2024ರ ಕೊನೆಯ ತಿಂಗಳಿನಲ್ಲಿ ನಾವಿದ್ದೇವೆ. ಈ ವರ್ಷ ಬಣ್ಣದ ಲೋಕದಲ್ಲಿ ಹಲವು ವಿಚಾರಗಳು ಸುದ್ದಿಯಾಗಿವೆ. ಸಿನಿಮಾಗಳ ಜತೆ ಸಿನಿಮಾ ತಾರೆಯರ ವೈಯಕ್ತಿಕ ಬದುಕಿನ ಸಂಗತಿಗಳು ಕೂಡ ಈ ವರ್ಷ ಅತೀ ಹೆಚ್ಚು ಸುದ್ದಿಯಾದ ವಿಚಾರಗಳಲ್ಲೊಂದು.
ಪ್ರೀತಿಸಿ ಮದುವೆಯಾದ ಜೋಡಿಗಳು ವಿಚ್ಚೇದನ ಪಡೆದು ಪರಸ್ಪರ ದೂರವಾಗುವುದಾಗಿ ಹೇಳಿದ ಹಲವು ಡಿವೋರ್ಸ್ (Divorce) ಪ್ರಕರಣಗಳು ಬಣ್ಣದ ಲೋಕದಲ್ಲಿ ಈ ವರ್ಷ ನಡೆದಿದೆ. ಅವುಗಳತ್ತ ಒಂದು ನೋಟ ಇಲ್ಲಿದೆ..
ಸಾನಿಯಾ ಮಿರ್ಜಾ – ಶೋಯೆಬ್ ಮಲಿಕ್: ಭಾರತದ ಮಾಜಿ ಟೆನ್ನಿಸ್ ತಾರೆ ಸಾನಿಯಾ ಮಿರ್ಜಾ (Sania Mirza) ಹಾಗೂ ಪಾಕ್ ಮಾಜಿ ಕ್ರಿಕೆಟಿಗ ಶೋಯೆಬ್ ಮಲಿಕ್ (Shoaib Malik) ಅವರ ದಾಂಪತ್ಯ ಜೀವನ ಬೇರ್ಪಟ್ಟ ವಿಚಾರ ವರ್ಷದ ಆರಂಭದಲ್ಲಿ ದೊಡ್ಡ ಸುದ್ದಿಯಾಗಿತ್ತು.
ಇದನ್ನೂ ಓದಿ: Year Ender: ಸೌತ್‌ನಲ್ಲಿ ಈ ವರ್ಷ ಸಿನಿಮಾಗಿಂತ ವಿವಾದಗಳದ್ದೇ ಹೆಚ್ಚು ಸದ್ದು – ಸುದ್ದಿ
2022ರಿಂದಲೂ ಇಬ್ಬರ ನಡುವಿನ ದಾಂಪತ್ಯದಲ್ಲಿ ಎಲ್ಲವೂ ಸರಿಯಿಲ್ಲ ಎನ್ನುವುದು ಗೊತ್ತಾಗಿತ್ತು. ಆದರೆ 2023ರಲ್ಲಿ ಇಬ್ಬರು ವಿಚ್ಛೇದನ ಪಡೆದಿದ್ದರು. ಆದರೆ 2024ರ ಜ.20 ರಂದು ಶೋಯೆಬ್ ಮಲಿಕ್ ಪಾಕ್ ನಟಿ ಸನಾ ಜಾವೇದ್ ಅವರನ್ನು ವಿವಾಹವಾದ ಬಳಿಕ ಸಾನಿಯಾ ಅವರೊಂದಿಗೆ ವಿಚ್ಛೇದನ ಪಡೆದ ವಿಚಾರ ಬೆಳಕಿಗೆ ಬಂದಿತ್ತು.
2010 ರಲ್ಲಿ ಸಾನಿಯಾ – ಶೋಯೆಬ್ ವಿವಾಹವಾಗಿತ್ತು. 2018 ರಲ್ಲಿ ದಂಪತಿ ಇಜಾನ್ ಎಂಬ ಗಂಡು ಮಗುವಿಗೆ ತಂದೆ – ತಾಯಿಯಾಗಿದ್ದರು.
ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ:
ಕನ್ನಡದ ಟಾಪ್ ಸೆಲೆಬ್ರಿಟಿ ಜೋಡಿಗಳಾಗಿದ್ದ ಚಂದನ್ ಶೆಟ್ಟಿ (Chandan Shetty)ಹಾಗೂ ನಿವೇದಿತಾ ಗೌಡ (Niveditha Gowda) ಅವರು 2024ರ ಜೂನ್ 7ರಂದು ಪರಸ್ಪರ ಒಪ್ಪಿಗೆ ಮೇರೆಗೆ ಡಿವೋರ್ಸ್ ಪಡೆದುಕೊಂಡರು. ಇವರ ವಿಚ್ಚೇದನ ವಿಚಾರ ಸಂಬಂಧ ಸೋಶಿಯಲ್ ಮೀಡಿಯಾದಲ್ಲಿ ನಾನಾ ರೀತಿಯ ವದಂತಿಗೆ ಕಾರಣವಾಗಿತ್ತು.
‘ಬಿಗ್ ಬಾಸ್’ ಕನ್ನಡ ಸೀಸನ್ 5ರಲ್ಲಿ ಸ್ಪರ್ಧಿಗಳಾಗಿವೆ ಚಂದನ್ ಶೆಟ್ಟಿ ಮತ್ತು ನಿವೇದಿತಾ ಗೌಡ ಆಗಮಿಸಿದ್ದರು. ಈ ಶೋನಲ್ಲೇ ಇಬ್ಬರು ಆತ್ಮೀಯತೆಯಿಂದ ಇದ್ದರು. 2019ರ ದಸರಾ ಹಬ್ಬದ ವೇಳೆ ನಿವೇದಿತಾಗೆ ಚಂದನ್ ಪ್ರಪೋಸ್ ಮಾಡಿದ್ದರು. 2020ರ ಫೆಬ್ರವರಿ 26ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು.
ಆದರೆ ನಾಲ್ಕು ವರ್ಷಗಳ ಕಾಲ ಸಹಜೀವನ ನಡೆಸಿದ್ದ 2024ರ ಜೂನ್ 7ರಂದು ಡಿವೋರ್ಸ್ ಪಡೆದುಕೊಂಡರು.
ಪತಿ ಪತ್ನಿಯಾಗಿ ಮುಂದುವರೆಯುವ ನಿಟ್ಟಿನಲ್ಲಿ ಹೊಂದಾಣಿಕೆ ಇಲ್ಲದಿರುವುದೇ ಇಬ್ಬರ ವಿಚ್ಚೇದನಕ್ಕೆ ಪ್ರಮುಖ ಕಾರಣವಾಗಿತ್ತು.
ಹಾರ್ದಿಕ್ ಪಾಂಡ್ಯ ಮತ್ತು ನತಾಶಾ:
ಶ್ರೀಮಂತ ಸೆಲೆಬ್ರಿಟಿ ಜೋಡಿಗಳಾಗಿದ್ದ ಹಾರ್ದಿಕ್ (Hardik Pandya) – ನತಾಶ (Natasa Stankovic) ದಾಂಪತ್ಯ ಜೀವನ ಎಷ್ಟು ವೇಗದಲ್ಲಿ ಸುದ್ದಿಯಾಯಿತೋ ಅಷ್ಟೇ ಬೇಗ ವಿಚ್ಚೇದನವಾಗಿ ಕೊನೆಗೊಂಡಿತು.
ಕ್ರಿಕೆಟಿಗ ಹಾರ್ದಿಕ್ ಪಾಂಡ್ಯ ಹಾಗೂ ನಟಿ ನಟಾಶಾ 2020ರ ಮೇ ತಿಂಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದರು. ಅದೇ ವರ್ಷ ದಂಪತಿಗೆ ʼಅಗಸ್ತ್ಯʼ ಎಂಬ ಗಂಡು ಮಗು ಜನಿಸಿತು. ಆರಂಭದಲ್ಲಿ ಚೆನ್ನಾಗಿದ್ದ ಕುಟುಂಬದದಲ್ಲಿ ಬಿರುಕು ಕಾಣಿಸಿಕೊಂಡಿತು. 2024ರ ಜುಲೈ ತಿಂಗಳಲ್ಲಿ ಈ ಜೋಡಿ ವಿಚ್ಛೇದನ ಪಡೆದುಕೊಂಡಿತು.
ನಟಿ ಊರ್ಮಿಳಾ ಮಾತೋಂಡ್ಕರ್ – ಮೊಹ್ಸಿನ್ ಅಖ್ತರ್ ಮಿರ್: ಬಾಲಿವುಡ್ ನಟಿ ಊರ್ಮಿಳಾ ಮಾತೋಂಡ್ಕರ್ (Urmila Matondkar) ಮದುವೆಯಾದ 8 ವರ್ಷಗಳ ಬಳಿಕ ಪತಿ ಮೊಹ್ಸಿನ್ ಅಖ್ತರ್ ಮಿರ್ ಅವರಿಂದ ವಿಚ್ಛೇದನಕ್ಕೆ(Divorce) ಅರ್ಜಿ ಸಲ್ಲಿಸಿದ ವಿಚಾರ ಈ ಸುದ್ದಿಯಾಗಿತ್ತು.
ತನಗಿಂತ 10 ವರ್ಷ ಕಿರಿಯರಾಗಿರುವ ಕಾಶ್ಮೀರ ಮೂಲದ ನಟ ಮೊಹ್ಸಿನ್ (Mohsin Akhtar Mir) ಅವರೊಂದಿಗೆ 2016 ಮಾರ್ಚ್ 3 ರಂದು ಊರ್ಮಿಳಾ ಪ್ರೀತಿಯಲ್ಲಿ ಬಿದ್ದು ಮದುವೆಯಾಗಿದ್ದರು. ಮದುವೆ ಸಂದರ್ಭದಲ್ಲೇ ಇಬ್ಬರ ನಡುವಿನ ಪ್ರೀತಿ ವಿಚಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ಟೀಕೆ ವ್ಯಕ್ತವಾಗಿತ್ತು.
ಮುಸ್ಲಿಂ ಹುಡುಗನನ್ನು ಮದುವೆ ಆದ ಕಾರಣಕ್ಕೆ ಅವರನ್ನು ಅನೇಕರು ಟೀಕಿಸಿದ್ದರು. ಮದುವೆ ಬಳಿಕ ಊರ್ಮಿಳಾ ಮುಸ್ಲಿಂಗೆ ಮತಾಂತರಗೊಂಡಿದ್ದರು ಎಂದು ಹೇಳಲಾಗಿತ್ತು. ಆದರೆ ಈ ಸುದ್ದಿಯನ್ನು ನಟಿ ತಳ್ಳಿ ಹಾಕಿದ್ದರು.
ಈ ವರ್ಷದ ಸೆಪ್ಟೆಂಬರ್ ತಿಂಗಳಿನಲ್ಲಿ ಪತಿ ಮೊಹ್ಸಿನ್ ವಿಚ್ಚೇದನ ಬಯಸಿ ಅರ್ಜಿ ಸಲ್ಲಿಸಿದ್ದರು.
ಇಶಾ ಡಿಯೋಲ್ – ಭಾರತ್ ತಖ್ತಾನಿ: ನಟಿ ಹೇಮಾ ಮಾಲಿನಿ ಪುತ್ರಿ ಇಶಾ ಡಿಯೋಲ್(Esha Deol) ಭಾರತ್ ತಖ್ತಾನಿ (Bharat Takhtani) ಇದೇ ವರ್ಷದ ಫೆ.7 ರಂದು ವಿಚ್ಛೇದನ ಘೋಷಿಸಿದ್ದರು.
ಪರಸ್ಪರ ಒಪ್ಪಿಗೆಯ ಮೇರೆಗೆ ಇಬ್ಬರು 12 ವರ್ಷಗಳ ದಾಂಪತ್ಯಕ್ಕೆ ಅಂತ್ಯವಾಡಿದ್ದರು. ಮಕ್ಕಳಾದ ರಾಧ್ಯಾ ಮತ್ತು ಮಿರಯಾ ಅವರಿಗೆ ಸಹ-ಪೋಷಕರಾಗಿರುತ್ತೇವೆ ಎಂದು ಇಬ್ಬರು ಹೇಳಿದ್ದರು.
ಇಶಾ ಕೊಪ್ಪಿಕರ್ – ಟಿಮ್ಮಿ ನಾರಂಗ್: 90 ದಶಕದ ಬಹುಭಾಷಾ ನಟಿ ಇಶಾ ಕೊಪ್ಪಿಕರ್ (Isha Koppikar) 2009ರಲ್ಲಿ ಹೊಟೇಲ್ ಉದ್ಯಮಿ ಟಿಮ್ಮಿ ನಾರಂಗ್ (Timmy Narang) ಅವರೊಂದಿಗೆ ವಿವಾಹವಾಗಿದ್ದರು. ದಾಂಪತ್ಯದಲ್ಲಿನ ಹೊಂದಾಣಿಕೆ ಸಮಸ್ಯೆಯಿಂದಾಗಿ ಇಬ್ಬರು ಪರಸ್ಪರ ದೂರವಾದರು. 2024ರ ಜನವರಿಯಲ್ಲಿ ತಮ್ಮ 14 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯವಾಡಿದ್ದರು. ಇವರಿಗೆ ರಿಯಾನ್ನಾ ನಾರಂಗ್ ಎಂಬ ಮಗಳಿದ್ದಾರೆ.
ಧನುಷ್ – ಐಶ್ವರ್ಯಾ:
ಕಾಲಿವುಡ್ ನಟ ನಿರ್ದೇಶಕ ಧನುಷ್ (Dhanush) ಹಾಗೂ ನಿರ್ದೇಶಕಿ, ರಜನಿಕಾಂತ್ ಪುತ್ರಿ ಐಶ್ವರ್ಯಾ ರಜನಿಕಾಂತ್ (Aishwarya) ಅವರಿಗೆ ಈ ವರ್ಷದ ನವೆಂಬರ್ ತಿಂಗಳಿನಲ್ಲಿ ಚೆನ್ನೈಯ ಕೌಟುಂಬಿಕ ನ್ಯಾಯಾಲಯ ವಿಚ್ಛೇದನ ನೀಡಿದೆ.
ಆ ಮೂಲಕ 17 ವರ್ಷದ ತಮ್ಮ ದಾಂಪತ್ಯ ಜೀವನಕ್ಕೆ ಇಬ್ಬರು ಅಂತ್ಯವಾಡಿದ್ದರು. 2022ರ ಜನವರಿಯಲ್ಲಿ ಈ ಜೋಡಿ ಬೇರೆಯಾಗುತ್ತಿರುವುದಾಗಿ ಘೋಷಣೆ ಮಾಡಿತ್ತು. ಆದರೆ 3 ಬಾರಿ ವಿಚಾರಣೆಗೆ ಈ ಜೋಡಿ ಹಾಜರಾಗದ ಕಾರಣ ವಿಚ್ಛೇದನವನ್ನು ಕೋರ್ಟ್ ಮುಂದೂಡಿತ್ತು.
ಧನುಷ್- ಐಶ್ವರ್ಯಾ ರಜನಿಕಾಂತ್ ಪರಸ್ಪರ ಪ್ರೀತಿಸಿ 2004ರಲ್ಲಿ ಮದುವೆಯಾದರು. ಅವರಿಗೆ ಲಿಂಗ ಮತ್ತು ಯಾತ್ರಾ ಎಂಬ ಇಬ್ಬರು ಪುತ್ರರು ಇದ್ದಾರೆ.
ಎಆರ್ ರೆಹಮಾನ್ – ಸಾಯಿರಾ ಬಾನು:
ಆಸ್ಕರ್ ವಿಜೇತ ಸಂಗೀತ ಮಾಂತ್ರಿಕ ಎಆರ್ ರೆಹಮಾನ್ – ಸಾಯಿರಾ ಬಾನು ಡಿವೋರ್ಸ್ ವಿಚಾರ ಅಭಿಮಾನಿಗಳಿಗೆ ಶಾಕ್ ನೀಡಿತ್ತು.
ಡಿವೋರ್ಸ್ ಬಳಿಕ ಎಆರ್ ರೆಹಮಾನ್ (AR Rahman) ತಂಡದ ಸದಸ್ಯೆ ಮೋಹಿನಿ ಡೇ ಅವರು ಸಹ ತಮ್ಮ ಗಂಡನಿಗೆ ವಿಚ್ಚೇದನ ನೀಡಿದ್ದರು. ಇದಕ್ಕೂ ಎಆರ್ ರೆಹಮಾನ್ ಅವರ ವಿಚ್ಚೇದನ ವಿಚಾರಕ್ಕೂ ಲಿಂಕ್ ಮಾಡಿ ಕೆಲವರು ಮಾತನಾಡಿದ್ದರು. ಇದು ಸೋಶಿಯಲ್ ಮೀಡಿಯಾದಲ್ಲಿ ಕೆಲ ಕಾಲ ಚರ್ಚೆ ಆಗಿತ್ತು.
ಪತಿಯಿಂದ ತಾನು ಯಾಕೆ ದೂರುವಾಗಿದ್ದೇನೆ ಎನ್ನುವ ಬಗ್ಗೆ ಸಾಯಿರಾ ಅವರು ಆಡಿಯೋವೊಂದರ ಮೂಲಕ ಸ್ಪಷ್ಟನೆ ನೀಡಿದ್ದರು.
ಅವರೊಬ್ಬ ಅದ್ಭುತ ಮನುಷ್ಯ. ಅವರು ಹೇಗಿದ್ದಾರೋ ಹಾಗೆಯೇ ಇರಲು ನಾನು ಬಯಸುತ್ತೇನೆ. ನನ್ನ ಜೀವನದಲ್ಲಿ ನಾನು ಅವರನ್ನು ನಂಬುತ್ತೇನೆ. ನಾನು ತುಂಬಾ ಪ್ರೀತಿಸುತ್ತೇನೆ. ನಾವು ಪರಸ್ಪರ ಒಪ್ಪಿಕೊಂಡೇ ನಿರ್ಧಾರವನ್ನು ಮಾಡಿದ್ದೇವೆ. ಈ ಬಗ್ಗೆ ಹುಟ್ಟಿರುವ ಎಲ್ಲಾ ಊಹಾಪೋಹಗಳನ್ನು ನಿಲ್ಲಿಸಬೇಕೆಂದು ನಾನು ನಿಮ್ಮೆಲ್ಲರನ್ನು ವಿನಂತಿಸುತ್ತೇನೆ ಎಂದಿದ್ದರು.
ದೈಹಿಕವಾಗಿ ನಾನು ತುಂಬಾ ಸುಸ್ತುಗೊಂಡಿದ್ದೇನೆ. ನನ್ನ ಆರೋಗ್ಯ ಕೂಡ ಸರಿಯಾಗಿಲ್ಲ. ಇದೇ ಕಾರಣದಿಂದ ನಾನು ರೆಹಮಾನ್ ಅವರಿಂದ ದೂರವಾಗಲು ಬಯಸಿದ್ದು ಎಂದಿದ್ದರು.
1995 ಮಾ.12ರಂದು ಇಬ್ಬರ ವಿವಾಹವಾಗಿತ್ತು. ಅವರಿಗೆ ಖತೀಜಾ, ರಹೀಮಾ, ಅಮೀನ್ ಎಂಬ ಮೂವರು ಮಕ್ಕಳಿದ್ದಾರೆ.
ಯುವರಾಜ್ ಕುಮಾರ್ – ಶ್ರೀದೇವಿ: ಡಾ. ರಾಜ್ ಕುಮಾರ್ ಕುಟುಂಬದ ಕುಡಿ, ರಾಘವೇಂದ್ರ ಅವರ ಪುತ್ರ ಯುವರಾಜ್ (Yuvaraj Kumar) ಕುಮಾರ್ ಅವರ ದಾಂಪತ್ಯ ಜೀವನದಲ್ಲಿನ ಬಿರುಕಿನ ವಿಚಾರ ಸ್ಯಾಂಡಲ್ ವುಡ್ ನಲ್ಲಿ ಸುದ್ದಿಯಾಗಿತ್ತು.
ಯುವರಾಜ್ ಕುಮಾರ್ 2019 ರಲ್ಲಿ ಮೈಸೂರು ಮೂಲದ ಶ್ರೀದೇವಿ ಭೈರಪ್ಪರನ್ನು (Sridevi byrappa) ಪ್ರೀತಿಸಿ ವಿವಾಹವಾಗಿದ್ದರು. ಆರಂಭದಲ್ಲಿ ಇಬ್ಬರ ನಡುವೆ ಎಲ್ಲವೂ ಚೆನ್ನಾಗಿತ್ತು. ಆದರೆ 2024 ಜೂನ್ ತಿಂಗಳಿನಲ್ಲಿ ಯುವರಾಜ್ (ಗುರುರಾಜ್ ಕುಮಾರ್) ತನ್ನ ಪತ್ನಿ ಶ್ರೀದೇವಿ ಅವರಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು.
ವಿಚ್ಛೇದನ ಪ್ರಕರಣದ ಬಳಿಕ ಶ್ರೀದೇವಿ – ಯುವರಾಜ್ ನಡುವೆ ಆರೋಪ – ಪ್ರತ್ಯಾರೋಪ ಕೇಳಿ ಬಂದಿತ್ತು. ಶ್ರೀದೇವಿ ಭೈರಪ್ಪ ಅಕ್ರಮ ಸಂಬಂಧ ಹೊಂದಿದ್ದಾರೆ ಎಂದು ಆರೋಪಿಸಲಾಗಿತ್ತು. ಇನ್ನೊಂದೆಡೆ ಯುವರಾಜ್ ಕುಮಾರ್(ಗುರುರಾಜ್ ಕುಮಾರ್) ಸಹನಟಿ ಜೊತೆ ಸಂಬಂಧವನ್ನು ಇಟ್ಟುಕೊಂಡಿದ್ದಾರೆ ಎಂದು ಆರೋಪವನ್ನು ಮಾಡಲಾಗಿತ್ತು.