದಾರೆ. ಕಾಂಗ್ರೆಸ್‌ನ ಸಮಾವೇಶ ನಡೆದಾಗಲೇ ಬಾಣಂತಿಯರು ಮೃತಪಟ್ಟಿದ್ದರೂ ಅಲ್ಲಿಗೆ ಹಿರಿಯ ನಾಯಕರು ಭೇಟಿ ನೀಡಿಲ್ಲ ಎಂದು ದೂರಿದರು.

Advertisement

Udayavani is now on Telegram. Click here to join our channel and stay updated with the latest news.

Next