ಬೆಂಗಳೂರು: ಚನ್ನಪಟ್ಟಣದಲ್ಲಿ ದಳ ಚಿಗುರೊಡೆ ಯುವ ಕನಸು ಭಗ್ನವಾಗಿದ್ದು, ಸಂಡೂರು, ಶಿಗ್ಗಾವಿ ಯಲ್ಲೂ ಮಿತ್ರ ಪಕ್ಷ ಬಿಜೆಪಿಗೆ ಲಾಭ ತಂದುಕೊಡುವಲ್ಲಿ ಜೆಡಿಎಸ್ ಫಲಪ್ರದವಾಗಿಲ್ಲ. ಈ ಮೂಲಕ ಮೂರೂ ವಿಧಾನಸಭಾ ಕ್ಷೇತ್ರಗಳಲ್ಲಿ ಜೆಡಿಎಸ್ ಸಾಧನೆ ಶೂನ್ಯ ಎನ್ನುವಂತಾಗಿದೆ.
ನಿಖಿಲ್ ಕುಮಾರಸ್ವಾಮಿ ವಿಧಾನಸಭೆ ಪ್ರವೇಶಿಸುವ ಕನಸು 2ನೇ ಬಾರಿಗೆ ಕಮರಿದ್ದು, ಮಂಡ್ಯ ಲೋಕಸಭಾ ಚುನಾವಣೆಯ ಸೋಲೂ ಸೇರಿದರೆ ಹ್ಯಾಟ್ರಿಕ್ ಸೋಲುಗಳನ್ನು ನಿಖಿಲ್ ಕುಮಾರಸ್ವಾಮಿ ಅರಗಿಸಿಕೊಳ್ಳಬೇಕಿದೆ. ಒಟ್ಟಾರೆ ಈ ಫಲಿತಾಂಶವು ಪಕ್ಷದ ಕಾರ್ಯಕರ್ತರನ್ನು ಮಂಕಾಗಿಸಿರುವುದಂತೂ ಸುಳ್ಳಲ್ಲ.
ಬಿಜೆಪಿ ಆಗದ ಲಾಭ: ಶಿಗ್ಗಾವಿ ಹಾಗೂ ಸಂಡೂರಿನಲ್ಲಿ ಮೊದಲಿನಿಂದಲೂ 3 ಅಥವಾ 4ನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಳ್ಳುತ್ತಾ ಬಂದಿರುವ ಜೆಡಿಎಸ್, ಉಪ ಚುನಾವಣೆಯಲ್ಲಿ ಮಿತ್ರಪಕ್ಷ ಬಿಜೆಪಿಗೆ ದೊಡ್ಡಮಟ್ಟದ ಲಾಭ ಮಾಡಿಕೊಟ್ಟಿಲ್ಲ.
ಸಂಡೂರಿನಲ್ಲಿ ಪ್ರಾಬಲ್ಯ ಮೆರೆಯದ ದಳ: ಇನ್ನು ಸಂಡೂರಿನಲ್ಲಿ ಕಳೆದ ಚುನಾವಣೆಯಲ್ಲಿ ಜೆಡಿಎಸ್‌ನ ಸೋಮಪ್ಪ ಪಡೆದಿದ್ದು ಕೇವಲ 2,617 ಮತ. ಬಿಜೆಪಿಯ ಶಿಲ್ಪಾ ರಾಘವೇಂದ್ರ ಪಡೆದಿದ್ದ 49 ಸಾವಿರ ಮತ ಸೇರಿದರೆ ಮೈತ್ರಿ ಅಭ್ಯರ್ಥಿ ಬಂಗಾರು ಹನುಮಂತುಗೆ 52 ಸಾವಿರ ಮತಗಳು ಬರಬೇಕಿತ್ತು. ಆದರೆ, 83,967 ಮತಗಳು ಬಿದ್ದಿದ್ದು, ಜೆಡಿಎಸ್ ಪಾತ್ರ ಎಷ್ಟಿದೆ ಎಂಬುದು ನೋಡಬೇಕಿದೆ.
ಇಡೀ ರಾಮನಗರ ಜಿಲ್ಲೆಯಲ್ಲಿ ಚನ್ನಪಟ್ಟಣ ಒಂದರಲ್ಲೇ ಕುಮಾರಸ್ವಾಮಿ ಗೆಲ್ಲುವ ಮೂಲಕ ಕ್ಷೇತ್ರ ಉಳಿಸಿಕೊಂಡಿ ದ್ದರು. ಆದರೆ, ಉಪಚುನಾವಣೆಯಲ್ಲಿ ನಿಖಿಲ್ ಸೋಲುವ ಮೂಲಕ ಜಿಲ್ಲೆಯಿಂದಲೇ ಜೆಡಿಎಸ್ ಹೊರಬಿದ್ದಂತಾಗಿದೆ.
ಮುಂದೇನು?: ಪಕ್ಷ ಸಂಘಟನೆಗೆ ಒತ್ತು ನೀಡಲು ಜೆಡಿಎಸ್ ಮುಂದಾಗಲಿದ್ದು, ನಿಖಿಲ್ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮಾಡುವ ಚಿಂತನೆ ಏನಾಗಲಿದೆ ಎಂಬ ಕುತೂಹಲ ಮೂಡಿದೆ.