ಛತ್ತೀಸ್ ಗಢ: ರಸ್ತೆ ನಿರ್ಮಾಣ ಕಾಮಗಾರಿಯಲ್ಲಿ ಸ್ಥಳೀಯ ಗುತ್ತಿಗೆದಾರನ ಭ್ರಷ್ಟಾಚಾರವನ್ನು ಬಯಲಿಗೆಳೆದ ಯೂಟ್ಯೂಬರ್ ಪತ್ರಕರ್ತನನ್ನು ಕೊ*ಲೆಗೈದಿರುವ ಆಘಾತಕಾರಿ ಘಟನೆ ಛತ್ತೀಸ್ ಗಢದ ಬಿಜಾಪುರ್ ಎಂಬಲ್ಲಿ ನಡೆದಿದ್ದು, ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಯೂಟ್ಯೂಬರ್ ಮುಕೇಶ್ ಚಂದ್ರಾಕರ್ ಅವರ ಶವ ಆರೋಪಿತ ಗುತ್ತಿಗೆದಾರ ಸುರೇಶ್ ಚಂದ್ರಾಕರ್ ಗೆ ಸೇರಿದ್ದ ನೀರಿನ ಟ್ಯಾಂಕ್ ನೊಳಗೆ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ವರದಿಯ ಪ್ರಕಾರ, ಜನವರಿ 1ರಂದು ಮುಕೇಶ್ ಕಾಣೆಯಾಗಿರುವುದಾಗಿ ಸಹೋದರ ಪೊಲೀಸರಿಗೆ ದೂರು ನೀಡಿದ್ದರು. ನಂತರ ಪೊಲೀಸರು ತನಿಖೆ ನಡೆಸಲು ಆರಂಭಿಸಿದ್ದರು. ನಂತರ ಪೊಲೀಸರು ಮುಕೇಶನ ಮೊಬೈಲ್ ನ ಕೊನೆಯ ಕರೆಯ ಸ್ಥಳವನ್ನು ಪತ್ತೆ ಹಚ್ಚಿದಾಗ, ಅದು ಗುತ್ತಿಗೆದಾರನಿಗೆ ಸೇರಿದ ಸ್ಥಳ ಎಂಬುದು ದೃಢಪಟ್ಟಿತ್ತು ಎಂದು ವರದಿ ತಿಳಿಸಿದೆ.
ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ಅಲ್ಲಿ ಏನೂ ಪತ್ತೆಯಾಗಿಲ್ಲವಾಗಿತ್ತು. ಆದರೆ ಹೊಸದಾಗಿ ಕಟ್ಟಿಸಿದ್ದ ನೀರಿನ ಟ್ಯಾಂಕ್ ಅನ್ನು ಮುಚ್ಚಿರುವುದನ್ನು ಗಮನಿಸಿದ ಪೊಲೀಸರಿಗೆ ಸಂಶಯ ಮೂಡಿಸಿತ್ತು. ಬಳಿಕ ನೀರಿನ ಟ್ಯಾಂಕ್ ಪರಿಶೀಲಿಸಿದಾಗ ಮುಕೇಶ್ ಶವ ಅದರೊಳಗಿದ್ದು, ದೇಹ ಕೊಳೆತ ಸ್ಥಿತಿಯಲ್ಲಿತ್ತು ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ಆತ ಧರಿಸಿದ್ದ ಟೀ ಶರ್ಟ್ ಗಮನಿಸಿ ಕುಟುಂಬ ಸದಸ್ಯರು ಯೂಟ್ಯೂಬರ್ ಗುರುತು ಪತ್ತೆ ಹಚ್ಚಿರುವುದಾಗಿ ವರದಿ ವಿವರಿಸಿದೆ. ಈ ಪ್ರಕರಣದಲ್ಲಿ ಗುತ್ತಿಗೆದಾರ ಪ್ರಮುಖ ಶಂಕಿತ ಆರೋಪಿಯಾಗಿದ್ದಾನೆ ಎಂದು ವರದಿ ತಿಳಿಸಿದೆ.
ಯೂಟ್ಯೂಬ್ ಚಾನೆಲ್ ಮೂಲಕ ಮುಕೇಶ್ ಜನಪ್ರಿಯನಾಗಿದ್ದ. ಮುಕೇಶ್ ನಿಧನಕ್ಕೆ ಛತ್ತೀಸ್ ಗಢ್ ಮುಖ್ಯಮಂತ್ರಿ ಸಂತಾಪ ಸೂಚಿಸಿದ್ದಾರೆ. ಅಲ್ಲದೇ ಪ್ರಕರಣದ ಬಗ್ಗೆ ತನಿಖೆ ನಡೆಸುವಂತೆ ಆದೇಶಿಸಿದ್ದಾರೆ.