Advertisement

ರಾಮಮಂದಿರ ಅಡಿಯಲ್ಲಿ “ತಾಮ್ರ ಫ‌ಲಕ’ ; ಭವಿಷ್ಯದಲ್ಲಿ ವಿವಾದ ಸೃಷ್ಟಿಯಾಗದಂತೆ ಇತಿಹಾಸ ಫ‌ಲಕ

09:01 AM Jul 27, 2020 | mahesh |

ಹೊಸದಿಲ್ಲಿ: ಅಯೋಧ್ಯೆಯಲ್ಲಿ ಶೀಘ್ರ ನಿರ್ಮಾಣವಾಗಲಿರುವ ರಾಮ ಮಂದಿರದ ಜಾಗದಿಂದ ಸುಮಾರು 2,000 ಅಡಿ ಆಳದಲ್ಲಿ ಬೃಹತ್‌ ತಾಮ್ರ ಫ‌ಲಕವೊಂದರ ಮೇಲೆ ರಾಮಜನ್ಮ ಭೂಮಿ ವಿವಾದದ ಇತಿಹಾಸ ಇವೆಲ್ಲದರ ಮಾಹಿತಿಯನ್ನು ಕೆತ್ತಿಸಿ, ಅದನ್ನು ಹುದುಗಿಡಲು ನಿರ್ಧರಿಸಲಾಗಿದೆ ಎಂದು ರಾಮಜನ್ಮಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್‌ನ ಸದಸ್ಯರಾದ ಕಮಲೇಶ್ವರ್‌ ಚೌಪಾಲ್‌ ತಿಳಿಸಿದ್ದಾರೆ.

Advertisement

“ರಾಮ ಜನ್ಮಭೂಮಿ ಇತಿಹಾಸ, ಕಾಲ ಸರಿದಂತೆ ಈ ವಿವಾದದ ನೆರಳಲ್ಲಿ ಜರಗಿದ ಘಟನೆಗಳು, ಕಾಲಾನುಕಾಲಕ್ಕೆ ಕೈಗೊಳ್ಳಲಾದ ನಿರ್ಣಯಗಳು, ಜಾರಿ ಯಾದ ಕಾನೂನಾತ್ಮಕ ನಿರ್ಧಾರಗಳು, ನ್ಯಾಯಾಲಯದಲ್ಲಿ ಈ ಪ್ರಕರಣ ನಡೆದು ಬಂದ ದಾರಿ, ನ್ಯಾಯಾಲಯ ಗಳ ಚೌಕಟ್ಟಿನಲ್ಲಿ ಈ ಪ್ರಕರಣದ ಬಗ್ಗೆ ಹೊರಬಿದ್ದ ತೀರ್ಪುಗಳು, ಸುಪ್ರೀಂ ಕೋರ್ಟ್‌ನಿಂದ ಹೊರಬಂದ ತೀರ್ಪು ಇವೆಲ್ಲವನ್ನೂ ಆ ತಾಮ್ರ ಫ‌ಲಕದಲ್ಲಿ ಕೆತ್ತಿಸಲಾಗುತ್ತದೆ. ಮುಂದೊಂದು ದಿನ ಯಾರೋ ಒಬ್ಬರು ಬಂದು ಈ ಜಾಗವನ್ನು ವಿವಾದದ ಕೂಪವನ್ನಾಗಿಸ ದಿರಲು ಹಾಗೂ ಸಾರ್ವಜನಿಕರಲ್ಲಿ ಈ ಪ್ರಕರಣದ ಬಗ್ಗೆ ಅರಿವು ಮೂಡಿಸಲು ಈ ಪ್ರಯತ್ನಕ್ಕೆ ಕೈ ಹಾಕಲಾಗಿದೆ. ಭವಿಷ್ಯದಲ್ಲಿ ರಾಮ ಮಂದಿರದ ಐತಿಹ್ಯದ ಬಗ್ಗೆ ಪ್ರಶ್ನೆಗಳು ಎದ್ದಾಗ ಈ ತಾಮ್ರ ಫ‌ಲಕವು ಒಂದು ತೆರೆದ ಪುಸ್ತಕದಂತೆ ಅವರಿಗೆ ಪೂರಕ ಮಾಹಿತಿ ನೀಡುತ್ತದೆ’ ಎಂದು ಅವರು ಹೇಳಿದ್ದಾರೆ.

“ಶತಮಾನಗಳ ಹಿಂದೆ ಆರಂಭವಾದ ರಾಮಜನ್ಮಭೂಮಿ ವಿವಾದ, ಇತ್ತೀಚಿನ ವರ್ಷಗಳಲ್ಲಿ ಸುಪ್ರೀಂ ಕೋರ್ಟ್‌ ವರೆಗೂ ಹೋಗಿತ್ತು. ಅಲ್ಲಿ, ಈಗಿನ ಹಾಗೂ ಮುಂದಿನ ತಲೆಮಾರುಗಳಿಗೆ ಸೂಕ್ತ ಪಾಠವೆಂಬಂಥ ತೀರ್ಪು ಹೊರಬಿದ್ದಿದೆ. ಆ ಕಾರಣಕ್ಕಾಗಿಯೂ ಅದನ್ನು ಮುಂದಿನ ತಲೆಮಾರಿನವರಿಗೆ ತಿಳಿಸುವುದು ಅಗತ್ಯವಾಗಿದೆ’ ಎಂದು ಅವರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next