Advertisement

Living together; ವಿಚ್ಛೇದನ ತಡೆಯಲು ಲಿವಿಂಗ್‌ ಟುಗೆದರ್‌ ಸಹಕಾರಿಯೇ?

06:30 PM Dec 25, 2024 | Team Udayavani |

ನಾವು ಪ್ರೀತಿಸುವ ವ್ಯಕ್ತಿಯೊಂದಿಗೆ ನೆಲೆಸುವುದು ಎಂದರೆ ಒಂದು ಸುಂದರ ಅನುಭೂತಿ ಅಲ್ಲವೇ?. ಆದರೆ ಅಲ್ಲಿ ಸಣ್ಣ ಸಣ್ಣ ಮುನಿಸು, ಮನಸ್ತಾಪ ಸಹಜವೇ. ಜೀವನದಲ್ಲಿ ಒಂದಾಗಿ ಬಾಳಿ ಬದುಕಿದ ಅದೆಷ್ಟೋ ದಂಪತಿಗಳು “ನೀವು ಹೀಗೆ ಅಂತ ಗೊತ್ತಿರ್ತಿದ್ರೆ ನಾನು ನಿಮ್ಮನ್ನ ಮದುವೆಯೇ ಆಗ್ತಿರ್ಲಿಲ್ಲ” ಎಂದು ಹೇಳಿದರೂ ಒಬ್ಬರನ್ನೊಬ್ಬರು ಬಿಟ್ಟು ಬಾಳುವುದಿಲ್ಲ!.

Advertisement

ಆದರೆ ಕೆಲವು ದಂಪತಿಗಳು ಈ ಪರಿಯ ಮಾತುಗಳನ್ನು ತಮಾಷೆಯಾಗಿ ಹೇಳಿದರೂ, ಇನ್ನೂ ಕೆಲವು ದಂಪತಿಗಳ ವಿಷಯದಲ್ಲಿ ನಿಜವಾದ ಸಂಗತಿಯೇ ಆಗಿರುತ್ತದೆ. ಯಾವುದೋ ಕಾರಣಕ್ಕಾಗಿ ಪರಸ್ಪರ ಹೊಂದಾಣಿಕೆಯಾಗದೆ ದಂಪತಿಗಳು ಬೇಸತ್ತು, ಒಂದಾಗಿ ಬಾಳಲು ಸಾಧ್ಯವೇ ಇಲ್ಲ ಎನ್ನುವಂತಹ ಸಂದರ್ಭದಲ್ಲಿ ವಿಚ್ಛೇದನ ಪಡೆಯುವ ಮೂಲಕ ತಮ್ಮ ದಾಂಪತ್ಯವನ್ನು ಮುರಿಯುತ್ತಾರೆ. ಅದಕ್ಕೆ ತಕ್ಕಂತೆ ಪ್ರಸ್ತುತ ಸಮಾಜದಲ್ಲಿ ಮೊದಲಿನಂತೆ ವಿಚ್ಛೇದನ ಎನ್ನುವುದು ಕಳಂಕವಾಗಿಯೋ, ಸಾಮಾಜಿಕ ನಿಷೇಧವಾಗಿಯೋ ಉಳಿಯದೆ ಅದು ಸಾಮಾನ್ಯವಾಗಿದೆ.

ವಿಚ್ಚೇದನಕ್ಕೆ ಮತ್ತೊಂದು ಕಾರಣವೆಂದರೆ ಮನೆಯಲ್ಲಿ ಗಂಡ ಹೆಂಡತಿ ಇಬ್ಬರೂ ದುಡಿಯುತ್ತಿದ್ದರೆ ಯಾರಾದರೊಬ್ಬರು ಮಾತ್ರ ಎಲ್ಲವನ್ನೂ ನಿಭಾಯಿಸಬೇಕು ಎನ್ನುವಾಗ ಕಲಹ ಉಂಟಾಗುತ್ತದೆ. ಹೆಂಡತಿಯಾದವಳು ಒಬ್ಬಳೇ ಅತ್ತ ಮನೆಯನ್ನೂ ಇತ್ತ ಆಫೀಸನ್ನು, ಇನ್ನೊಂದೆಡೆ ಮಕ್ಕಳನ್ನು ನಿಬಾಯಿಸಬೇಕು ಎಂದಾಗ ಜೀವನವೇ ಬೇಡ ಎನ್ನುವಷ್ಟು ಬೇಸರವಾಗುತ್ತದೆ. ಇದು ಗಂಡ ಆದವನಿಗೂ ಅನ್ವಯಿಸುತ್ತದೆ. ಇಂತಹ ಸಂದರ್ಭದಲ್ಲಿ ಇಬ್ಬರು ಹೊಂದಿಕೊಂಡು ಪರಸ್ಪರ ಸಹಾಯ ಮಾಡುವ ಮೂಲಕ ಜೀವನವನ್ನು ಸಾಗಿಸಿದರೆ ಉತ್ತಮ. ಅದರ ಬದಲು ಸಂಸಾರಕ್ಕೆ ಒಬ್ಬರೇ ಹೆಗಲು ನೀಡಿ ಅವರ ಮೇಲೆ ಮತ್ತೂ ಭಾರವನ್ನು ಹೇರಿದರೆ ಸಂಸಾರ ಒಡೆಯುತ್ತದೆ.

ಕೆಲವೊಮ್ಮೆ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ತಮ್ಮ ತಮ್ಮ ಸಂಗಾತಿಯ ಮೇಲಿನ ನಿರೀಕ್ಷೆಯ ಮಟ್ಟ ಏರುವ ಸಾಧ್ಯ ತೆಯಿದೆ. ಹಲವಾರು ವ್ಯಕ್ತಿಗಳು ತಾನು ಪ್ರೀತಿಸುವ ವ್ಯಕ್ತಿಯಿಂದಲೋ, ತನ್ನ ಸಂಗಾತಿಯಿಂದಲೋ ಅಧಿಕವಾದ ಅಥವಾ ಲೆಕ್ಕಕ್ಕಿಂತ ಹೆಚ್ಚಿನ ನಿರೀಕ್ಷೆಯನ್ನಿಟ್ಟಿರುತ್ತಾರೆ. ಅದು ನೆರವೇರದೇ ಇದ್ದಾಗ ಕೂಡ ದಂಪತಿಗಳ ನಡುವೆ ಬಿರುಕು ಮೂಡಬಹುದು.

Advertisement

ಈಗಿನ ಯುವಜನರಲ್ಲಿ ತಾಳ್ಮೆಯು ಕಡಿಮೆ. ದಂಪತಿಯ ನಡುವೆ ಸಣ್ಣ ಮಾತಾದರೂ ಅಲ್ಲಿ ದೊಡ್ಡ ಮನಸ್ತಾಪಕ್ಕೆ ಕಾರಣವಾಗಬಹುದು. ಅದು ಹಣಕಾಸು, ಭಾವನೆ, ಗೌರವ, ಪರಸ್ಪರ ಅರ್ಥ ಮಾಡಿಕೊಳ್ಳುವುದರಲ್ಲಿ ವಿಫಲ ಇತ್ಯಾದಿ ಕಾರಣಗಳನ್ನು ಒಳಗೊಂಡಿರಬಹುದು. ಅದನ್ನು ಕೂಡಲೇ ಸರಿಪಡಿಸಿದರೆ ಒಳಿತು. ಅದರ ಬದಲು ಅದನ್ನು ಮನಸಲ್ಲೇ ಇಟ್ಟುಕೊಳ್ಳುವುದರಿಂದ ಒಂದು ದಿನ ವಿಷಯ ಸ್ಪೋಟಗೊಂಡು ಸಂಬಂಧದಲ್ಲಿ ಬಿರುಕು ಮೂಡಿಸುವ ಸಾಧ್ಯತೆಯೇ ಹೆಚ್ಚು. ಮೊದಲ ಒಂದು ವರ್ಷ ಹೊಂದಿಕೊಂಡು ಬಾಳ್ವೆ ನಡೆಸಿದರೂ ಕೂಡ ನಂತರದ ದಿನಗಳಲ್ಲಿ ಮನಸ್ಸಿನಲ್ಲಿ ಒಂದೊಂದಾಗಿ ನೆಲೆನಿಂತ ವಿಷಯವು ದೊಡ್ಡದಾಗಿ ಕಲಹಕ್ಕೆ ಕಾರಣವಾಗುತ್ತದೆ. ಅದು ವಿಚ್ಛೇದನಕ್ಕೆ ಕೂಡ ಕಾರಣವಾಗಬಹುದು.

ಆದರೆ ಲಿವಿಂಗ್‌ ಟುಗೆದರ್‌ ಎನ್ನುವ ಪರಿಕಲ್ಪನೆಯು ಮದುವೆ ಎನ್ನುವ ವಿಷಯಕ್ಕಿಂತ ಬಹಳಷ್ಟು ವಿಭಿನ್ನವಾಗಿದೆ. ಈಗಿನ ಯುವ ಜನರು ಯಾವುದೇ ಒಪ್ಪಂದಗಳಿಗೆ, ಬಂಧನಗಳಿಗೆ ಒಳಗಾಗದೆ ಸ್ವತಂತ್ರವಾಗಿ ಬಾಳಲು ಬಯಸುತ್ತಾರೆ. ಅಂತಹ ಸಾಕಷ್ಟು ಜನರಿಗೆ ಲಿವಿಂಗ್‌ ಟುಗೆದರ್‌ ಎನ್ನುವ ಪರಿಕಲ್ಪನೆಯು ಹಿಡಿಸುತ್ತದೆ.

ಅಧ್ಯಯನಗಳನ್ನು ವೀಕ್ಷಿಸಿದಾಗ ಅವುಗಳಲ್ಲಿ ಮಿಶ್ರ ಫಲಿತಾಂಶ ದೊರೆತಿದ್ದು, ಕೆಲವು ಅಧ್ಯಯನದಲ್ಲಿ ಮದುವೆಗೂ ಮೊದಲು ಒಂದೇ ಮನೆಯಲ್ಲಿ ಜೀವಿಸುವ ಜೋಡಿಗಳು ತಮ್ಮ ದಾಂಪತ್ಯ ಜೀವನದಲ್ಲಿ ಹೆಚ್ಚು ತೃಪ್ತಿ, ಪರಸ್ಪರ ಹೊಂದಾಣಿಕೆಯ ಜೀವನ ನಡೆಸುತ್ತಿದ್ದಾರೆ ಎಂದಿದ್ದರೂ, ಇನ್ನೂ ಕೆಲವು ಅಧ್ಯಯನದಲ್ಲಿ ಜೋಡಿಗಳು ತನ್ನ ಸಂಗಾತಿಯು ತನಗೆ ಹೊಂದಿಕೊಳ್ಳುತ್ತಾರೆ ಎಂದು ತಮ್ಮ ಅನುಕೂಲಕ್ಕಾಗಿ ವಿವಾಹವಾಗುತ್ತಾರೆ ಎಂಬ ಫಲಿತಾಂಶವೂ ದೊರೆತಿದೆ.

ಆದರೆ ಕೆಲವರು ಹೇಳುವ ಪ್ರಕಾರ, ವಿವಾಹಕ್ಕಿಂತ ಮೊದಲೇ ಒಂದಾಗಿ ಬಾಳುವುದರಿಂದ ಪರಸ್ಪರ ಒಬ್ಬರನ್ನೊಬ್ಬರು ಅರ್ಥೈಸಲು, ಅವರ ದೈನಂದಿನ ಜೀವನವನ್ನು ಅರ್ಥ ಮಾಡಿಕೊಳ್ಳಲು ಸಹಾಯವಾಗುತ್ತದೆ ಎನ್ನುತ್ತಾರೆ. ಇದರಿಂದಾಗಿ ವಿವಾಹದ ನಂತರದ ದಿನಗಳಲ್ಲೂ ಕೂಡ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುತ್ತಾರೆ, ಹಾಗೆಯೇ ದಂಪತಿಗಳು ವಿಚ್ಛೇದನ ಪಡೆಯುವ ಪ್ರಮಾಣವು ಕಡಿಮೆಯಾಗುತ್ತದೆ.

ಲಿವಿಂಗ್‌ ಟುಗೆದರ್‌  ಮುನ್ನ ಕೆಲವೊಂದು ತೀರ್ಮಾನಗಳನ್ನು ಮೊದಲೇ ತೆಗೆದುಕೊಳ್ಳುವ ಅವಶ್ಯಕತೆಯಿದೆ. ಅವು ಯಾವುದೆಂದರೆ,
-ಲಿವಿಂಗ್‌ ಟುಗೆದರ್‌ ವಿವಾಹವಾಗುವ ಸಲುವಾಗಿಯೋ ಅಲ್ಲವೋ ಎಂಬ ಅಂಶವು ಬಹಳ ಮುಖ್ಯವಾಗಿದೆ.
-ಮನೆಯ ವಸ್ತುಗಳ ಖರೀದಿ ಹಣ, ಕೆಲಸಗಳ ಹಂಚಿಕೊಳ್ಳುವಿಕೆ.
-ಉತ್ತಮ ಸಂವಹನವನ್ನು ಉಳಿಸಿಕೊಳ್ಳುವುದು.
-ಲಿವಿಂಗ್‌ ಟುಗೆದರ್‌‌ ಎನ್ನುವಾಗ ಪೂರ್ತಿ ಸಮಯವನ್ನು ತನ್ನ ಸಂಗಾತಿಯೊಂದಿಗೆ ಕಳೆಯುವುದು ಎಂದಲ್ಲ. ಹಾಗಾಗಿ ಸಂಗಾತಿಯ ಏಕಾಂತಕ್ಕೆ ಗೌರವ ನೀಡುವುದು.
-ಒಟ್ಟಿಗೆ ಇರುವಾಗ ಯಾವ ಅಂಶ ಮುಖ್ಯ ಯಾವುದು ಅಲ್ಲ ಎಂಬುದನ್ನು ಖಚಿತಪಡಿಸಿಕೊಂಡು ಅದು ಮುಂದಿನ ಜೀವನಕ್ಕೆ ಯಾವುದೇ ಸಮಸ್ಯೆ ಆಗದಂತೆ ನಿರ್ಧಾರವನ್ನು ತೆಗೆದುಕೊಳ್ಳುವುದು.

ಹಾಗಾದರೆ ವಿವಾಹ ಪೂರ್ವ ಸಹಬಾಳ್ವೆಯು ಯಾವ ರೀತಿಯಲ್ಲೆಲ್ಲಾ ವಿವಾಹದ ನಂತರಕ್ಕೆ ಸಹಕಾರಿಯಾಗಲಿದೆ?

ಮದುವೆಗೂ ಮೊದಲೇ ಒಟ್ಟಿಗೆ ವಾಸಿಸುವುದರಿಂದ ಇಬ್ಬರು ಒಬ್ಬರನ್ನೊಬ್ಬರು ಅರ್ಥೈಸಿಕೊಳ್ಳಲು ಸಾಧ್ಯ. ಜೊತೆಗೆ ಒಬ್ಬರಿಗೊಬ್ಬರು ಹೊಂದಿಕೊಳ್ಳಲು ಸಮಯಾವಕಾಶ ದೊರೆಯುತ್ತದೆ. ತನ್ನ ಸಂಗಾತಿಯ ನಡವಳಿಕೆಯನ್ನು, ಇಷ್ಟ ಕಷ್ಟಗಳನ್ನು ಅರ್ಥಮಾಡಿಕೊಳ್ಳಲು ಅವಕಾಶ ದೊರೆಯುತ್ತದೆ.

ಪರಸ್ಪರ ಸಂವಹನ ನಡೆಸಲು, ಹಾಗೆಯೇ ವ್ಯಕ್ತಿಯ ಗುಣಲಕ್ಷಣಗಳನ್ನು ಅರಿಯಲು ಸಹಾಯವಾಗುತ್ತದೆ.

ಇನ್ನೊಂದು ಉಪಯೋಗವೆಂದರೆ ಯಾವುದೇ ಬಲವಂತಕ್ಕೆ, ಸಾಮಾಜಿಕ ಒತ್ತಡಕ್ಕೆ, ಕುಟುಂಬದ ಒತ್ತಡಕ್ಕೆ ಹೆದರದೇ, ವಿಚ್ಛೇದನವನ್ನೂ ನೀಡದೆ ಸ್ವತಂತ್ರವಾಗಿ ಆ ಸಂಬಂಧವನ್ನು ಮುರಿಯಬಹುದು.

ಆದರೆ ಲಿವಿಂಗ್‌ ಟುಗೆದರ್‌ ಪರಿಕಲ್ಪನೆಯಲ್ಲಿ ಒಳ್ಳೆಯ ಅಂಶದಂತೆ ಹಲವಾರು ದುಷ್ಪರಿಣಾಮಗಳೂ ಇವೆ.

ಭಾರತದಲ್ಲಿ ಲಿವಿಂಗ್‌ ಟುಗೆದರ್‌ ಎನ್ನುವ ಪರಿಕಲ್ಪನೆಯು ಈಗ ಹಲವಾರು ವಿರೋಧಗಳ ನಡುವೆಯೂ ನಗರ ಪ್ರದೇಶದಲ್ಲಿ ಕಾಣಲು ಸಿಗುತ್ತಿದೆ. ಆದರೂ ಜೋಡಿಯು ಕೆಲವು ಸಮಯದವರೆಗೆ ಒಟ್ಟಿಗೆ ಇದ್ದು, ಯಾವುದೇ ಒಪ್ಪಂದವಿಲ್ಲದ ಕಾರಣ ಸ್ವತಂತ್ರವಾಗಿ ಬೇರಾಗಬಹುದು. ಆದರೆ ಕಲೆ, ಸಂಸ್ಕೃತಿ, ಶಾಸ್ತ್ರ, ಸಂಪ್ರದಾಯ, ಪದ್ದತಿಗಳ ಬೀಡಾದ ಭಾರತದಲ್ಲಿ ಜನರು ಈ ಹೊಸ ಪದ್ದತಿಯನ್ನು ಅಷ್ಟು ಸುಲಭವಾಗಿ ಒಪ್ಪಿಕೊಳ್ಳಲು ತಯಾರಿಲ್ಲ. ಹಾಗಾಗಿ ವಿವಾಹಕ್ಕೂ ಮೊದಲೇ ಒಟ್ಟಿಗೆ ಬಾಳುವ ಜೋಡಿಯನ್ನು ಸಮಾಜವು ದೂರವಿಡಬಹುದು. ಜೊತೆಗೆ ಅವರನ್ನು ನೋಡುವ ರೀತಿಯು ಬದಲಾಗಬಹುದು.

ಕೆಲವೊಮ್ಮೆ ಸಂಬಂಧ ಮುರಿದರೂ, ಅಲ್ಲಿ ಯಾವುದೇ ಕಟ್ಟುಪಾಡುಗಳು ಇರದಿದ್ದರೂ ಇಬ್ಬರ ನಡುವೆ ವಿಚ್ಛೇದನ ನೀಡುವುದಕ್ಕಿಂತ ಹೆಚ್ಚಿನ ಬೇಸರವನ್ನು ಹುಟ್ಟು ಹಾಕಬಹುದು. ಕಳೆದ ದಿನಗಳು, ಮನೆ, ವಾತಾವರಣ, ವಸ್ತುಗಳು ನೆನಪನ್ನು ಮರುಕಳಿಸಬಹುದು.

ಲಿವಿಂಗ್‌ ಟುಗೆದರ್‌ ಎನ್ನುವುದು ಪರಸ್ಪರ ಅರ್ಥೈಸಲು, ಯಾವುದೇ ರೀತಿಯ ಒಪ್ಪಂದವನ್ನು ಹೊಂದದೆ, ಕೆಲವು ಮುಖ್ಯ ತೀರ್ಮಾನಗಳನ್ನು ತೆಗೆದುಕೊಂಡು ಒಂದೇ ಮನೆಯಲ್ಲಿ ವಾಸಿಸುವುದಾದರೆ , ವಿವಾಹ ಎನ್ನುವುದು ಒಬ್ಬರನ್ನೊಬ್ಬರು ಅರ್ಥೈಸಿಕೊಂಡು, ಪರಸ್ಪರ ಒಬ್ಬರಿಗೊಬ್ಬರು ಹೆಗಲಾಗಿ ಬಾಳುವುದು. ಲಿವಿಂಗ್‌ ಟುಗೆದರ್‌ ನಲ್ಲಿ ಬಾಳ್ವೆ ನಡೆಸಿದ ಜೋಡಿಗಳಲ್ಲಿ ವಿವಾಹದ ನಂತರ ವಿಚ್ಛೇದನ ಪಡೆಯುವ ಸಂಖ್ಯೆ ಕಡಿಮೆ ಕಂಡರೂ, ವಿವಾಹಕ್ಕಿಂತ ಮೊದಲೇ ಬಹಳಷ್ಟು ಸಂಬಂಧಗಳು ಬೇರಾಗಿವೆ. ಹಾಗಿದ್ದಾಗ ಲಿವಿಂಗ್‌ ಟುಗೆದರ್‌ ನಿಂದ ವಿಚ್ಛೇದನವಾಗುವ ಸಂಖ್ಯೆ ಕಡಿಮೆ ಎಂದಾಗುವುದಿಲ್ಲ. ಹಾಗಾಗಿ ವಿವಾಹ ಹಾಗೂ ಲಿವಿಂಗ್‌ ಟುಗೆದರ್‌ ಎರಡರಲ್ಲೂ ಒಳಿತು ಕೆಡುಕಿದೆ.

ಪ್ರತಿಯೊಬ್ಬರಿಗೂ ತಮ್ಮ ಜೀವನಕ್ಕೆ ರೂವಾರಿಯಾಗುವ ಹಕ್ಕಿದೆ. ಹಾಗೆಯೇ ಅವರ ಸಂಗಾತಿಯನ್ನು ಆಯ್ಕೆ ಮಾಡುವ ಹಕ್ಕೂ ಇದೆ. ತಮ್ಮ ಸಂಗಾತಿಯೊಂದಿಗೆ ಮದುವೆಯ ಮೂಲಕವೋ ಅಥವಾ ಲಿವಿಂಗ್‌ ಟುಗೆದರ್‌ ಮೂಲಕವೋ ಬಾಳಬೇಕೋ ಬೇಡವೋ ಎಂಬುದು ಅವರವರಿಗೆ ಬಿಟ್ಟದ್ದು.

-ಪೂರ್ಣಶ್ರೀ.ಕೆ

Advertisement

Udayavani is now on Telegram. Click here to join our channel and stay updated with the latest news.

Next