ಬೆಂಗಳೂರು: ಜೀವನದಲ್ಲಿ ತೃಪ್ತಿ ಇಲ್ಲದಿರುವುದೇ ಎಲ್ಲ ವಿಧದ ಭ್ರಷ್ಟಾಚಾರಕ್ಕೆ ಕಾರಣ ಎಂದು ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ ಹೆಗ್ಡೆ ಬೇಸರ ವ್ಯಕ್ತಪಡಿಸಿದ್ದಾರೆ. ಮುಕ್ತ ಫೌಂಡೇಶನ್, ನಗರದ ನಯನ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಭಾರತ ರತ್ನ ಸರ್ ಎಂ.ವಿಶ್ವೇಶ್ವರಯ್ಯ ಜಯಂತಿ ಕಾರ್ಯಕ್ರಮದಲ್ಲಿ ವಿವಿಧ ಕ್ಷೇತ್ರದ ಸಾಧಕರಿಗೆ “ವಿಶ್ವೇಶ್ವರಯ್ಯ ರತ್ನ’ ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದರು.
ನಾನು ಲೋಕಾಯುಕ್ತನಾಗಿ ಕಾರ್ಯನಿರ್ವಹಿಸಿದ ವೇಳೆ ಇಂತಹ ಹಲವು ಪ್ರಕರಣಗಳು ಬೆಳಕಿಗೆ ಬಂದಿವೆ. ಅಸಹಾಯಕ ಮಹಿಳೆಯೊಬ್ಬರಿಗೆ ಮುಂಬೈಯಲ್ಲಿ ನೆಲೆಸಿರುವ ಮಗ, 250 ರೂ. ಮನಿ ಆರ್ಡರ್ ಕಳುಹಿಸಿದಾಗ, ಅದನ್ನು ಆ ಮಹಿಳೆಯ ಮನೆಗೆ ತಲುಪಿಸುವ ಪೋಸ್ಟ್ ಮಾಸ್ಟರ್ ಶೇ.10ರಷ್ಟು ಕಮೀಷನ್‌ಗೆ ಬೇಡಿಕೆ ಇಡುವ ವಿಷಯ ಕೇಳಿ ಬೇಸರವಾಗಿತ್ತು. ದೇಶದಲ್ಲಿ ಭ್ರಷ್ಟಾಚಾರ ಆಳವಾಗಿ ಬೇರು ಬಿಟ್ಟಿರುವುದನ್ನು ಕಂಡು ಮನಸ್ಸಿಗೆ ದುಃಖವಾಯಿತು ಎಂದರು.
ನಮ್ಮ ಹಿರಿಯರು ಬಿಟ್ಟು ಹೋದ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡು, ನಾವೀಗ ಗೊಂದಲದ ಗೂಡಿನಲ್ಲಿ ಬದುಕು ಕಳೆಯುತ್ತಿದ್ದೇವೆ. ಹೀಗಾಗಿ ಮೌನವೀಯ ಮೌಲ್ಯಗಳನ್ನು ಕಾಪಾಡಿಕೊಳ್ಳುವ ಜತೆಗೆ ತೃಪ್ತಿಕರ ಜೀವನ ನಡೆಸುವಂತೆ ನ್ಯಾ.ಹೆಗ್ಡೆ ಸಲಹೆ ನೀಡಿದರು.
ಅಪಘಾತಗಳು ನಡೆದ ವೇಳೆ ಕೆಲವರು ಸಂಕಷ್ಟದಲ್ಲಿದ್ದವರಿಗೆ ಸಹಾಯ ಮಾಡಲು ಮುಂದಾಗದೆ ಮೊಬೈಲ್‌ನಲ್ಲಿ ಅಪಘಾತದ ದೃಶ್ಯಗಳನ್ನು ಸೆರೆಹಿಡಿಯಲು ಮುಂದಾಗುತ್ತಾರೆ. ಇದು ಮಾನವೀಯತೆಯ ಲಕ್ಷಣವಲ್ಲ. ಇಂತಹ ಸಂಸ್ಕೃತಿ ಮನುಷ್ಯ ಕುಲಕ್ಕೆ ಶೋಭೆ ತರುವುದಿಲ್ಲ. ನಾವು ಮಾನವೀಯತೆಯಿಂದ ಬದುಕುವುದನ್ನು ರೂಢಿಸಿಕೊಂಡು ಅಪಾಯದಲ್ಲಿದ್ದವರಿಗೆ ಸಹಾಯ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಮುಕ್ತ ಫೌಂಡೇಶನ್‌ನ ಕಾರ್ಯವನ್ನು ಶ್ಲಾ ಸಿದ ಅವರು, ನಮ್ಮ ಮುಂದೆ ಇನ್ನೂ ಹಲವು ಮುಂದಿ ಎಲೆ ಮರೆ ಕಾಯಿಯಂತೆ ಸಮಾಜ ಸೇವೆಯಲ್ಲಿ ತೊಡಗಿದ್ದು, ಅಂತವರನ್ನು ಗುರುತಿಸಿ ಗೌರವಿಸುವ ಕೆಲಸ ನಡೆಯಲಿ. ಹಾಗೆ ನಡೆದಾಗ ಮಾತ್ರ ಪ್ರಶಸ್ತಿ ಮೌಲ್ಯ ಹೆಚ್ಚುವುದರ ಜತಗೆ, ಸನ್ಮಾನಿಸಿಕೊಂಡವರ ಜವಬ್ದಾರಿ ಕೂಡ ಮತ್ತಷ್ಟು ಹೆಚ್ಚುತ್ತದೆ ಎಂದರು.
ಶಾಸಕಿ ಸೌಮ್ಯಾ ರೆಡ್ಡಿ ಮಾತನಾಡಿ, ದೇಶದಲ್ಲಿ ಭ್ರಷ್ಟಾಚಾರ ರೋಗದ ರೀತಿಯಲ್ಲಿ ಹಬ್ಬಿದ್ದು, ಇದರ ವಿರುದ್ಧ ಸಂಘಟಿತ ಹೋರಾಟ ಅಗತ್ಯವಿದೆ. ವಿದ್ಯಾವಂತರು ಕೂಡ ಇದನ್ನು ಪ್ರತಿಭಟಿಸದೇ ನೋಡಿಕೊಂಡು ಸುಮ್ಮನಿರುವುದು ಭ್ರಷ್ಟಾಚಾರ ಮತ್ತಷ್ಟು ಆಳವಾಗಿ ಬೇರು ಬಿಡಲು ಕಾರಣವಾಗಿದೆ ಎಂದು ಹೇಳಿದರು.
ಇದೇ ವೇಳೆ ಬೆಸ್ಕಾಂನ ನಿವೃತ್ತ ಇಂಜಿನಿಯರ್ ನಾಗೇಶ್ ಸೇರಿದಂತೆ ಹಲವರಿಗೆ ವಿಶ್ವೇಶ್ವರಯ್ಯ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಮಾಜಿ ಸಂಸದ ಶ್ರೀನಿವಾಸ್, ಪಾಲಿಕೆ ಸದಸ್ಯ ಅನ್ವರ್ ಪಾಷಾ, ಮುಕ್ತ ಫೌಂಡೇಶನ್‌ನ ಸಂಸ್ಥಾಪಕ ಅಧ್ಯಕ್ಷ ವಿ.ಗಿರೀಶ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.