ಹೊಸದಿಲ್ಲಿ/ಬೆಂಗಳೂರು: ಮಹಾರಾಷ್ಟ್ರ ಚುನಾವಣೆಯಲ್ಲಿ ಎಂವಿಎ ಸೋಲಿಗೆ ಕಾರಣ ಮಾಜಿ ಸಿಎಂ ಉದ್ಧವ್ ಠಾಕ್ರೆ ಮತ್ತು ಎನ್ಸಿಪಿಯ ಶರದ್ ಪವಾರ್ ಕಾರಣ ಎಂದು ಕಾಂಗ್ರೆಸ್ ಆರೋಪಿಸಿದೆ.
ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ವೀಕ್ಷಕರಾಗಿರುವ ಕರ್ನಾಟಕದ ಗೃಹ ಸಚಿವ ಡಾ| ಜಿ. ಪರಮೇಶ್ವರ್ ಮಾತನಾಡಿ “ಚುನಾವಣೆಯಲ್ಲಿ ಉದ್ಧವ್ ಠಾಕ್ರೆ ಮತ್ತು ಶರದ್ ಪವಾರ್ ಯೋಜನೆಯಂತೆ ಪ್ರಚಾರ ಮಾಡಲಿಲ್ಲ. “ಲಾಡ್ಲಿ ಬೆಹನ್’ ಯೋಜನೆ ಆಡಳಿತ ಪಕ್ಷಕ್ಕೆ ವರವಾಗಿ ಪರಿಣಮಿಸಿತು. ನಾವು ಕೊನೇ ಕ್ಷಣದಲ್ಲಿ ಟಿಕೆಟ್ ಹಂಚಿಕೆ ಮಾಡಿದರೂ ಮೈತ್ರಿಕೂಟದಲ್ಲಿ ಒಂದಷ್ಟು ಭಿನ್ನಾಭಿಪ್ರಾಯವಿತ್ತು. ಶರದ್ ಹಾಗೂ ಉದ್ಧವ್ ಮೈತ್ರಿಯ ಯೋಜನೆಗಳಿಗೆ ತಕ್ಕಂತೆ ನಡೆದುಕೊಳ್ಳಲಿಲ್ಲ ಎಂದರು.
ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಸೀಟು ಗೆಲ್ಲ ಬೇಕಿತ್ತು ಎಂದು ಒಪ್ಪಿಕೊಂಡಿರುವ ಪರಮೇಶ್ವರ್, ವಿದರ್ಭದಲ್ಲಿ ಹೆಚ್ಚಿನ ಸೀಟು ನಿರೀಕ್ಷಿಸಿದ್ದೆವು. 50 ಕ್ಷೇತ್ರ ಗೆಲ್ಲುವ ನಿರೀಕ್ಷೆ ಇತ್ತು. ಆದರೆ ಗೆದ್ದಿದ್ದು ಕೇವಲ 8 ಸೀಟು ಮಾತ್ರ. 105 ಕ್ಷೇತ್ರಗಳ ಪೈಕಿ 60ರಿಂದ 70 ಸೀಟು ಗೆಲ್ಲ ಬಹುದು ಎಂದು ಅಂದಾಜಿಸಲಾಗಿತ್ತು. ಈ ಹಿನ್ನಡೆಗೆ ಮೈತ್ರಿಯಲ್ಲಿ ಸಮನ್ವಯ ಕೊರತೆ ಕಾರಣ ಎಂದವರು ಹೇಳಿದ್ದಾರೆ.
ಎನ್ಸಿಪಿ ಯಾರು ಸ್ಥಾಪಿಸಿದ್ದು ಎಲ್ಲರಿಗೂ ಗೊತ್ತು: ಶರದ್ ಪವಾರ್
ಕರಾಡ್: ಲಡ್ಕಿ ಬೆಹನ್ ಯೋಜನೆ, ಮಹಿಳಾ ಮತ ಹೆಚ್ಚಳ ಮತ್ತು ಧಾರ್ಮಿಕ ಧ್ರವೀಕರಣದಿಂದಾಗಿ ಬಿಜೆಪಿ ನೇತೃತ್ವದ ಮಹಾಯುತಿ ಗೆಲುವು ಸಾಧಿಸಿದೆ ಎಂದ ಎನ್ಸಿಪಿ (ಎಸ್ಪಿ) ನಾಯಕ ಶರದ್ ಪವಾರ್ ಹೇಳಿದ್ದಾರೆ.
ಮಹಾರಾಷ್ಟ್ರ ದಲ್ಲಿ ಕರಾಡ್ನಲ್ಲಿ ಮಾತನಾಡಿದ ಅವರು, ತಮ್ಮ ಪಕ್ಷಕ್ಕಿಂತ ಎನ್ಸಿಪಿ(ಅಜಿತ್) ಹೆಚ್ಚು ಸೀಟುಗಳನ್ನು ಗೆದ್ದಿದೆ. ಆದರೆ, ಎನ್ಸಿಪಿಯನ್ನು ಸ್ಥಾಪಿಸಿದ್ದು ಯಾರು ಎನ್ನುವುದು ಎಲ್ಲರಿಗೂ ಗೊತ್ತು ಎಂದು ಹೇಳಿದ್ದಾರೆ. ಮಹಾ ವಿಕಾಸ್ ಅಘಾಡಿ ಸಾಕಷ್ಟು ಪ್ರಯತ್ನಪಟ್ಟರೂ ನಿರೀಕ್ಷಿತ ಫಲಿತಾಂಶ ಬರಲಿಲ್ಲ. ಹೀಗಿದ್ದೂ, ಪ್ರಚಾರದ ವೇಳೆ ಜನರಿಂದ ಉತ್ತಮ ಸ್ಪಂದನೆ ದೊರೆತಿತ್ತು ಎಂದು ಶರದ್ ಪವಾರ್ ಹೇಳಿದ್ದಾರೆ.