ರಾಯಚೂರು: ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ) ಹುದ್ದೆಯ ಪರೀಕ್ಷೆ ಪ್ರಶ್ನೆಪತ್ರಿಕೆ ವಿತರಣೆ ತಡವಾಗಿದ್ದಕ್ಕೆ ಪರೀಕ್ಷಾರ್ಥಿಗಳು ಪರೀಕ್ಷೆ ಬಹಿಷ್ಕರಿಸಿ ಪ್ರತಿಭಟನೆ ಮಾಡಿದ್ದ ಘಟನೆಗೆ ಸಂಬಂ ಧಿಸಿದ ವೀಡಿಯೋ ಈಗ ವೈರಲ್ ಆಗಿದ್ದು, ಸಂಚಲನ ಮೂಡಿಸಿದೆ.
ಸಿಂಧನೂರಿನ ಪ್ರಥಮ ದರ್ಜೆ ಕಾಲೇಜಿನಲ್ಲಿ ಕಳೆದ ನ. 17ರಂದು ಈ ಪರೀಕ್ಷೆ ನಡೆದಿತ್ತು. ಕೇಂದ್ರದ ಮುಖ್ಯಸ್ಥರು ಒಂದು ಕೋಣೆಗೆ 24 ಪ್ರಶ್ನೆಪತ್ರಿಕೆಗಳ ಬದಲಿಗೆ 12 ಮಾತ್ರ ವಿತರಿಸಿದ್ದರು. ವಿದ್ಯಾರ್ಥಿಗಳ ಮುಂದೆ ತೆರೆಯಬೇಕಿದ್ದ ಲಕೋಟೆಯನ್ನು ಮೊದಲೇ ತೆರೆಯಲಾಗಿತ್ತು. ಅನಂತರ ಉಳಿದ 12 ಪ್ರಶ್ನೆಪತ್ರಿಕೆ ವಿತರಿಸಲಾಗಿತ್ತು. ಇದು ಸಾಕಷ್ಟು ಅನುಮಾನಕ್ಕೆಡೆ ಮಾಡಿದೆ ಎಂದು ಪರೀಕ್ಷಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದರು. ಪ್ರಶ್ನೆ ಪತ್ರಿಕೆ ಸಿಕ್ಕಿದವರಲ್ಲೂ ಪರೀಕ್ಷೆ ಬರೆಯದಂತೆ ಸೂಚಿಸಿ ಪರೀಕ್ಷೆ ಬಹಿಷ್ಕರಿಸಿದ್ದರು ಹಾಗೂ ರಸ್ತೆ ಸಂಚಾರ ತಡೆದು ಪ್ರತಿಭಟನೆ ನಡೆಸಿದ್ದರು.
ಆಗ ಪರೀûಾರ್ಥಿಯೊಬ್ಬರು ಪ್ರಶ್ನೆಪತ್ರಿಕೆಗ ಳನ್ನು ತರುತ್ತಿದ್ದ ಸಿಬಂದಿಯನ್ನು ಪ್ರಶ್ನಿಸುತ್ತಲೇ ಮಾಡಿರುವ ವೀಡಿಯೋವನ್ನು ಹರಿಬಿಟ್ಟಿದ್ದು ವೈರಲ್ ಆಗುತ್ತಿದೆ. ಪ್ರಶ್ನೆಪತ್ರಿಕೆಗಳನ್ನು ಎಲ್ಲಿಂದ ತರುತ್ತಿದ್ದೀರಿ. ಈಗ ಸಮಯ ಎಷ್ಟಾಗಿದೆ ಎಂದು ಕೊಠಡಿ ಮೇಲ್ವಿಚಾಕರನ್ನು ಪ್ರಶ್ನಿಸಿದಾಗ ಅವರು 10.45 ಆಗಿದೆ ಎಂದು ತಿಳಿಸಿದ್ದಾರೆ. ಮೊದಲು ನೀಡಿದ ಬಂಡಲ್‌ನಲ್ಲಿ 12 ಮಾತ್ರ ಕೊಡಲಾಗಿತ್ತು.
ಉಳಿದ ಪತ್ರಿಕೆ ಈಗ ನೀಡಿದ್ದಾರೆ ಎಂದು ತಿಳಿಸಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪರೀûಾರ್ಥಿ ಪ್ರಶ್ನಿಸಿದಾಗ ಉತ್ತರಿಸಲಾಗದೆ ರೂಮ್ ಸೂಪರ್‌ವೈಸರ್‌ಗಳು ತಡಬಡಾಯಿಸಿ ದ್ದಾರೆ. ನಮಗೇನು ಗೊತ್ತಿಲ್ಲ. ಕೇಂದ್ರದ ಮುಖ್ಯಸ್ಥರು ಕೊಟ್ಟಿದ್ದಾರೆ ಎಂದು ತಿಳಿಸಿದ್ದಾರೆ.
ಈಗಾಗಲೇ ಸಾಕಷ್ಟು ಸುದ್ದಿಯಾಗಿರುವ ಈ ಘಟನೆಯ ತನಿಖೆಗೂ ಸರಕಾರ ಮುಂದಾಗಿದೆ. ಕೆಪಿಎಸ್ಸಿಯಿಂದ ಮೂವರ ನೇತೃತ್ವದಲ್ಲಿ ಸಮಿತಿ ಕೂಡ ರಚಿಸಲಾಗಿದೆ.