ನವದೆಹಲಿ: ಉಪ ರಾಷ್ಟ್ರಪತಿ, ರಾಜ್ಯಸಭಾ ಸಭಾಪತಿ ಜಗದೀಪ್ ಧನ್‌ಕರ್ ವಿರುದ್ಧ ಅವಿಶ್ವಾಸ ನಿರ್ಣಯ ಮಂಡಿಸುವುದಾಕ್ಕಾಗಿ ಕಾಂಗ್ರೆಸ್ ನೇತೃತ್ವದ ಇಂಡಿಯಾ ಒಕ್ಕೂಟದ ಪ್ರತಿಪಕ್ಷಗಳು ಮಂಗಳವಾರ ರಾಜ್ಯಸಭಾ ಕಾರ್ಯದರ್ಶಿ ಪಿ.ಸಿ. ಮೋದಿಗೆ ನೋಟಿಸ್ ಸಲ್ಲಿಕೆ ಮಾಡಿವೆ. ರಾಜ್ಯಸಭೆಯ 72 ವರ್ಷಗಳ ಇತಿಹಾಸದಲ್ಲೇ ಸಭಾಪತಿಗಳ ವಿರುದ್ಧ ಇಂಥ ಪ್ರಸ್ತಾಪ ಸಲ್ಲಿಸಿರುವುದು ಇದೇ ಮೊದಲು.
ಧನಕರ್ ಪ್ರತಿಪಕ್ಷಗಳ ನಾಯಕರೊಂದಿಗೆ ಪದೇ ಪದೇ ಘರ್ಷಣೆ ನಡೆಸುತ್ತಾರೆ ಜತೆಗೆ ಪಕ್ಷಪಾತಿಯಾಗಿ ವರ್ತಿಸುತ್ತಾರೆ ಎಂದು ಕಾರಣ ನೀಡಿ ಪ್ರತಿಪಕ್ಷಗಳ ಪರವಾಗಿ ಕಾಂಗ್ರೆಸ್ ನಾಯಕರಾದ ಜೈರಾಂ ರಮೇಶ್, ಕರ್ನಾಟಕದ ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್ ನೋಟಿಸ್ ಸಲ್ಲಿಸಿದ್ದಾರೆ. ಅದರಲ್ಲಿ ವಿಪಕ್ಷ ನಾಯಕರ 60ಕ್ಕೂ ಅಧಿಕ ಸಂಸದರ ಸಹಿಯನ್ನು ಒಳಗೊಂಡಿದೆ.
ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಪ್ರಮುಖ ನಾಯಕರು ಸಹಿ ಹಾಕಿಲ್ಲ ಎಂದು ಮೂಲಗಳು ತಿಳಿಸಿವೆ. ಗೊತ್ತುವಳಿ ಮಂಡಿಸುವ 14ದಿನಗಳ ಮುನ್ನವೇ ಈ ನೋಟಿಸ್ ಸಲ್ಲಿಸಬೇಕಿದ್ದು, ಬಳಿಕ ಉಪ ಸಭಾಪತಿಗಳು ಇದಕ್ಕೆ ಅನುಮೋದನೆ ನೀಡಿದರಷ್ಟೇ ಗೊತ್ತುವಳಿ ಮಂಡಿಸಲು ಸಾಧ್ಯವಾಗಲಿದೆ.
ಈ ಹಿಂದೆ ಲೋಕಸಭಾ ಸ್ಪೀಕರ್‌ಗಳಾಗಿದ್ದ ಜಿ.ವಿ.ಮಾವಳಂಕರ್, ಹುಕುಂ ಸಿಂಗ್, ಬಲರಾಂ ಜಾಖರ್ ವಿರುದ್ಧ ಅವಿಶ್ವಾಸ ಗೊತ್ತು ವಳಿ ಮಂಡಿಸಲಾಗಿತ್ತು. ಆದರೆ, ರಾಜ್ಯಸಭೆಯ ಇತಿಹಾಸದಲ್ಲಿ ಸಭಾಪತಿ ವಿರುದ್ಧ ಈ ಪ್ರಕ್ರಿಯೆ ನಡೆದಿರಲಿಲ್ಲ.
ರಾಜ್ಯಸಭೆಯಲ್ಲಿ ಎನ್‌ಡಿಎಗೆ ಬಹುಮತವಿದೆ. ಅವಿಶ್ವಾಸ ನಿರ್ಣಯ ಮಂಡನೆ ತಿರಸ್ಕರಿಸಲಾಗುವುದು
– ಕಿರಿಣ್ ರಿಜಿಜು, ಸಂಸದೀಯ ವ್ಯವಹಾರಗಳ ಸಚಿವ