ಸುವರ್ಣ ವಿಧಾನಸೌಧ: ಪಂಚಮಸಾಲಿ ಮೀಸಲಾತಿ ಹೋರಾಟಗಾರರ ಮೇಲೆ ಲಾಠಿಚಾರ್ಜ್ ನಡೆಸಿರುವುದನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಬೇಕು ಎಂದು ಅಗ್ರಹಿಸಿ, ಅದಕ್ಕೆ ಸರ್ಕಾರ ಒಪ್ಪದಿದ್ದಾಗ ಪ್ರತಿಪಕ್ಷ ಬಿಜೆಪಿ ಹಾಗೂ ಜೆಡಿಎಸ್ ಮೇಲ್ಮನೆಯಲ್ಲಿ ಸಭಾತ್ಯಾಗ ನಡೆಸಿತು.ಬಿಜೆಪಿ ಸಿ.ಟಿ.ರವಿ ಈ ವಿಷಯ ಪ್ರಸ್ತಾಪಿಸಿದರು.
ಆಗ ಗೃಹ ಸಚಿವ ಡಾ. ಜಿ. ಪರಮೇಶ್ವರ್, ಈ ವಿಷಯ ಸದನದಲ್ಲಿ ಈಗಾಗಲೇ ಚರ್ಚೆ ಆಗಿದೆ. ಯಾವುದೇ ತನಿಖೆಯ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ ಎಂದರು. ಚರ್ಚೆ ಆಗಿಲ್ಲ, ಡೈರಕ್ಟ್ ಲಾಠಿ ಚಾರ್ಚ್ ನಡೆದಿದೆ ಎಂದು ಪ್ರತ್ಯುತ್ತರ ನೀಡಿದರು.
ಮಾತು ಮುಂದುವರಿಸಿದ ಸಿ.ಟಿ.ರವಿ, ಯಾವುದೇ ತನಿಖೆ ಅಗತ್ಯವಿಲ್ಲ ಎಂದು ಸರ್ಕಾರ ಲಾಠಿ ಚಾರ್ಜ್ ಸಮರ್ಥಿಸಿಕೊಳ್ಳುತ್ತಿದೆ. ಇದೊಂದು ಸರ್ವಾಧಿಕಾರಿ ಧೋರಣೆ. ಕಾನೂನು ಸುವ್ಯವಸ್ಥೆ ಕಾಪಾಡಲು ಲಾಠಿ ಚಾರ್ಜ್ ನಡೆಸಲಾಗಿದೆ ಎಂದು ಹೇಳುವುದಾದರೆ ಅದಕ್ಕೂ ಮೊದಲು ನಿಯಮಗಳನ್ನು ಪಾಲಿಸಲಾಗಿದೆಯಾ, ಮ್ಯಾಜಿಸ್ಟ್ರೇಟ್ ಸ್ಥಳದಲ್ಲಿ ಇದ್ದರಾ? ಚದು ರು ವಂತೆ ಪ್ರತಿಭಟನಾಕಾರರಿಗೆ ಧ್ವನಿವರ್ಧಕ ಮೂಲಕ ಮನವಿ ಮಾಡಲಾಗಿತ್ತಾ? ಜಲಫಿರಂಗಿ ಪ್ರಯೋಗಿಸಲಾಗಿತ್ತಾ ಎಂದು ಪ್ರಶ್ನಿಸಿದರು.
ತನಿಖೆ ಬೇಡ ಅನ್ನುವುದು ಸರ್ವಾಧಿಕಾರಿ ಮಾನಸಿಕತೆ ತೋರಿಸುತ್ತಿದೆ. ಅಧಿಕಾರಿಗಳನ್ನು ಸಮರ್ಥನೆ ಮಾಡಿಕೊಳ್ಳುವುದು ಸರಿಯಲ್ಲ. ಪಂಚಮಸಾಲಿ ಹೋರಾಟಗಾರರು ಮಾರಕಾಸ್ತ್ರ, ಆಯುಧಗಳನ್ನು ಹಿಡಿದುಕೊಂಡು ಬಂದಿದ್ದರಾ? ಲಾಠಿ ಚಾರ್ಜ್ ನಡೆಸದೆ ಮುತ್ತುಕೊಡಬೇಕಿತ್ತಾ ಎಂಬ ಹೇಳಿಕೆ ಗೃಹ ಸಚಿವರಿಂದ ನಿರೀಕ್ಷೆ ಮಾಡಿರಲಿಲ್ಲ. ಡಿ.ಜೆ ಹಳ್ಳಿಯಲ್ಲಿ ಮಾರಕಾಸ್ತ್ರ ಹಿಡಿದು ಪೊಲೀಸ್ ಠಾಣೆ ಮೇಲೆ ದಾಳಿ ಮಾಡಿದವರಿಗೆ ಅಮಾಯಕರು ಎಂದು ಹೇಳಿದ ಸರ್ಕಾರ ನಿಮ್ಮದು ಎಂದು ಸಿ.ಟಿ. ರವಿ ಹೇಳಿದಾಗ, ಹಾವೇರಿಯಲ್ಲಿ ಪೊಲೀಸರ ಮೇಲೆ ಗುಂಡು ಹಾಕಿದ್ದು ನಿಮ್ಮ ಸರ್ಕಾರ ಎಂದು ಆಡಳಿತ ಪಕ್ಷದ ಸದಸ್ಯರು ತಿರುಗೇಟು ನೀಡಿದರು. ಈ ವೇಳೆ ಆಡಳಿತ-ಪ್ರತಿಪಕ್ಷ ಸದಸ್ಯರ ನಡುವೆ ಜಟಾಪಟಿ ನಡೆಯಿತು.
ಯಾವ ತನಿಖೆಯ ಆಗತ್ಯವಿಲ್ಲ. 5 ಸಾವಿರ ಟ್ರ್ಯಾಕ್ಟರ್ ತರುತ್ತೇವೆ ಅಂದಾಗ ಬೇಡ ಎಂದು ನಾವು ಹೇಳಿದೇವು. 10 ಸಾವಿರ ಜನರಿಗೆ ಪ್ರತಿಭಟನೆಗೆ ಅವಕಾಶ ಮಾಡಿಕೊಡಲಾಗಿತ್ತು. ಮೂವರು ಸಚಿವರನ್ನು ಸ್ಥಳಕ್ಕೆ ಕಳಿಸಿ ಮಾತುಕತೆ ನಡೆಸಲು ಅವಕಾಶ ಮಾಡಿಕೊಡಲಾಗಿತ್ತು. ಮುಖ್ಯಮಂತ್ರಿಯವರೇ ಬರಬೇಕು ಅಂದಾಗ ಅದು ಆಗಲ್ಲ ಎಂದು ಹೇಳಿದೆವು, ಸುವರ್ಣಸೌಧಕ್ಕೆ ನುಗ್ಗಿ ಎಂದು ಸ್ವಾಮಿಜಿಯವರೇ ಕರೆ ನೀಡಿದರು. 10 ಸಾವಿರ ಜನರಿಗೆ ಸುವರ್ಣಸೌಧಕ್ಕೆ ನುಗ್ಗಲು ಬಿಡಬೇಕಿತ್ತಾ, ಕಾನೂನು ಸುವ್ಯವಸ್ಥೆ ಕಾಪಾಡಬಾರದಿತ್ತಾ ನೀವು ಹೇಳಿ ಎಂದು ಪ್ರಶ್ನಿಸಿದ ಗೃಹ ಸಚಿವರು, ನ್ಯಾಯಾಂಗ ತನಿಖೆ ಸೇರಿ ಯಾವ ತನಿಖೆಯ ಅಗತ್ಯವಿಲ್ಲ. ಇದು ಸರ್ಕಾರದ ಸ್ಪಷ್ಟ ನಿಲುವು. ಅದನ್ನು ಒಪ್ಪಿಕೊಳ್ಳುವುದು, ಬಿಡುವುದು ಪ್ರತಿಪಕ್ಷದವರಿಗೆ ಬಿಟ್ಟಿದ್ದು ಎಂದು ಪುನರುಚ್ಚರಿಸಿದರು.
ಪಂಚಮಸಾಲಿ ಹೋರಾಟಗಾರರ ಮೇಲೆ ಲಾಠಿ ಚಾರ್ಜ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ಒಪ್ಪಿಸಲೇಬೇಕು. ಸರ್ಕಾರ ಅದಕ್ಕೆ ಒಪ್ಪುತ್ತಿಲ್ಲ. ಇದು ಸರ್ವಾಧಿಕಾರಿ ಸರ್ಕಾರ, ಹಕ್ಕು ಮತ್ತು ನ್ಯಾಯ ಕೇಳುವವರ ಮೇಲೆ ಲಾಠಿ ಚಾರ್ಜ್ ನಡೆಸುವ ಇದೊಂದು ಸರ್ವಾಧಿಕಾರಿ ಸರ್ಕಾರ ಎಂದು ಘೋಷಣೆ ಕೂಗುತ್ತಾ ಬಿಜೆಪಿ-ಜೆಡಿಎಸ್ ಸದಸ್ಯರು ಸಭಾತ್ಯಾಗ ನಡೆಸಿದರು.
ಇಲ್ಲಿಗೆ ಬಿಟ್ಟು ಬಿಡಿ: ಹೊರಟ್ಟಿ
ದೆಹಲಿಯಲ್ಲಿ ಪಾರ್ಲಿಮೆಂಟ್‌ಗೆ ನುಗ್ಗಿ ಅಂತ ಕರೆ ಕೊಟ್ಟ ನಿಮ್ಮ ಪಕ್ಷ ಕರ್ನಾಟಕದಲ್ಲಿ ಹಕ್ಕು ಕೇಳಿದವರ ಮೇಲೆ ಲಾಠಿ ಬೀಸುತ್ತಿದೆ ಇದ್ಯಾಕೆ ಇಬ್ಬಗೆ ನೀತಿ. ಇವತ್ತು ಲಾಠಿ ಚಾರ್ಜ್ ನಡೆಸಿದಿರಾ, ನಾಳೆ ಗೋಲಿಬಾರ್‌ಗೆ ಆದೇಶ ಮಾಡುತ್ತೀರಾ? ತಪ್ಪು ಮಾಡಿದ ಅಧಿಕಾರಿಗಳ ಸಮರ್ಥನೆಗೆ ಇಳಿದರೆ ಮತ್ತಷ್ಟು ಪ್ರಚೋದನೆ ಕೊಟ್ಟಂತಾಗುತ್ತದೆ. ನಮ್ಮ ಮನವಿಗೆ ಸರ್ಕಾರ ಸ್ಪಂದಿಸುತ್ತಿಲ್ಲ, ನಮ್ಮ ನೆರವಿಗೆ ಸಭಾಪತಿ ಬರಬೇಕು ಎಂದು ಸಿ.ಟಿ. ರವಿ ಹಾಗೂ ಪ್ರತಿಪಕ್ಷ ಸದಸ್ಯರು ಮನವಿ ಮಾಡಿದರು. ಹಾಗೆ ಮಾಡಿ, ಹಿಂಗೆ ಹೇಳಿ ಅಂತ ನಾನು ಹೇಳಲು ಬರುವುದಿಲ್ಲ. ನೀವು ಕೇಳಿದ್ದೀರಿ; ಸರ್ಕಾರ ತನ್ನ ನಿಲುವು ಹೇಳಿದೆ. ಈ ವಿಷಯ ಇಲ್ಲಿಗೆ ಬಿಟ್ಟುಬಿಡಿ ಎಂದು ಸಭಾಪತಿ ಬಸವರಾಜ ಹೊರಟ್ಟಿ ಹೇಳಿದರು.