Advertisement

Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ

11:16 PM Dec 18, 2024 | Team Udayavani |

ಬೆಳಗಾವಿ: ವಕ್ಫ್ ಕಾಯ್ದೆ ಆಧರಿಸಿ 1974ರಲ್ಲಿ ಹೊರಡಿಸಲಾಗಿದ್ದ ಗೆಜೆಟ್‌ ಅಧಿಸೂಚನೆಯನ್ನು ಯಾವುದೇ ಕಾರಣಕ್ಕೂ ವಾಪಸ್‌ ಪಡೆಯುವುದಿಲ್ಲ. ಆದರೆ ಈ ಸಂಬಂಧ ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ನೇತೃತ್ವದಲ್ಲಿ ಸಮಿತಿ ರಚಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಸ್ಪಷ್ಟಪಡಿಸಿದರು.

Advertisement

ವಿಧಾನಸಭೆಯಲ್ಲಿ ವಿಪಕ್ಷ ಬಿಜೆಪಿ ನಾಯಕರು, ರಾಜ್ಯದಲ್ಲಿ ಇಂದು ವಕ್ಫ್ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರೈತರಿಗೆ ನೋಟಿಸ್‌ ಜಾರಿಯಾಗಲು ವಕ್ಫ್ ಕಾಯ್ದೆ ಆಧರಿಸಿ 1974ರಲ್ಲಿ ಗೆಜೆಟ್‌ ಅಧಿಸೂಚನೆ ಹೊರಡಿಸಿದ್ದೇ ಮುಖ್ಯ ಕಾರಣ. ಹಾಗಾಗಿ ಅದನ್ನು ವಾಪಸ್‌ ಪಡೆಯಬೇಕು ಎಂದು ಪಟ್ಟುಹಿಡಿದರು. ಆದರೆ ಸಿದ್ದರಾಮಯ್ಯಇದನ್ನು ಸಾರಾಸಗಟಾಗಿ ತಳ್ಳಿಹಾಕಿದರು. ಬಿಜೆಪಿ ಸದಸ್ಯರು ಸಭಾತ್ಯಾಗ ಮಾಡಿದರೆ ಮಿತ್ರಪಕ್ಷ ಜೆಡಿಎಸ್‌ ಸಭಾತ್ಯಾಗ ಮಾಡದೆಯೇ ಬಿಜೆಪಿಯಿಂದ ಅಂತರ ಕಾಯ್ದುಕೊಂಡಿತು.

ಸಿಎಂ ಹೇಳಿದ್ದೇನು?

ಇದಕ್ಕೂ ಮುನ್ನ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ಇದುವರೆಗೆ ನೀವ್ಯಾಕೆ (ಬಿಜೆಪಿವರಿಗೆ) ಅಧಿಸೂಚನೆ ಹಿಂಪಡೆಯಲಿಲ್ಲ? ಈಗ ಜ್ಞಾನೋದಯವಾಯಿತಾ? ನೀವು ಈ ವಿಷಯದಲ್ಲಿ ವಿವಾದ ಸೃಷ್ಟಿಸಲು ಹೋಗಿದ್ದಕ್ಕೆ ಉಪಚುನಾವಣೆಯಲ್ಲಿ ಏನಾಯ್ತು? ಜನ 3 ನಾಮ ಹಾಕಿದರು ಎಂದು ವಾಗ್ಧಾಳಿ ನಡೆಸಿದರು.

ತಿರುಗೇಟು ನೀಡಿದ ವಿಪಕ್ಷ ನಾಯಕ ಆರ್‌. ಅಶೋಕ್‌, ನಿಮ್ಮ ಈ ಹೇಳಿಕೆಯಿಂದ ಸರಕಾರದ ಉದ್ದೇಶ ಏನು ಎಂಬುದು ಸ್ಪಷ್ಟವಾದಂತಾಗಿದೆ. ಮೊಸಳೆ ಕಣ್ಣೀರು ಸುರಿಸಿ, ನೋಟಿಸ್‌ ನೀಡುವುದನ್ನು ಮುಂದುವರಿಸುವುದಾಗಿದೆ. ಆದರೆ ನಾವು ಮಾತ್ರ ಮುಂದೆ ಇದನ್ನು ಹಿಂಪಡೆದೇ ಪಡೆಯುತ್ತೇವೆ. ಲೋಕಸಭಾ ಚುನಾವಣೆಯಲ್ಲಿ ನಿಮಗೂ ಜನ ಪಾಠ ಕಲಿಸಿದ್ದಾರೆ ಎಂದರು.

ಕಾರ್ಯಪಡೆ ರಚನೆಯಾಗಲಿ
ವಿಜಯಪುರದ ಮಾದರಿಯಲ್ಲಿ ರಾಜ್ಯಮಟ್ಟದಲ್ಲೂ ವಕ್ಫ್ ಆಸ್ತಿ ಗೊಂದಲ ಬಗೆಹರಿಸಲು ಕಾರ್ಯಪಡೆ ರಚಿಸಬಹುದು ಎಂದು ಕೃಷ್ಣ ಬೈರೇಗೌಡ ಅಭಿಪ್ರಾಯಪಟ್ಟರು. 1974ರಿಂದ ಹಿಂದಿನ ಸುಮಾರು 30 ವರ್ಷಗಳ ದಾಖಲೆಗಳನ್ನು ಆಧರಿಸಿ ವಿಜಯಪುರದಲ್ಲಿ ವಕ್ಫ್ ಆಸ್ತಿ ವಿವಾದ ಬಗೆಹರಿಸಲಾಗುತ್ತಿದೆ. ಇದಕ್ಕಾಗಿ ಕಾರ್ಯಪಡೆಯನ್ನೂ ರಚಿಸಲಾಗಿದೆ. ಅದನ್ನು ರಾಜ್ಯದ ಇತರ ಭಾಗಗಳಲ್ಲೂ ವಿಸ್ತರಿಸಬಹುದು ಎಂದರು.

Advertisement

ಹತ್ತುಪಟ್ಟು ಹಿಂದೂ ದೇವಸ್ಥಾನಗಳ ರಕ್ಷಣೆ
ಮುಸ್ಲಿಂ ಆಸ್ತಿಗಳು ಮಾತ್ರವಲ್ಲ, ಅದರ ಹತ್ತುಪಟ್ಟು ಹಿಂದೂಗಳ ಆಸ್ತಿ ರಕ್ಷಣೆ ಮಾಡುತ್ತಿದ್ದೇವೆ. 2023 ಮತ್ತು 2024ರಲ್ಲಿ 10,700 ಎಕರೆ ಆಸ್ತಿಗಳನ್ನು ಹಿಂದೂ ದೇವಸ್ಥಾನಗಳ ಹೆಸರಿಗೆ ಖಾತಾ ಬದಲಾವಣೆ ಮಾಡಲಾಗಿದೆ ಎಂದು ಕೃಷ್ಣ ಬೈರೇಗೌಡ ಮಾಹಿತಿ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next