ಮುಂಬೈ: ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವ ಏಕೈಕ ವ್ಯಕ್ತಿ ಶರದ್ ಪವಾರ್ ಎಂದು ಎನ್ ಸಿಪಿಯ ಪ್ರಫುಲ್ ಪಟೇಲ್ ಹೇಳಿಕೆ ನೀಡಿದ್ದು, ಮತ್ತೊಂದೆಡೆ ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ ಮುಖವಾಣಿ ಸಾಮ್ನಾದಲ್ಲಿ “ಯುಪಿಎ ಸರ್ಕಾರ ಮೋದಿ ಮತ್ತು ಶಾ ವಿರುದ್ಧ ಸಕ್ರಿಯವಾಗಿದ್ದ ಸಂದರ್ಭದಲ್ಲಿ, ಪವಾರ್ ಮತ್ತು ಮೋದಿ ನಡುವಿನ ಉತ್ತಮ ಸಂವಹನದಿಂದಾಗಿ ಅಮಿತ್ ಶಾಗೆ ಗೋಧ್ರಾ ಪ್ರಕರಣದಲ್ಲಿ ಜಾಮೀನು ಸಿಕ್ಕಿರುವುದಾಗಿ ಆರೋಪಿಸಿದೆ.
ಇದನ್ನೂ ಓದಿ:“ನೀರು ಕೊಡೋ ಮಗನೇ” ಎಂದು ಏಕವಚನದಲ್ಲಿ ಕೇಳಿದ್ದಕ್ಕೆ ಚೂರಿ ಇರಿದು ಕೊಲೆ
ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನಾ, ಕಾಂಗ್ರೆಸ್ ಮತ್ತು ಎನ್ ಸಿಪಿ ಮೈತ್ರಿಕೂಟ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸಿತ್ತು. ಇದೀಗ ಮೈತ್ರಿಕೂಟ ಅಧಿಕಾರದಿಂದ ಕೆಳಗಿಳಿದ ನಂತರ ಉದ್ಧವ್ ಪಕ್ಷದ ಮುಖವಾಣಿ ಸಾಮ್ನಾದ ಸಂಪಾದಕರಾಗಿದ್ದಾರೆ.
ಪವಾರ್ ಜತೆಗಿನ ಪ್ರಧಾನಿ ಮೋದಿ, ಶಾ ಸಂವಹನದ ಬೇಡಿಕೆಯಿಂದಾಗಿ ಎನ್ ಸಿಪಿ ನಾಯಕತ್ವಕ್ಕೆ ಇರಿಸು ಮುರಿಸು ಉಂಟಾಗಿತ್ತು ಎಂದು ಸಾಮ್ನಾದ ಸಂಪಾದಕೀಯದಲ್ಲಿ ಉಲ್ಲೇಖಿಸಿದ್ದು, ಅಮಿತ್ ಶಾ ಪದೇ, ಪದೇ ಮಹಾರಾಷ್ಟ್ರದ ವಿರುದ್ಧ ವಾಗ್ದಾಳಿ ನಡೆಸುತ್ತಿದ್ದಾರೆ. ಯುಪಿಎ ಸರ್ಕಾರ ಮೋದಿ ಮತ್ತು ಶಾ ವಿರುದ್ಧ ಸಕ್ರಿಯವಾಗಿತ್ತು. ಆದರೆ ಪವಾರ್ ಮತ್ತು ಶಾ ನಡುವಿನ ಉತ್ತಮ ಸಂವಹನದಿಂದಾಗಿ ಗೋಧ್ರಾ ಪ್ರಕರಣದಲ್ಲಿ ಶಾಗೆ ಜಾಮೀನು ಸಿಕ್ಕಿತ್ತು ಎಂದು ದೂರಿದೆ.
ಈ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಎನ್ ಸಿಪಿ ಪ್ರಧಾನ ಕಾರ್ಯದರ್ಶಿ ಪ್ರಫುಲ್ ಪಟೇಲ್ ತಿರುಗೇಟು ನೀಡಿದ್ದಾರೆ. ಅಮಿತ್ ಶಾಗೆ ಸಹಾಯ ಮಾಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದ್ದಾರೆ.