ಬೆಂಗಳೂರು: ಮೊದಲ ಹಂತದ ಯಶಸ್ಸಿನ ಬೆನ್ನಲ್ಲೇ 2ನೇ ಹಂತದಲ್ಲಿ ಮತ್ತೆ 20 ಅಂಬಾರಿ ಉತ್ಸವ ಹವಾನಿಯಂತ್ರಿತ ಸ್ಲೀಪರ್ ವೋಲ್ವೋ ಬಸ್‌ಗಳು ಮಂಗಳವಾರ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ)ಕ್ಕೆ ಸೇರ್ಪಡೆಗೊಂಡವು.
ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ ಸಚಿವರಾದ ರಾಮಲಿಂಗಾರೆಡ್ಡಿ, ದಿನೇಶ್ ಗುಂಡೂರಾವ್, ನಿಗಮದ ಅಧ್ಯಕ್ಷ ಎಸ್.ಆರ್. ಶ್ರೀನಿವಾಸ್ (ವಾಸು), ಉಪಾಧ್ಯಕ್ಷ ಮೊಹಮದ್ ರಿಜ್ವಾನ್ ನವಾಬ್ ಸೇರಿ ಇತರರು ಈ ಹೊಸ ಬಸ್‌ಗಳಿಗೆ ಹಸುರು ನಿಶಾನೆ ತೋರಿಸಿದರು. ಇದರೊಂದಿಗೆ ಅಂಬಾರಿ ಉತ್ಸವ’ಗಳ ಸಂಖ್ಯೆ 40ಕ್ಕೇರಿದೆ.
ಕಳೆದ ಫೆಬ್ರವರಿಯಲ್ಲಿ ಇದೇ ಮಾದರಿಯ 20 ಬಸ್‌ಗಳನ್ನು ರಸ್ತೆಗಿಳಿಸಲಾಗಿತ್ತು. ಅವು ಪ್ರಸ್ತುತ ಬೆಂಗಳೂರಿನಿಂದ ಎರ್ನಾಕುಲಂ, ಚೆನ್ನೈ, ಹೈದರಾಬಾದ್, ಕುಂದಾಪುರ, ಮುರುಡೇಶ್ವರ ಮತ್ತಿತರ ಕಡೆಗಳಲ್ಲಿ ಕಾರ್ಯಾಚರಣೆ ಮಾಡುತ್ತಿವೆ. ಈ ಬಸ್‌ಗಳಿಗೆ ಪ್ರತಿ ಕಿ.ಮೀ. ಕಾರ್ಯಾಚರಣೆಗೆ ತಗಲುವ ವೆಚ್ಚ 79.45 ರೂ. ಇದ್ದು, ಬರುತ್ತಿರುವ ಆದಾಯ ಪ್ರತಿ ಕಿ.ಮೀ.ಗೆ 90 ರೂ. ಆಗಿದೆ. ಈ ಹಿನ್ನೆಲೆಯಲ್ಲಿ ಅಲ್ಪಾವಧಿಯಲ್ಲೇ ಮತ್ತೆ 20 ಬಸ್‌ಗಳು ರಸ್ತೆಗಿಳಿಯುತ್ತಿವೆ ಎಂದು ಸಾರಿಗೆ ನಿಗಮದ ಅಧಿಕಾರಿಗಳು ಮಾಹಿತಿ ನೀಡಿದರು.
ಸಾರಿಗೆ ಸಚಿವ ರಾಮಲಿಂಗಾರೆಡ್ಡಿ ಮಾತನಾಡಿ, ಕಳೆದ ಒಂದೂವರೆ ವರ್ಷದಲ್ಲಿ 4,301 ಬಸ್‌ಗಳನ್ನು ಸೇರ್ಪಡೆಗೊಳಿಸಲಾಗಿದೆ. ಪ್ರತಿ ದಿನ 8,896 ಬಸ್‌ಗಳ ಮೂಲಕ 8,063 ಅನುಸೂಚಿಗಳಿಂದ 28.76 ಲಕ್ಷ ಕಿ.ಮೀ. ಕ್ರಮಿಸಿ 35.43 ಲಕ್ಷ ಪ್ರಯಾಣಿಕರಿಗೆ ಸಾರಿಗೆ ಸೇವೆಯನ್ನು ಒದಗಿಸಲಾಗುತ್ತಿದೆ. ಇದರಲ್ಲಿ ಶೇ.17ರಷ್ಟು ವಿದ್ಯಾರ್ಥಿಗಳಿಗೆ ಸಾರಿಗೆ ಸೇವೆ ಕಲ್ಪಿಸಲಾಗುತ್ತಿದೆ’ ಎಂದರು. ಕೆಎಸ್‌ಆರ್‌ಟಿಸಿ ವ್ಯವಸ್ಥಾಪಕ ನಿರ್ದೇಶಕ ವಿ. ಅನುºಕುಮಾರ್, ಬಿಎಂಟಿಸಿ ವ್ಯವಸ್ಥಾಪಕ ನಿರ್ದೇಶಕ ರಾಮಚಂದ್ರನ್ ಮತ್ತಿತರರು ಇದ್ದರು.
ನೂತನ ಮಾರ್ಗಗಳು
ಕುಂದಾಪುರದಿಂದ ಬೆಂಗಳೂರು (2), ಮಂಗಳೂರಿನಿಂದ ಬೆಂಗಳೂರು (2), ಕೆಂಪೇಗೌಡ ವಿಮಾನ ನಿಲ್ದಾಣ ಬೆಂಗಳೂರಿನಿಂದ ಕುಂದಾಪುರ (2), ಬೆಂಗಳೂರಿನಿಂದ ನೆಲ್ಲೂರು, ಹೈದರಾಬಾದ್, ಎರ್ನಾಕುಲಂ, ತ್ರಿಶೂರು, ಕೋಯಿಕ್ಕೋಡ್‌ಗೆ (ತಲಾ 2), ಬೆಂಗಳೂರಿನಿಂದ ವಿಜಯವಾಡ (4) ನಡುವೆ ಕಾರ್ಯಾಚರಣೆ ಮಾಡಲಿವೆ.