ಅಶೋಕ ಬ್ಲೇಡ್- ಇದು ನಟ ನೀನಾಸಂ ಸತೀಶ್ ಅವರ ಡ್ರೀಮ್ ಪ್ರಾಜೆಕ್ಟ್. ಆದರೆ, ಈ ಚಿತ್ರದ ನಿರ್ದೇಶಕ ವಿನೋದ್ ದೊಂಡಾಳೆ ಅವರ ನಿಧನದ ನಂತರ ಸಹಜವಾಗಿಯೇ ಈ ಚಿತ್ರ ಮುಂದುವರೆಯುತ್ತಾ ಅಥವಾ ಅರ್ಧಕ್ಕೆ ನಿಂತು ಹೋಗುತ್ತಾ ಎಂಬ ಚರ್ಚೆ ನಡೆಯುತ್ತಿತ್ತು. ಈಗ ಈ ಚಿತ್ರಕ್ಕೆ ಮರುಚಾಲನೆ ಸಿಕ್ಕಿದೆ.
ನೀನಾಸಂ ಸತೀಶ್ ಹಾಗೂ ನಿರ್ಮಾಪಕರು ಸೇರಿ ಈ ಡ್ರೀಮ್ ಪ್ರಾಜೆಕ್ಟ್ ಅನ್ನು ಮುಂದುವರೆಸಲು ನಿರ್ಧರಿಸಿದ್ದಾರೆ. ಅಂದಹಾಗೆ, ಈ ಬಾರಿ ಚಿತ್ರದ ಟೈಟಲ್ ಕೂಡಾ ಬದಲಾಗಿದೆ. ಅಶೋಕ ಬ್ಲೇಡ್ ಬದಲು ಚಿತ್ರಕ್ಕೆ “ದಿ ರೈಸ್ ಆಫ್ ಅಶೋಕ’ ಎಂದು ಟೈಟಲ್ ಇಡಲಾಗಿದೆ.
ಎಲ್ಲಾ ಓಕೆ, ಸಿನಿಮಾದ ನಿರ್ದೇಶನ ಯಾರು ಮಾಡುತ್ತಾರೆ ಎಂಬ ಪ್ರಶ್ನೆ ಬರೋದು ಸಹಜ. ಅದಕ್ಕೆ ಉತ್ತರ ಮನು ಶೇಡ್ಗಾರ್. “ಕ್ಷೇತ್ರಪತಿ’, “ಅವತಾರ ಪುರುಷ’ ಸೇರಿದಂತೆ ಹಲವು ಸಿನಿಮಾಗಳಿಗೆ ಸಂಕಲನಕಾರರಾಗಿರುವ ಮನು ಆರಂಭದಿಂದಲೂ ನಿರ್ದೇಶಕ ವಿನೋದ್ ಅವರ ಜೊತೆ ಈ ಸಿನಿಮಾದಲ್ಲಿ ಕೆಲಸ ಮಾಡಿದವರು. ಹಾಗಾಗಿ, ಚಿತ್ರದ ಬಗ್ಗೆ ಅವರಿಗೆ ಚೆನ್ನಾಗಿ ಅರಿವಿದೆ. ಆ ಕಾರಣದಿಂದ ಉಳಿದ ಭಾಗದ ಚಿತ್ರೀಕರಣದ ಜವಾಬ್ದಾರಿಯನ್ನು ಮನು ಅವರು ವಹಿಸಿಕೊಂಡಿದ್ದಾರೆ.
ಈಗಾಗಲೇ ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದೆ. ಈಗ ಮತ್ತೆ ಚಿತ್ರೀಕರಣಕ್ಕೆ ಅಣಿಯಾಗಿದ್ದು, ಶೀಘ್ರದಲ್ಲಿ ಚಿತ್ರೀಕರಣ ಆರಂಭವಾಗಲಿದೆ. ಮೊದಲ ಹಂತವಾಗಿ ಜ.10ರಂದು ಚಿತ್ರದ ಮೋಷನ್ ಪೋಸ್ಟರ್ ಬಿಡುಗಡೆಯಾಗಲಿದೆ. ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ “ದಿ ರೈಸ್ ಆಫ್ ಅಶೋಕ’ ಬಿಡುಗಡೆಯಾಗಲಿದೆ. ಈ ಚಿತ್ರವನ್ನು ವೃದ್ಧಿ ಕ್ರಿಯೇಶನ್ಸ್ ಹಾಗೂ ಸತೀಶ್ ಪಿಕ್ಚರ್ ಹೌಸ್ ಜಂಟಿಯಾಗಿ ನಿರ್ಮಿಸುತ್ತಿದೆ. ಚಿತ್ರದಲ್ಲಿ ಬಿ.ಸುರೇಶ್, ಅಚ್ಯುತ್ ಕುಮಾರ್, ಸಂಪತ್ ಮೈತ್ರೇಯಾ ಸೇರಿದಂತೆ ಅನೇಕರು ನಟಿಸಿದ್ದಾರೆ.
ಭರ್ಜರಿ ನಿರೀಕ್ಷೆ: ನೀನಾಸಂ ಸತೀಶ್ ಈ ಚಿತ್ರದ ಮೇಲೆ ಭರ್ಜರಿ ನಿರೀಕ್ಷೆ ಇಟ್ಟಿದ್ದಾರೆ. ಈ ಕುರಿತು ಮಾತನಾಡುವ ಅವರು, “ಸಿನಿಮಾ ತುಂಬಾ ಚೆನ್ನಾಗಿ ಮೂಡಿಬಂದಿದೆ. ಇದು ವಿನೋದ್ ಅವರ ಕನಸು ಕೂಡಾ. ಒಂದು ವಿಭಿನ್ನ ಸಬ್ಜೆಕ್ಟ್‌ನ ಸಿನಿಮಾವಿದು. ಇದನ್ನು ಹಾಗೇ ಬಿಡಬಾರದು ಎಂದುಕೊಂಡು ನಾವು ಸೇರಿಕೊಂಡು ಮತ್ತೆ ಮುಂದುವರೆಸುತ್ತಿದ್ದೇವೆ. ಇಷ್ಟು ವರ್ಷದ ನನ್ನ ಕೆರಿಯರ್‌ನಲ್ಲಿ ಮಾಡದಂತಹ ಪಾತ್ರವನ್ನು ಮಾಡುತ್ತಿದ್ದೇನೆ. ಕನ್ನಡದ ಜೊತೆಗೆ ತಮಿಳು, ತೆಲುಗಿನಲ್ಲೂ ಈ ಚಿತ್ರವನ್ನು ಬಿಡುಗಡೆ ಮಾಡುವ ಉದ್ದೇಶವಿದೆ. ಶೇ 80ರಷ್ಟು ಚಿತ್ರೀಕರಣ ಪೂರ್ಣಗೊಂಡಿದ್ದು, ಉಳಿದ ಭಾಗದ ಚಿತ್ರೀಕರಣಕ್ಕೆ ರೆಡಿಯಾಗಿದ್ದೇವೆ. ಈ ವರ್ಷದ ಜುಲೈ ವೇಳೆಗೆ ಸಿನಿಮಾ ಬಿಡುಗಡೆ ಮಾಡುವ ಯೋಚನೆ ಇದೆ. ಈ ಸಿನಿಮಾ ಬಿಡುಗಡೆಯಾದ ಬಳಿಕ ನನಗೊಂದು ಹೊಸ ಇಮೇಜ್ ಸಿಗುವ ನಿರೀಕ್ಷೆ ಇದೆ’ ಎನ್ನುತ್ತಾರೆ.