ಬೆಂಗಳೂರು: ಟೆಕಿ ಅತುಲ್ ಸುಭಾಷ್ ಹಾಗೂ ಹೆಡ್ಕಾನ್ ಸ್ಟೇಬಲ್ ತಿಪ್ಪಣ್ಣ ಆತ್ಮಹತ್ಯೆ ಪ್ರಕರಣ ಬೆನ್ನಲ್ಲೇ ನಗರದಲ್ಲಿ ಗಾರೆ ಕಾರ್ಮಿಕ ಹಾಗೂ ಕ್ರಿಕೆಟ್ ಆಟಗಾರನೊಬ್ಬ ಪತ್ನಿ ವಿರುದ್ಧ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.
ಸೋಲದೇವನ ಹಳ್ಳಿಯ ಸಿಲುವೆಪುರ ನಿವಾಸಿ ಬಾಲರಾಜ್(42) ಆತ್ಮಹತ್ಯೆ ಮಾಡಿಕೊಂಡ ವರು. ನ.18ರಂದು ಆತ್ಮ ಹತ್ಯೆ ಮಾಡಿಕೊಂಡಿದ್ದು, ಈ ಸಂಬಂಧ ಸೋಲ ದೇವನಹಳ್ಳಿ ಠಾಣೆಯಲ್ಲಿ ಬಾಲರಾಜ್ ಪತ್ನಿ ಕುಮಾರಿ ಹಾಗೂ ಇತರರ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದಡಿ ಪ್ರಕರಣ ದಾಖಲಾಗಿದೆ.
ಬಾಲರಾಜ್ ಹಾಗೂ ಕುಮಾರಿ 14 ವರ್ಷದ ಹಿಂದೆ ಮದುವೆಯಾಗಿದ್ದು, ದಂಪತಿಗೆ 12 ವರ್ಷದ ಮಗ ಇದ್ದಾನೆ. ಬಾಲರಾಜ್ ಗಾರೆ ಕೆಲಸ ಮಾಡಿ ಕೊಂಡಿದ್ದು, ಕುಮಾರಿ ಕೂಡ ಸಣ್ಣ ಪುಟ್ಟ ಕೆಲಸ ಮಾಡಿ ಕೊಂಡಿದ್ದರು. ದಂಪತಿ ಹೆಸರಘಟ್ಟ ಸಮೀಪದ ಸಿಲುವೆ ಪುರದಲ್ಲಿ ವಾಸವಾಗಿದ್ದರು. ಈ ಮಧ್ಯೆ ಕೌಟುಂಬಿಕ ವಿಚಾರಕ್ಕೆ ದಂಪತಿ ನಡುವೆ ಜಗಳವಾಗಿದ್ದು, 6 ತಿಂಗ ಳಿಂದ ಇಬ್ಬರು ದೂರ ಇದ್ದರು. ಇತ್ತೀಚೆಗೆ ಪತ್ನಿಯಿಂದ ಬಾಲರಾಜ್ ಸಾಕಷ್ಟು ತೊಂದರೆ ಒಳಗಾಗಿದ್ದರು ಎಂದು ಹೇಳಲಾಗಿದೆ. ಅದರಿಂದ ಬೇಸತ್ತ ಬಾಲ ರಾಜ್ ನಾಲ್ಕೈದು ಪುಟಗಳ ಡೆತ್ನೋಟ್ ಬರೆದಿಟ್ಟು ನ.18ರಂದು ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿ ದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದರು.
2ನೇ ಮದುವೆಯಾಗಿದ್ದ ಕುಮಾರಿ: ಕನಕಪುರ ಮೂಲದ ಕುಮಾರಿ 16 ವರ್ಷಗಳ ಹಿಂದೆ ಸಂಬಂಧಿ ಯುವಕನನ್ನು ಮದುವೆಯಾಗಿದ್ದರು. ಆದರೆ, ಕೌಟುಂಬಿಕ ಕಾರಣಕ್ಕೆ ಪತಿಗೆ ವಿಚ್ಛೇದನ ನೀಡಿದ್ದರು. ಬಳಿಕ ಬಾಲರಾಜ್ ಪರಿಚಯವಾಗಿದ್ದು, ಇಬ್ಬರು ಪರಸ್ಪರ ಪ್ರೀತಿಸಿ 14 ವರ್ಷಗಳ ಹಿಂದೆ ಮದುವೆಯಾಗಿದ್ದರು. ಆದರೆ, ತನ್ನ ಕುಟುಂಬಕ್ಕೆ ಕುಮಾರಿಗೆ ಈಗಾಗಲೇ ಮದುವೆಯಾಗಿರುವ ವಿಚಾರ ತಿಳಿಸಿರಲಿಲ್ಲ. ಇತ್ತೀಚೆಗೆ ಈ ವಿಚಾರ ಕುಟುಂಬ ಸದಸ್ಯರಿಗೆ ಗೊತ್ತಾಗಿತ್ತು. ಅದರಿಂದಲೇ ಬಾಲರಾಜ್ ಕುಟುಂಬ ಸದಸ್ಯರು ಬೇಸರಗೊಂಡಿದ್ದರು. ಜತೆಗೆ ಪತ್ನಿಯ ನಡವಳಿಕೆ ಬಗ್ಗೆ ಅನು ಮಾನಗೊಂಡಿದ್ದ ಬಾಲರಾಜ್, ಆರೇಳು ತಿಂಗಳಿಂದ ಮದ್ಯ ವ್ಯಸನಿಯಾಗಿದ್ದು, ಕೆಲಸಕ್ಕೂ ಹೋಗುತ್ತಿರಲಿಲ್ಲ. ಅದರಿಂದ ಬೇಸತ್ತ ಕುಮಾರಿ 6 ತಿಂಗಳಿಂದ ದೂರವಾಗಿದ್ದರು ಎಂದು ಪೊಲೀಸರು ಹೇಳಿದರು.
ರಾಜಿ ಸಂಧಾನದಲ್ಲಿ ಮೋಸ, ಪತ್ನಿ ಕಾಲಿಗೆ ಬೀಳಿಸಿದ್ದಕ್ಕೆ ಬೇಸರವಾಗಿತ್ತು: ಡೆತ್ನೋಟ್ನಲ್ಲಿ ಉಲ್ಲೇಖ
6 ತಿಂಗಳ ಹಿಂದೆ ಪತ್ನಿ ಜತೆ ರಾಜಿ ಸಂಧಾನ ಮಾಡುವುದಾಗಿ ಕರೆಸಿಕೊಂಡ ಹಿರಿಯರು, ಪತ್ನಿಗೆ ಕಾಲಿಗೆ ಬೀಳಿಸಿದ್ದರು. ಅದರಿಂದ ನನಗೆ ತುಂಬ ನೋವಾಗಿದೆ. ಆಕೆಯೂ ತನಗೆ ಕಿರುಕುಳ ನೀಡಿದ್ದಾಳೆ. ಅಲ್ಲದೆ, ಅಂದು ರಾಜಿ ಸಂಧಾನದಲ್ಲಿದ್ದವರು ನನಗೆ ಮೋಸ ಮಾಡಿದ್ದಾರೆ ಎಂದು ಪತ್ನಿ ಸೇರಿ ರಾಜಿ-ಸಂಧಾನಕ್ಕೆ ಬಂದಿದ್ದ ಕೆಲವರ ಹೆಸರನ್ನು ಬಾಲರಾಜ್ ಡೆತ್ನೋಟ್ನಲ್ಲಿ ಉಲ್ಲೇಖೀಸಿದ್ದಾನೆ. ಜತೆಗೆ ತನ್ನ ಮೃತದೇಹದ ಜತೆ ತಾನು ಪಡೆದಿದ್ದ ಕ್ರಿಕೆಟ್ ಟ್ರೋಫಿ, ಬ್ಯಾಟ್, ಬಾಲ್, ವಿಕೆಟ್ ಇಡುವಂತೆ ಡೆತ್ ನೋಟ್ನಲ್ಲಿ ಕೋರಿದ್ದರು. ಅದರಂತೆ ಅಂತ್ಯ ಸಂಸ್ಕಾರ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದರು. ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಡಿ.9ರಂದು ಖಾಸಗಿ ಕಂಪನಿ ಉದ್ಯೋಗಿ ಅತುಲ್ ಸುಭಾಷ್ ಮತ್ತು ಡಿ.14ರಂದು ಹುಳಿಮಾವು ಠಾಣೆಯ ಹೆಡ್ಕಾನ್ಸ್ಟೇಬಲ್ ತಿಪ್ಪಣ್ಣ ಪತ್ನಿ ಮತ್ತು ಆಕೆಯ ಕುಟುಂಬ ಸದಸ್ಯರ ವಿರುದ್ಧ ಡೆತ್ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದರು.