ಚಂಡೀಗಢ: ಮಳೆಯ ನಡುವೆ ಚಾಲಕನ ನಿಯಂತ್ರಣ ತಪ್ಪಿದ ಬಸ್ಸೊಂದು ಸೇತುವೆಗೆ ಡಿಕ್ಕಿ ಹೊಡೆದು ನದಿಗೆ ಬಿದ್ದು ಸಂಭವಿಸಿದ ಅಪಘಾತದಲ್ಲಿ ಕನಿಷ್ಠ ಎಂಟು ಮಂದಿ ಮೃತಪಟ್ಟು ಹಲವರು ಗಾಯಗೊಂಡಿರುವ ಘಟನೆ ಪಂಜಾಬ್ನ ಬಟಿಂಡಾದಲ್ಲಿ ಶುಕ್ರವಾರ(ಡಿ.27) ಸಂಭವಿಸಿದೆ
ಈ ಪ್ರದೇಶದಲ್ಲಿ ಕೆಲ ದಿನಗಳಿಂದ ಮಳೆಯಾಗುತ್ತಿದ್ದು ಬಸ್ಸು ಸೇತುವೆಯ ಮೇಲೆ ಬರುತ್ತಿದ್ದಂತೆ ಚಾಲಕನ ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದಿದೆ ಎನ್ನಲಾಗಿದೆ. ಸೇತುವೆಗೆ ಯಾವುದೇ ತಡೆಗೋಡೆ ಇಲ್ಲದೆ ಇರುವುದೇ ಹೆಚ್ಚಿನ ದುರಂತಕ್ಕೆ ಕಾರಣ ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
20 ಕ್ಕೂ ಹೆಚ್ಚು ಪ್ರಯಾಣಿಕರನ್ನು ಹೊತ್ತ ಬಸ್ ತಲ್ವಾಂಡಿ ಸಾಬೋದಿಂದ ಬಟಿಂಡಾಗೆ ತೆರಳುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಅಪಘಾತ ಸಂಭವಿಸಿದ ಕೂಡಲೇ ಸ್ಥಳೀಯರು ಜನರ ರಕ್ಷಣೆಗೆ ಮುಂದಾಗಿದ್ದಾರೆ. ಬಳಿಕ ಬಂದ ಪೊಲೀಸರು ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸಲು ನೆರವಾದರು. ಘಟನೆ ಸಂಭವಿಸಿದ ವೇಳೆ ಐವರು ಸ್ಥಳದಲ್ಲೇ ಮೃತಪಟ್ಟಿದು, ಗಂಭೀರ ಗಾಯಗೊಂಡಿದ್ದ ಮೂವರು ಆಸ್ಪತ್ರೆ ಮಾರ್ಗ ಮಧ್ಯೆ ಮೃತಪಟ್ಟಿರುವುದಾಗಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.