‘ಲವ್ ರೆಡ್ಡಿ’ – ಈ ಸಿನಿಮಾ ಹೆಸರನ್ನು ನೀವು ಕನ್ನಡಕ್ಕಿಂತ ಹೆಚ್ಚಾಗಿ ತೆಲುಗು ಚಿತ್ರರಂಗದಲ್ಲಿ ಕೇಳಿರುತ್ತೀರಿ. ಏಕೆಂದರೆ ಇದು ಬಹುತೇಕ ಕನ್ನಡಿಗರೇ ಸೇರಿ ಮಾಡಿರುವ ಸಿನಿಮಾ.
ತೆಲುಗು-ಕನ್ನಡದಲ್ಲಿ ತಯಾರಾದ ಸಿನಿಮಾ ಮೊದಲು ತೆರೆಕಂಡಿದ್ದು ತೆಲುಗಿನಲ್ಲಿ. ಅಕ್ಟೋಬರ್ 18ಕ್ಕೆ ತೆರೆಕಂಡ ಸಿನಿಮಾ ಅಲ್ಲಿ ಹಿಟ್ಲಿಸ್ಟ್ ಸೇರಿದೆ. ಈಗ ಈ ಚಿತ್ರ ಕನ್ನಡದಲ್ಲೂ ಬಿಡುಗಡೆಯಾಗುತ್ತಿದೆ.
ನ.22ರಂದು ರಾಜ್ಯಾದ್ಯಂತ ತೆರೆಕಾಣುತ್ತಿರುವ “ಲವ್ ರೆಡ್ಡಿ’ ಚಿತ್ರಕ್ಕೆ ಬೆನ್ನೆಲುಬಾಗಿ ನಿಂತಿರುವುದು ನಟ, ನಿರ್ದೇಶಕ ವಿಜಯ್ ಕುಮಾರ್. ಈಗಾಗಲೇ ಸಿನಿಮಾವನ್ನು ನೋಡಿ, ಕಂಟೆಂಟ್ ಇಷ್ಟವಾಗಿ ಲವ್ ರೆಡ್ಡಿ ಸಿನಿಮಾವನ್ನು ಕನ್ನಡದಲ್ಲಿ ಅರ್ಪಿಸಲು ಮುಂದಾಗಿದ್ದಾರೆ. ಜೊತೆಗೆ ಹೊಂಬಾಳೆ ಸಂಸ್ಥೆ ಕನ್ನಡದ ವಿತರಣೆಯ ಜವಾಬ್ದಾರಿಯನ್ನು ಹೊತ್ತಿದೆ.
ಆಂಧ್ರ ಹಾಗೂ ಕರ್ನಾಟಕದ ಗಡಿ ಭಾಗದಲ್ಲಿ ನಡೆದ ನೈಜ ಘಟನೆಯಾಧಾರಿತ ಸಿನಿಮಾ ಇದಾಗಿದೆ. ಲವ್ ರೆಡ್ಡಿ ಕನ್ನಡ ವರ್ಷನ್ ನ ಟ್ರೇಲರ್ ಅನ್ನು ನಟ ವಿಜಯ್ ಕುಮಾರ್ ರಿಲೀಸ್ ಮಾಡುವುದರ ಮೂಲಕ ಹೊಸಬರಿಗೆ, ಹೊಸತಂಡಕ್ಕೆ ಬೆನ್ನೆಲುಬಾಗಿ ನಿಂತಿದ್ದಾರೆ.
ಸ್ಮರಣ್ ಈ ಚಿತ್ರದ ನಿರ್ದೇಶಕ. ಚಿತ್ರದ ಬಗ್ಗೆ ಮಾತನಾಡುವ ಸ್ಮರಣ್, ತೆಲುಗಿನಲ್ಲಿ ಸಿನಿಮಾಹಿಟ್ ಆಗಿದೆ. ನಮ್ಮ ಲವ್ ರೆಡ್ಡಿ ಈಗ ಇದೇ 22ಕ್ಕೆ ಕನ್ನಡದಲ್ಲಿ ಡಬ್ ಆಗಿ ರಿಲೀಸ್ ಆಗುತ್ತಿದೆ. ಈಗಾಗಲೇ ತೆಲುಗಿನ ಸ್ಟಾರ್ ನಟ ಪ್ರಭಾಸ್, ಹಾಗೂ ಸ್ಟಾರ್ ನಿರ್ದೇಶಕರು ಚಿತ್ರದ ಬಗ್ಗೆ ಟ್ವೀಟ್ ಮಾಡಿದ್ದಾರೆ. ಕನ್ನಡದಲ್ಲಿ ಸ್ಯಾಂಡಲ್ವುಡ್ ಸಲಗ ವಿಜಯ್ ಕುಮಾರ್ ಬೆಂಬಲ ನೀಡುತ್ತಿದ್ದಾರೆ. ಇದು ಬರೀ ಹೆಸರಲ್ಲ, ನಮ್ಮ ಬದುಕು ಎಂದರು. ಚಿತ್ರದಲ್ಲಿ ಅಂಜನ್ ರಾಮಚಂದ್ರ ಹಾಗೂ ಶ್ರಾವಣಿ ನಾಯಕ-ನಾಯಕಿಯಾಗಿ ನಟಿಸಿದ್ದಾರೆ.
ನಟ ವಿಜಯ್ ಕುಮಾರ್ ಮಾತನಾಡಿ, “ಲವ್ ರೆಡ್ಡಿ ಸಿನಿಮಾ ನೋಡಿ ನಾಲ್ಕು ದಿನ ಆಯಿತು. ಪ್ರತಿ ಪಾತ್ರಗಳು ಈಗಲೂ ನನಗೆ ಕಾಡುತ್ತಿದೆ. ಅಷ್ಟರ ಮಟ್ಟಿಗೆ ಲವ್ ರೆಡ್ಡಿ ಸಿನಿಮಾ ಮೂಡಿ ಬಂದಿದೆ. ಸ್ವಲ್ಪ ಕೆಲಸಗಳಿಗೆ ದುಬೈಗೆ ಹೋಗ್ತಾ ಇದ್ದೀನಿ, ಸಾಧ್ಯ ಆದಷ್ಟು ಅಲ್ಲಿನವರನ್ನು ಭೇಟಿಯಾಗಿ ದುಬೈನಲ್ಲಿ ಲವ್ ರೆಡ್ಡಿ ರಿಲೀಸ್ ಮಾಡುವ ಯೋಚನೆ ಮಾಡುತ್ತೇನೆ ಎಂದರು.