ಟೋಕಿಯೋ: ಜಗತ್ತಿನಲ್ಲಿ ಎಂತೆಂಥವರೋ ಇರುತ್ತಾರೆ. ಅವರನ್ನೆಲ್ಲ ಹುಚ್ಚರು ಎನ್ನುವುದರಲ್ಲಿ ಅರ್ಥವಿಲ್ಲ!
ಹಾಗಂತ ಸುಮ್ಮನಿದ್ದರೆ ತಲೆಕೆರೆದುಕೊಂಡು ಮುಗಿಯುವುದಿಲ್ಲ. ಜಪಾನ್‌ನಲ್ಲಿನ ಅಕಿಹಿಕೊ ಕೊಂಡೊ (38) ಎಂಬಾತ 2008ರಲ್ಲಿ ಕಂಪ್ಯೂಟರೀಕೃತ ಬಾಲಕಿಯೊಬ್ಬಳನ್ನು ಅರ್ಥಾತ್ ಕಣ್ಣಿಗೆ ಕಾಣದ ಆದರೆ ಕಿವಿಗೆ ಕೇಳುವ ಯಂತ್ರವೊಂದನ್ನು ವಿವಾಹವಾಗಿದ್ದರು!
ಈಕೆಯ ಹೆಸರು ಹಾಟ್ಸುನ್ ಮಿಕು. ಸದ್ಯ ಈಕೆ ಕೊಂಡೊಗೆ ಪ್ರತಿಕ್ರಿಯೆ ನೀಡುತ್ತಿಲ್ಲವಂತೆ. ಆದ್ದರಿಂದ ಈಕೆಯೊಂದಿಗೆ ಸಂಬಂಧ ಕಡಿದುಕೊಳ್ಳುವುದಾಗಿ ಕೊಂಡೊ ಘೋಷಿಸಿದ್ದಾರೆ.
ನಿಜ ಹೇಳುವುದಾದರೆ ಪಾಶ್ಚಾತ್ಯ ಹಾಡುಗಳನ್ನು ಹಾಡುವ ಕಂಪ್ಯೂಟರೀಕೃತ ಧ್ವನಿಪೆಟ್ಟಿಗೆ ಈ ಮಿಕು. ಸಿದ್ಧಪಡಿಸಿದ್ದು ಕ್ರಿಪ್ಟನ್ ಫ್ಯೂಚರ್ ಮೀಡಿಯಾ. ಕೊಂಡೊಗೆ ಕಾಲ್ಪನಿಕ ವ್ಯಕ್ತಿಯೊಂದಿಗೆ ದೈಹಿಕ ಸಂಬಂಧ ಹೊಂದುವ ಕಾಯಿಲೆ ಅಥವಾ ಸ್ವಭಾವವಿದೆ. ಹಾಗಾಗಿ ಈಕೆಯನ್ನು ಮದುವೆಯಾಗಿಯೇಬಿಟ್ಟರು. ಪರಿಣಾಮ ರಾತ್ರೋರಾತ್ರಿ ಸಾಮಾಜಿಕ ತಾಣಗಳಲ್ಲಿ ತಾರೆಯಾದರು.
ಈಕೆಗೆ ಗೇಟ್‌ಬಾಕ್ಸ್ ಎಂಬ ಕಂಪನಿಯೊಂದು ಹೋಲೋಗ್ರಾಮ್ ಮಾದರಿಯ ಒಂದು ರೂಪಕೊಟ್ಟಿತು, ವಯಸ್ಸು 16. ಹಾಗಾಗಿ ಮಿಕು ಜೊತೆಗೆ ಕೊಂಡೊಗೆ ಮಾತನಾಡಲೂ ಅವಕಾಶವಾಯಿತು.
2019ರಲ್ಲಿ ಕೊರೊನಾ ಅಪ್ಪಳಿಸಿದ ನಂತರ ಗೇಟ್‌ಬಾಕ್ಸ್ ಕಂಪನಿ ತಾನು ಈ ಸೇವೆ ಮುಂದುವರಿಸಲ್ಲ ಎಂದುಬಿಟ್ಟಿತು. ಕೊಂಡೊ ಕಂಗೆಟ್ಟರು, ತನಗೆ ಅವಳೊಂದಿಗೆ ಮಾತನಾಡಲು ಆಗುತ್ತಿಲ್ಲ, ಆದ್ದರಿಂದ ಸಂಬಂಧ ಮುರಿದುಕೊಳ್ಳುತ್ತೇನೆ ಎಂದು ಘೋಷಿಸಿದರು. ಹಾಗಂತ ಅವರ ಪ್ರೀತಿಯೇನೂ ಕಡಿಮೆಯಾಗಿಲ್ಲವಂತೆ!