ಬೆಂಗಳೂರು: ಸಿಎಂ ಎಚ್.ಡಿ.ಕುಮಾರಸ್ವಾಮಿ ಅವರು ಮಂಡಿಸಿರುವ ಬಜೆಟ್ ಕುರಿತು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಕಿಡಿ ಕಾರಿದ್ದು ‘ಕೊಟ್ಟ ಮಾತಿಗೆ ತಪ್ಪಿ ರೈತ ಸಮುದಾಯಕ್ಕೆ ದ್ರೋಹ ಬಗೆದ ಬಜೆಟ್, ಹಾಸನ ಮತ್ತು ರಾಮನಗರಕ್ಕೆ ಸೀಮಿತವಾಗಿರುವ ಅಣ್ಣತಮ್ಮಂದಿರ ಬಜೆಟ್’ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ ‘ಮುಖ್ಯಮಂತ್ರಿ ಕುಮಾರಸ್ವಾಮಿ ಯಾವುದೇ ಸಮುದಾಯಕ್ಕೆ ನ್ಯಾಯ ಒದಗಿಸುವ ಕೆಲಸ ಮಾಡಿಲ್ಲ. ಅನೇಕ ಭರವಸೆಗಳನ್ನು ಕೊಟ್ಟು ,37 ಸೀಟು ಗೆದ್ದು ರಾಜ್ಯದ ರೈತ ಸಮುದಾಯಕ್ಕೆ ಮೋಸ ಮಾಡಿದ್ದಾರೆ’ ಎಂದರು.
‘34,000 ಕೋಟಿ ರೂಪಾಯಿ ಹಣವನ್ನು ಎಲ್ಲಿಂದ ತರುತ್ತಾರೆ? ಹೇಗೆ ಹೊಂದಾಣಿಕೆ ಮಾಡುತ್ತೀರಿ ಎನ್ನುವುದನ್ನು ಸುದ್ದಿಗೋಷ್ಠಿ ಮಾಡಿ ರಾಜ್ಯದ ಜನರಿಗೆ ಸ್ಪಷ್ಟನೆ ನೀಡಲಿ’ ಎಂದು ಸವಾಲು ಸಾಕಿದರು.
‘7 ಕೆ.ಜಿಯಿಂದ 5 ಕೆ.ಜಿಗೆ ಇಳಿಸಿದ್ದಾರೆ ಇದು ಸಾಧನೆಯಾ? ವೃದ್ಧಾಪ್ಯ ವೇತನ 6000 ಕೊಡ್‌ತೇವೆ ಎಂದು ಹೇಳಿ ಈಗ 1000 ಕ್ಕೆ ನಿಲ್ಲಿಸಿದ್ದೀರಾ ಇದು ನಿಮ್ಮ ಸಾಧನೆಯಾ’ ಎಂದು ಪ್ರಶ್ನಿಸಿದರು.
‘ನೇಕಾರರ ಸಾಲ ಮನ್ನಾ ಒಂದು ಶಬ್ಧ ಇಲ್ಲ,ಮೀನುಗಾರರ ಸಾಲ ಮನ್ನಾ ಇಲ್ಲ , ಕರಾವಳಿ, ಮಲೆನಾಡು, ಹೈದ್ರಾಬಾದ್ ಕರ್ನಾಟಕ ಎಲ್ಲಾ ಭಾಗಗಳನ್ನು ಕಡೆಗಣಿಸಿದ್ದಾರೆ ಇದನ್ನು ಬಜೆಟ್ ಅಂತ ಪರಿಗಣಿಸಲು ಸಾಧ್ಯವಿಲ್ಲ’ ಎಂದರು.