ಮಡಿಕೇರಿ: ಸಹೋದರರ ನಡುವೆ ಕ್ಷುಲಕ ವಿಚಾರಕ್ಕೆ ನಡೆದ ಕಲಹ ತಮ್ಮನ ಕೊಲೆಯಲ್ಲಿ ಅಂತ್ಯವಾದ ಘಟನೆ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ವಣಚಲು ಗ್ರಾಮದ ಬಳಿ ಸೋಮವಾರ (ಡಿ.16 ರಂದು) ನಡೆದಿದೆ.
ಸ್ಥಳೀಯ ನಿವಾಸಿ ಧರ್ಮ ಅಪ್ಪಣ್ಣ(53) ಮೃತಪಟ್ಟ ವ್ಯಕ್ತಿಯಾಗಿದ್ದು, ಇವರ ಅಣ್ಣ ಪ್ರತು ಮಾಚಯ್ಯ (55) ಗುಂಡು ಹೊಡೆದಿರುವುದಾಗಿ ಆರೋಪಿಸಲಾಗಿದೆ. ಆರೋಪಿ ಕೋವಿ ಸಹಿತ ತಲೆ ಮರೆಸಿಕೊಂಡಿದ್ದಾನೆ.
ಸೋಮವಾರ ಬೆಳಗ್ಗೆ 9.30ರ ಸಮಯದಲ್ಲಿ ಸಹೋದರರ ನಡುವೆ ಕ್ಷುಲಕ ವಿಚಾರವಾಗಿ ಜಗಳ ನಡೆದಿದೆ. ಈ ವೇಳೆ ಧರ್ಮ ಅಪ್ಪಣ್ಣ ಅವರ ಮೇಲೆ ಪ್ರತು ಮಾಚಯ್ಯ ಹಲ್ಲೆ ನಡೆಸಿದ್ದಾನೆ. ಬಳಿಕ ಒಂಟಿ ನಳಿಗೆ ಕೋವಿಯಿಂದ ಗುಂಡು ಹೊಡೆದು ಕೊಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ.
ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್, ಪ್ರೊಬೇಷನರಿ ಎಸ್.ಪಿ ಬೆನಕ ಪ್ರಸಾದ್ ಮತ್ತು ಗ್ರಾಮಾಂತರ ಠಾಣಾ ಪೊಲೀಸರು ತೆರಳಿ ಪರಿಶೀಲನೆ ನಡೆಸಿದರು. ಕೊಲೆ ಪ್ರಕರಣದ ಕುರಿತು ಮಡಿಕೇರಿ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕೊಲೆ ಪ್ರಕರಣದ ಆರೋಪಿಯ ಸೆರೆಗೆ ವಿಶೇಷ ತನಿಖಾ ತಂಡ ರಚಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ತಿಳಿಸಿದ್ದಾರೆ.