ಮೈಸೂರು: ಭಾರೀ ಜಿದ್ದಾಜಿದ್ದಿನಿಂದ ಕೂಡಿದ ನಂಜನಗೂಡು ಉಪ ಚುನಾವಣೆಯ ಮತ ಎಣಿಕೆಗೆ ಇನ್ನೊಂದೇ ದಿನ ಬಾಕಿ ಇದೆ. ಗುರುವಾರ ಬೆಳಗ್ಗೆ 8 ಗಂಟೆಯಿಂದ ನಂಜನಗೂಡಿನ ಜೆಎಸ್‌ಎಸ್ ಪ್ರಥಮದರ್ಜೆ ಕಾಲೇಜಿನಲ್ಲಿ ಮತ ಎಣಿಕೆ ನಡೆಯಲಿದ್ದು, ಮತಯಂತ್ರ ಬಳಸಿರುವುದರಿಂದ ಮಧ್ಯಾಹ್ನದ ವೇಳೆಗೆ ಫಲಿತಾಂಶ ಹೊರಬೀಳುವ ಸಾಧ್ಯತೆ ಇದೆ.
ಉಪ ಚುನಾವಣೆಯ ಮತದಾನ ಹಾಗೂ ಮತ ಎಣಿಕೆಗೆ ಮಧ್ಯೆ ಮೂರು ದಿನಗಳ ಬಿಡುವು ದೊರೆತಿರುವುದರಿಂದ ಬೆಟ್ಟಿಂಗ್ ದಂಧೆಯ ಜತೆಗೆ ಉಪ ಚುನಾವಣೆಯಲ್ಲಿ ಹಣದ ಹೊಳೆ ಹರಿಸಿದ ಬಗ್ಗೆ ಯಾವ ಮುಖಂಡ ಎಷ್ಟು ನುಂಗಿದ, ಮತದಾರರಿಗೆ ಯಾವ ಪಕ್ಷ ಎಷ್ಟು ಹಣ ನೀಡಿತು ಎಂಬ ಚರ್ಚೆಗಳು ನಂಜನಗೂಡಿನ ಹಳ್ಳಿಗಳಲ್ಲಿ ಸಾಂಗವಾಗಿ ನಡೆಯುತ್ತಿವೆ. ಜತೆಗೆ ಚುನಾವಣಾ ಫಲಿತಾಂಶದ ಬಗ್ಗೆ ರಾಜಕೀಯ ಆಸಕ್ತರುಗಳು ತಮ್ಮದೇ ಆದ ಲೆಕ್ಕಾಚಾರಗಳಲ್ಲಿ ತೊಡಗಿದ್ದು, ಸಾಮಾಜಿಕ ಜಾಲತಾಣಗಳಲ್ಲೂ ಈ ಕುರಿತು ಚರ್ಚೆಗಳು ನಡೆದಿವೆ. ಕಾಂಗ್ರೆಸ್ ಪಕ್ಷದ ಹೆಸರಲ್ಲಿ ಗುಪ್ತಚರ ವರದಿ ಎಂದು ನಂಜನಗೂಡು- ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಚುನಾವಣಾ ಪೂರ್ವದಲ್ಲೇ ಮತದಾನದ ಗ್ರಾಫಿಕ್ಸ್ ಹರಿಬಿಡಲಾಗಿತ್ತು.
ಅದರಂತೆ ನಂಜನಗೂಡು ಕ್ಷೇತ್ರದಲ್ಲಿ ಕಾಂಗ್ರೆಸ್ ಶೇ.54, ಬಿಜೆಪಿ ಶೇ.40 ಹಾಗೂ ಇತರರು ಶೇ.6ರಷ್ಟು ಮತಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಗುಂಡ್ಲುಪೇಟೆಯಲ್ಲಿ ಕಾಂಗ್ರೆಸ್ ಶೇ.51, ಬಿಜೆಪಿ ಶೇ.41 ಹಾಗೂ ಇತರರು ಶೇ.8ರಷ್ಟು ಮತಪಡೆಯಲಿದ್ದಾರೆ ಎಂದು ಹೇಳಲಾಗಿತ್ತು. ಮತದಾನದ ನಂತರ ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿರುವ ಬಿಜೆಪಿ ಪಾಳಯ ನಂಜನಗೂಡು ಕ್ಷೇತ್ರದಲ್ಲಿ ನಡೆದಿರುವ ಒಟ್ಟಾರೆ ಮತದಾನದ ಪ್ರಮಾಣವನ್ನು ಜಾತೀವಾರು ಲೆಕ್ಕಾಚಾರದಿಂದ ಅಳೆದು ಏಳು ಸಾವಿರ ಮತಗಳ ಅಂತರದಿಂದ ಗೆಲುವು ನಮ್ಮದೇ ಎಂದು ಸಾಮಾಜಿಕ ಜಾಲತಾಣದಲ್ಲಿ ಹಾಕಿಕೊಂಡು ಬೀಗುತ್ತಿದೆ.
ಅವರ ಲೆಕ್ಕಾಚಾರದ ಪ್ರಕಾರ ಒಟ್ಟು ಚಲಾಯಿತ ಮತಗಳು 156531. ಹೀಗಾಗಿ ಗೆಲುವಿಗೆ ಬೇಕಿರುವುದು 78266 ಮತಗಳು. ಜಾತೀವಾರು ಮತದಾನದ ಪ್ರಕಾರ ಲಿಂಗಾಯಿತರು (ಶೇ.86), ಎಸ್.ಸಿ( ಶೇ.84), ಎಸ್‌ಟಿ(ಶೇ.80), ಉಪ್ಪಾರ (ಶೇ.79) ಹಾಗೂ ಇತರೆ ಶೇ.52 ಮತದಾನವಾಗಿದೆ. ಲಿಂಗಾಯಿತರಲ್ಲಿ 48160 ಮಂದಿ ಮತದಾನ ಮಾಡಿದ್ದು ಈ ಪೈಕಿ ಶೇ.30ರಷ್ಟು (14448 ಮತಗಳು) ಕಾಂಗ್ರೆಸ್ ಪಾಲಾಗಲಿದೆ. ಲಿಂಗಾಯಿತರ ಶೇ.70ರಷ್ಟು ಮತಗಳನ್ನು (33712 ಮತ) ಬಿಜೆಪಿ ನಿರೀಕ್ಷಿಸಿದೆ. ಪ. ಜಾತಿಯ 42000 ಮತದಾರರು ಮತದಾನ ಮಾಡಿದ್ದು, ಇದರಲ್ಲಿ 12600 (ಶೇ.30) ಕಾಂಗ್ರೆಸ್ ಪಾಲಾಗಿದ್ದರೆ, ಬಿಜೆಪಿ 29400 (ಶೇ.70) ಮತಗಳನ್ನು ನಿರೀಕ್ಷಿಸಿದೆ.
ಪರಿಶಿಷ್ಟ ಪಂಗಡದ 21600 ಮಂದಿ ಮತದಾನ ಮಾಡಿದ್ದು, ಇದರಲ್ಲಿ ಕಾಂಗ್ರೆಸ್ 11880 (ಶೇ.65), ಬಿಜೆಪಿ 9720 (ಶೇ.45) ಮತಗಳನ್ನು ನಿರೀಕ್ಷಿಸಿದೆ. ಇನ್ನು ಉಪ್ಪಾರ ಸಮುದಾಯದ 18170 ಮಂದಿ ಮತದಾನ ಮಾಡಿದ್ದು, ಇದರಲ್ಲಿ 12340 (ಶೇ.70) ಕಾಂಗ್ರೆಸ್ ಪಾಲಾಗಿದ್ದರೆ, 5451 (ಶೇ.30) ಮತಗಳನ್ನು ಬಿಜೆಪಿ ನಿರೀಕ್ಷಿಸಿದೆ. ಇತರೆ ಸಮುದಾಯಗಳವರ 28600 ಮತದಾನದ ಪೈಕಿ ಕಾಂಗ್ರೆಸ್ 24310 (ಶೇ.85) ಹಾಗೂ ಬಿಜೆಪಿ 4290 (ಶೇ.15) ಮತಗಳನ್ನು ನಿರೀಕ್ಷಿಸಿದೆ. ಈ ಲೆಕ್ಕಾಚಾರದ ಪ್ರಕಾರ ಕಾಂಗ್ರೆಸ್ 75967 ಮತಗಳನ್ನು ನಿರೀಕ್ಷಿಸಿದ್ದರೆ, ಬಿಜೆಪಿ 82573 ಮತಗಳನ್ನು ನಿರೀಕ್ಷಿಸಿದೆ ಎಂದು ಹೇಳಲಾಗಿದೆ.
3 ಪ್ರತ್ಯೇಕ ವರದಿ: ಜತೆಗೆ ಉಪ ಚುನಾವಣೆ ಫಲಿತಾಂಶದ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ತಮ್ಮದೇ ಆದ ರೀತಿಯಲ್ಲಿ ಮೂರು ಪ್ರತ್ಯೇಕ ವರದಿಗಳನ್ನು ಪಡೆದಿವೆ ಎಂದು ಹೇಳಲಾಗುತ್ತಿದೆ.ರಾಜ್ಯ ಗುಪ್ತಚರ ಇಲಾಖೆ ವರದಿ ಪ್ರಕಾರ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ – ಬಿಜೆಪಿ ನಡುವೆ ತೀವ್ರ ಪೈಪೋಟಿ ಇದೆ. ಆದರೆ, ಅಂತಿಮವಾಗಿ ಎರಡೂ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳು ಗೆಲುವು ಸಾಧಿಸಲಿದ್ದಾರೆ ಎಂದು ಹೇಳಲಾಗಿದೆ ಎಂದು ತಿಳಿದುಬಂದಿದೆ. ಇನ್ನು ಕೇಂದ್ರ ಗುಪ್ತಚರ ಸಂಸ್ಥೆ ಹಾಗೂ ಬಿಜೆಪಿಯ ಬೂತ್ ಮಟ್ಟದ ಏಜೆಂಟರ ವರದಿಯ ಪ್ರಕಾರ ನಂಜನಗೂಡು-ಗುಂಡ್ಲುಪೇಟೆ ಎರಡೂ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳು ಗೆಲ್ಲಲಿದ್ದಾರೆ ಎಂದು ಹೇಳಲಾಗಿದೆ ಎಂದು ತಿಳಿದುಬಂದಿದೆ. ಈ ಎಲ್ಲಾ ಲೆಕ್ಕಾಚಾರಗಳು ಏನೇ ಇದ್ದರೂ ಅಧಿಕೃತ ಫಲಿತಾಂಶಕ್ಕೆ ಗುರುವಾರದವರೆಗೆ ಕಾಯಲೇಬೇಕಿದೆ.
* ಗಿರೀಶ್ ಹುಣಸೂರು