Advertisement

Politics: ಫಡ್ನವೀಸ್‌ ಗೆ ಬೆಂಬಲ ನೀಡಿದ ಅಜಿತ್;‌ ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ

02:47 PM Nov 25, 2024 | Team Udayavani |

ಮುಂಬೈ: ಇತ್ತೀಚೆಗೆ ನಡೆದ ಮಹಾರಾಷ್ಟ್ರ ವಿಧಾನಸಭೆ ಚುನಾವಣೆಯಲ್ಲಿ ಮಹಾಯುತಿ ಮೈತ್ರಿಕೂಟ ಭರ್ಜರಿ ಗೆಲುವು ಸಾಧಿಸಿದೆ. ಬಿಜೆಪಿ, ಏಕನಾಥ್‌ ಶಿಂಧೆ ಬಣದ ಶಿವಸೇನೆ, ಅಜಿತ್‌ ಪವಾರ್‌ ಬಣದ ಎನ್‌ ಸಿಪಿಯ ಮೈತ್ರಿಕೂಟವಾದ ಮಹಾಯುತಿಯು ಅಧಿಕಾರ ಪಡೆಯಲು ಮುಂದಾಗಿದೆ. ಆದರೆ ಮುಂದಿನ ಮುಖ್ಯಮಂತ್ರಿ ಯಾರೆಂದು ನಿರ್ಧರಿಸುವಲ್ಲಿ ಮೈತ್ರಿಕೂಟ ಇನ್ನು ಯಶಸ್ಸು ಕಂಡಿಲ್ಲ.

Advertisement

ಎರಡು ಬಾರಿಯ ಸಿಎಂ, ಬಿಜೆಪಿ ನಾಯಕ ದೇವೇಂದ್ರ ಫಡ್ನವೀಸ್‌ ಮತ್ತು ಹಾಲಿ ಸಿಎಂ ಏಕನಾಥ್‌ ಶಿಂಧೆ ಅವರು ಮುಖ್ಯಮಂತ್ರಿ ರೇಸ್‌ ನಲ್ಲಿ ಅಗ್ರ ಸ್ಥಾನದಲ್ಲಿದ್ದಾರೆ. ಸಿಎಂ ಸ್ಥಾನಕ್ಕೆ ತಾವೇ ಆಕಾಂಕ್ಷಿ ಎಂದು ಏಕನಾಥ್‌ ಶಿಂಧೆ ಮತ್ತು ಫಡ್ನವೀಸ್‌ ಇಬ್ಬರೂ ಹೇಳಿಕೊಂಡಿದ್ದಾರೆ.

ಮಹಾರಾಷ್ಟ್ರ ವಿಧಾನಸಭೆ ಅವಧಿ ಸೋಮವಾರವೇ ಅಂತ್ಯವಾಗುವ ಕಾರಣ ಇಂದೇ ಸಿಎಂ ಅಂತಿಮವಾಗಿ ಪ್ರಮಾಣ ವಚನ ಸ್ವೀಕಾರ ನಡೆಯಬೇಕು. ಹೀಗಾಗಿ ಮಹಾಯುತಿ ಬಣದಲ್ಲಿ ಲೆಕ್ಕಾಚಾರಗಳು ಜೋರಾಗಿಯೇ ನಡೆಯುತ್ತಿದೆ.

ಸದ್ಯದ ಬೆಳವಣಿಗೆಯಲ್ಲಿ ಎನ್‌ ಸಿಪಿಯ ಅಜಿತ್‌ ಪವಾರ್‌ ಅವರು ಬಿಜೆಪಿಯ ದೇವೇಂದ್ರ ಫಡ್ನವೀಸ್‌ ಅವರಿಗೆ ಬೆಂಬಲ ನೀಡಿದ್ದಾರೆ ಎಂದು ಇಂಡಿಯಾ ಟುಡೇ ವರದಿ ಮಾಡಿದೆ.

Advertisement

ಅಜಿತ್ ಪವಾರ್ ಅವರು ಭಾನುವಾರ‌ (ನ.24) ತಮ್ಮ ನಿವಾಸದಲ್ಲಿ ಹೊಸದಾಗಿ ಚುನಾಯಿತ ಎನ್‌ಸಿಪಿ ಶಾಸಕರೊಂದಿಗೆ ಸಭೆ ನಡೆಸಿದ್ದಾರೆ. ಅಲ್ಲಿ ಅವರು ಫಡ್ನವೀಸ್‌ಗೆ ತಮ್ಮ ಬೆಂಬಲವನ್ನು ಹಂಚಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಮಹಾರಾಷ್ಟ್ರದಲ್ಲಿ ಮಹಾಯುತಿಯ ಅದ್ಬುತ ಚುನಾವಣಾ ಯಶಸ್ಸಿನ ಪ್ರಮುಖ ಕಾರಣ ಎಂದು ಹೇಳಲಾದ “ಲಾಡ್ಲಿ ಬಹಿನ್” ಯೋಜನೆಯನ್ನು ಉಲ್ಲೇಖಿಸಿ ಏಕನಾಥ್ ಶಿಂಧೆ ಅವರು ಮುಖ್ಯಮಂತ್ರಿ ಹುದ್ದೆಗೆ ಹಕ್ಕು ಸ್ಥಾಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಶಿವಸೇನೆ (ಆಗ ಒಂದೇ ಆಗಿದ್ದ), ಎನ್‌ಸಿಪಿ ಮತ್ತು ಕಾಂಗ್ರೆಸ್‌ನ ಮಹಾ ವಿಕಾಸ್ ಅಘಾಡಿ ಮೈತ್ರಿಕೂಟವನ್ನು ಸೇರಿ 2019 ರಲ್ಲಿ ಸರ್ಕಾರವನ್ನು ರಚಿಸಿದಾಗಿನಿಂದ, ಅಜಿತ್ ಪವಾರ್ ಮತ್ತು ಏಕನಾಥ್ ಶಿಂಧೆ ನಡುವಿನ ಸಂಬಂಧ ಅಷ್ಟಕ್ಕಷ್ಟೇ ಎನ್ನಲಾಗಿದೆ.

ಆದಾಗ್ಯೂ, ಶಿಂಧೆ ಸೇನೆ, ಎನ್‌ಸಿಪಿ (ಅಜಿತ್ ಪವಾರ್) ಮತ್ತು ಬಿಜೆಪಿ ಹೈಕಮಾಂಡ್‌ ನ ಹಿರಿಯ ನಾಯಕರ ಜಂಟಿ ಸಭೆಯ ನಂತರವೇ ಮುಂದಿನ ಮುಖ್ಯಮಂತ್ರಿ ಯಾರು ಎಂಬ ಅಂತಿಮ ನಿರ್ಧಾರವನ್ನು ತೆಗೆದುಕೊಳ್ಳಲಾಗುವುದು.

ಈ ಬಾರಿಯ ವಿಧಾನಸಭೆ ಚುನಾವಣೆಯಲ್ಲಿ 149 ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಬಿಜೆಪಿ 132ರಲ್ಲಿ ಗೆಲುವು ಸಾಧಿಸಿದೆ. ಮತ್ತೊಂದೆಡೆ ಶಿಂಧೆ ಸೇನೆ 57 ಮತ್ತು ಅಜಿತ್‌ ಪವಾರ್‌ ಅವರ ಎನ್‌ ಸಿಪಿ 41ರಲ್ಲಿ ಗೆಲುವು ಸಾಧಿಸಿದೆ. ಉದ್ದವ್‌ ಠಾಕ್ರೆ ಅವರ ಶಿವಸೇನೆ 20ರಲ್ಲಿ‌, ಕಾಂಗ್ರೆಸ್ 16 ಮತ್ತು ಶರದ್‌ ಪವಾರ್‌ ಅವರ ಎನ್‌ ಸಿಪಿ 10 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next