ಭಾಷೆಯ ಶೈಲಿ ನದಿಯಿಂದ ನದಿಗೆ ಬದಲಾಗುತ್ತದಂತೆ. ಭಾಷೆ, ಸಂಪ್ರದಾಯ, ಉಡುಗೆ- ತೊಡುಗೆ, ಆಹಾರ ಪದ್ಧತಿಯಿಂದ ಹಿಡಿದು ಎಲ್ಲದರಲ್ಲೂ ಕಾಶಿಯಿಂದ, ಕರುನಾಡಿನ ಯಲ್ಲಾಪುರಕ್ಕೆ ಅಜಗಜಾಂತರ. ಆ ವ್ಯತ್ಯಾಸಗಳನ್ನು ಹತ್ತಿರವಾಗಿಸಿಕೊಂಡು, ಕರುನಾಡ ಸಂಸ್ಕೃತಿಯಲ್ಲಿ ಬೆರೆತ ಹೆಣ್ಣು, ಅನಿತಾ. ಕರ್ನಾಟಕದ ಮನೆಗಳನ್ನು, ಉತ್ತರ ಭಾರತದ ಅದೆಷ್ಟೋ ಜ್ಯೋತಿಗಳು ಬೆಳಗುತ್ತಿವೆ. ಅನಿತಾ ಕೂಡ ಹಾಗೆಯೇ ಇಲ್ಲಿಗೆ ಬಂದವರು.
ಅಯೋಧ್ಯೆಯ ಬಲರಾಮಪುರದ ಅವರು, ಯಲ್ಲಾಪುರ ತಾಲೂಕಿನ ಗಾಳಿಕೆರೆಯ ಶಿವಾನಂದ ಗಾಂವ್ಕರ್‌ರ ಧರ್ಮಪತ್ನಿ. “ಮದುಮಗಳಾಗಿ ಯಲ್ಲಾಪುರಕ್ಕೆ ಬಂದೆ. ಮನೆಯಿಂದ ಹೊರಗೆ ಕಾಲಿಟ್ಟಾಗಲೆಲ್ಲ, ಭಾಷೆಯೇ ಬಹುದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಯಾರಾದರೂ ಮಾತನಾಡಿಸಿದರೆ, ಅರ್ಥವಾಗುತ್ತಿರಲಿಲ್ಲ. ಪ್ರತಿಯಾಗಿ ಏನು ಉತ್ತರಿಸಬೇಕು ಅಂತ ತೋಚುತ್ತಲೂ ಇರಲಿಲ್ಲ. ಯಾರ ಜೊತೆಗೂ ಮಾತನಾಡದೆ, ಹೇಗೆ ದಿನ ಕಳೆಯುವುದು ಎಂಬುದು ದೊಡ್ಡ ಚಿಂತೆಯೇ ಆಗಿತ್ತು.
ಆದರೆ, ನನ್ನವರು ಜೊತೆಗಿದ್ದು ನನಗೆ ಮಾತಾದರು. ಕನ್ನಡ ಕೇಳುವುದೇ ಕಿವಿಗೆ ಇಂಪಾಯಿತು’ ಎಂದು ಆರಂಭದ ದಿನಗಳನ್ನು ನೆನೆಯುತ್ತಾರೆ, ಅನಿತಾ. ದಕ್ಷಿಣೋತ್ತರ ವೈವಾಹಿಕ ಸಂಬಂಧದಿಂದ ಇಲ್ಲಿಗೆ ಬಂದ ಇವರಿಗೆ, ಆರಂಭದಲ್ಲಿ ಆಹಾರ ಪದ್ಧತಿ ಅಷ್ಟಾಗಿ ಒಗ್ಗಿಬರಲೇ ಇಲ್ಲ. ಅಲ್ಲಿ ಪೂರಿ- ಆಲೂಸಬ್ಜಿ, ದಾಲ್- ರೋಟಿ ತಿಂದು ರೂಢಿ. ಇಲ್ಲಿಯ ಅನ್ನ, ತರಕಾರಿ ಸಾರು, ದೋಸೆ ಮಾಡುವುದು, ತಿನ್ನುವುದು- ಎರಡೂ ಹೊಸತು.
ಹಬ್ಬ ಹರಿದಿನಗಳ ಆಚರಣೆಯಲ್ಲೂ ವ್ಯತ್ಯಾಸವಿತ್ತು. “ನಮ್ಮಲ್ಲಿ ನವರಾತ್ರಿಗೆ ವಿಶೇಷ ಸ್ಥಾನ. ಇಲ್ಲಿ ಚೌತಿಯಲ್ಲಿ ಕಾಣುವ ಗಣಪನ ವೈಭವ, ಅಲ್ಲಿ ಕಾಣದು. ನವರಾತ್ರಿಯ ದಿನಗಳು ಈಗಲೂ ಕಣ್ಮುಂದೆ ಬರುತ್ತವೆ. ಇಲ್ಲಿಯ ಹಾಗೆ ಗಂಡಸರು ಅಲ್ಲಿ ಪೂಜೆ ಮಾಡುವುದಿಲ್ಲ. ಪೂಜೆಯಲ್ಲಿ ಹೆಂಗಸರಿಗೇ ಪ್ರಾಶಸ್ತ್ಯ. ಅಲ್ಲಿನ ಮಂದಿರ, ನದಿ, ಪುಟ್ಟ ಬಾಲಕಿಯರಿಗೆ ಚುನರಿ ತೊಡಿಸಿ ಪಾದಪೂಜೆ ಮಾಡಿ ದುರ್ಗೆ ಎಂದು ಪೂಜಿಸುವುದು- ಮರೆಯದ ನೆನಪುಗಳು. ಆದರೂ, ಕರ್ನಾಟಕದ ಸಂಪ್ರದಾಯ ಭಿನ್ನ ಖುಷಿ ನೀಡುತ್ತಿದೆ’ ಎನ್ನುತ್ತಾರವರು.
“ಬಲರಾಮಪುರಕ್ಕಿಂತ, ಯಲ್ಲಾಪುರದ ತಂಪು ವಾತಾವರಣ ನನಗೆ ಇಷ್ಟವಾಗಿದೆ. ಜೀವನಕ್ಕೆ ಅಲ್ಲಿಯಷ್ಟು ಕಷ್ಟಪಡಬೇಕಾದ ಪರಿಸ್ಥಿತಿ ಇಲ್ಲಿಲ್ಲ. ಇದು ಈ ನಾಡಿನ ಹೆಗ್ಗಳಿಕೆ. ಬಲರಾಮಪುರದಲ್ಲಿ ಮದುವೆ ಆಗದ ಹುಡುಗಿಯರಿಗೆ, ಕರ್ನಾಟಕದವರನ್ನು ಮದುವೆಯಾಗಲು ಹೇಳುತ್ತೇನೆ’ ಎನ್ನುವಾಗ, ಅನಿತಾ ಅವರ ಮೊಗದಲ್ಲಿ ನಗುವಿತ್ತು. “ಯಾರಿಗೆ ಅದೃಷ್ಟ ಇರುತ್ತೋ, ಅವರು ಕರ್ನಾಟಕಕ್ಕೆ ಬರುತ್ತಾರೆ. ಯಹೀಂ ಸ್ವರ್ಗ್ ಹೇ’- ಈ ನೆಲದ ಅವರಿಗಿದ್ದ ಪ್ರೀತಿಯೆಷ್ಟು ಎನ್ನುವುದಕ್ಕೆ ಇದೊಂದು ಮಾತು ಸಾಕೇನೋ!
* ಸುಮಾ ಕಂಚೀಪಾಲ್