Advertisement

Hassan: ದೇವೇಗೌಡರೇ ದೇಶ ಬಿಡಬೇಡಿ: ಜನಕಲ್ಯಾಣ ಸಮಾವೇಶದಲ್ಲಿ ಸಿದ್ದರಾಮಯ್ಯ ತೀವ್ರ ವಾಗ್ದಾಳಿ

12:09 AM Dec 06, 2024 | Team Udayavani |

ಹಾಸನ : ”ದೇವೇಗೌಡರೇ ನೀವು ದೇಶ ಬಿಡಬಾರದು, ಇಲ್ಲೇ ಇರಬೇಕು” ಎಂದು ಸಿಎಂ ಸಿದ್ದರಾಮಯ್ಯ ತೀವ್ರ ವಾಗ್ದಾಳಿ ನಡೆಸಿದ್ದಾರೆ.

Advertisement

ಹಾಸನದಲ್ಲಿ ಕೆಪಿಸಿಸಿ ಹಾಗೂ ಸ್ವಾಭಿಮಾನಿ ಒಕ್ಕೂಟಗಳ ಜಂಟಿ ಆಶ್ರಯದಲ್ಲಿ ಗುರುವಾರ(ಡಿ5) ನಡೆದ ಜನಕಲ್ಯಾಣ ಸಮಾವೇಶ ದಲ್ಲಿ ಸಭೆಯನ್ನುದ್ದೇಶಿಸಿ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮತ್ತು ಜೆಡಿಎಸ್ ನಾಯಕರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು.

‘2013 ರಲ್ಲಿ ದೇವೇಗೌಡರು , ಬಿಜೆಪಿ ಅಧಿಕಾರಕ್ಕೆ ಬಂದರೆ ನಾನು ದೇಶ ಬಿಡುತ್ತೇನೆ ಅಂದಿದ್ದರು. ಈಗ ಅಧಿಕಾರಕ್ಕಾಗಿ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿದ್ದಾರೆ. ನೀವು ದೇಶ ಬಿಡುವುದು ಬೇಡ. ಇಲ್ಲಿಯೇ ಇರಿ’ ಎಂದು ವಾಗ್ಬಾಣ ಹಾರಿಸಿದರು.

‘ದೇವೇಗೌಡರು ನನ್ನನ್ನು ಹಣಕಾಸು ಮಂತ್ರಿ ಮಾಡಿ ಬೆಳೆಸಿದೆ ಅನ್ನುತ್ತಾರೆ, ಆದರೆ ನಾವು ಅವರನ್ನು 1994 ರಲ್ಲಿ ನಾನು, ಜಾಲಪ್ಪ ಜತೆಯಲ್ಲಿ ನಿಂತು ಸಿಎಂ ಮಾಡಿದ್ದು. ದೇವೇಗೌಡರು ಯಾರನ್ನೂ ಬೆಳೆಯಲು ಬಿಡಲಿಲ್ಲ.ಮನೆ ಮಗನಂತಿದ್ದ ಬಿ.ಎಲ್ ಶಂಕರ್, ವೈ.ಕೆ ರಾಮಯ್ಯ ಅವರನ್ನು ಬೆಳೆಸಿಲ್ಲ. ನಮಗೆಲ್ಲ ರಾಜಕೀಯ ವನವಾಸ ಮಾಡಿಸಿದರು, ಈಗ ಅವರೇ ವನವಾಸ ಅನುಭವಿಸುತ್ತಿದ್ದಾರೆ’ ಎಂದು ತೀವ್ರ ವಾಗ್ದಾಳಿ ನಡೆಸಿದರು.

Advertisement

ಹಣಕಾಸು ಸಚಿವೆ ನಿರ್ಮಲಾ ಸೀತಾರಾಮ್ ಅವರನ್ನು ನಾನು ಭೇಟಿ ಮಾಡಿ ಮನವಿ ಮಾಡಿದರೂ ಕೂಡ ರಾಜ್ಯಕ್ಕೆ ಕೊಡಬೇಕಾದ ಹಣ ನೀಡಿಲ್ಲ. ಆ ಬಗ್ಗೆ ದೇವೇಗೌಡರು ಇಲ್ಲಿವರೆಗೂ ಬಾಯಿ ಬಿಟ್ಟಿಲ್ಲ. ಕೇಳಿದರೆ ಸಿದ್ದರಾಮಯ್ಯ ವಿನಾ ಕಾರಣ ಬಿಜೆಪಿ ಮತ್ತು ಜೆಡಿಎಸ್ ಗೆ ತೊಂದರೆ ಕೊಡುತ್ತಾರೆ ಎಂದು ಹೇಳುತ್ತಾರೆ ಎಂದರು.

ಇಲ್ಲಿನ ಸಾವಿರಾರು ಮಹಿಳೆಯರು, ಅವರು ನೊಂದಿದ್ದಾರೆ . ಅವರ ರಕ್ಷಣೆ ಅಗತ್ಯವಿದೆ ಎಂದು ಸಿಎಂ ಕಿಡಿ ಕಾರಿದರು.

ಗ್ಯಾರಂಟಿಗಳ ಮೂಲಕ ರಾಜ್ಯದ ಜನರ ವಿಶ್ವಾಸ ಉಳಿಸಿಕೊಂಡಿದ್ದು 2028ರಲ್ಲಿ ಮತ್ತೆ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ ಎಂದು ಸಿಎಂ ಸಿದ್ದರಾಮಯ್ಯ ವಿಶ್ವಾಸದ ನುಡಿಗಳನ್ನಾಡಿದರು.

ಈ ಕಾರ್ಯಕ್ರಮ ಕಾಂಗ್ರೆಸ್ ಪಕ್ಷ ಅಯೋಜಿಸಿದ್ದು ಎಂದು ಮಾಧ್ಯಮಗಳಲ್ಲಿ ಚರ್ಚೆಯಾಗುತ್ತಿದ್ದು, ಸ್ವಾಭಿಮಾನಿ ಒಕ್ಕೂಟ, ಪಕ್ಷದ ಕಾರ್ಯಕರ್ತರು ಮತ್ತು ಪಕ್ಷದ ಬಗ್ಗೆ ಸಹಾನುಭೂತಿ ಉಳ್ಳವರು ಕಾರ್ಯಕ್ರಮ ಆಯೋಜಿಸುವುದಾಗಿ ಹೇಳಿ ನನ್ನಲ್ಲಿಗೆ ಬಂದಾಗ, ಮುಖ್ಯಮಂತ್ರಿಯಾಗಿ ಬೇಡ ಅನ್ನಲಿಲ್ಲ, ಕೆಪಿಸಿಸಿಯೂ ನಿಮ್ಮೊಂದಿಗೆ ಕೈ ಜೋಡಿಸುತ್ತದೆ ಎಂದು ಹೇಳಿದ್ದೆ. ಇದು ಕೆಪಿಸಿಸಿ ಮತ್ತು ಸ್ವಾಭಿಮಾನಿ ಒಕ್ಕೂಟ ಜಂಟಿಯಾಗಿ ಆಯೋಜಿಸುತ್ತಿರುವ ಕಾರ್ಯಕ್ರಮ ಎಂದು ಸಿಎಂ ಒತ್ತಿ ಹೇಳಿದರು.

ಸಾಯುವವರೆಗೂ ಬಂಡೆ ಜತೆಯಲ್ಲಿರುತ್ತದೆ
”ಯಾರೂ ಚಿಂತೆ ಮಾಡಬೇಡಿ, ಈ ಬಂಡೆ ಡಿ.ಕೆ ಶಿವಕುಮಾರ್, ಸಿದ್ದರಾಮಯ್ಯ ಅವರ ಜತೆಗೆ ಇರುತ್ತದೆ ಎಂದು ಮೈಸೂರಿನಲ್ಲಿ ಹೇಳಿದ್ದೆ. ಈಗಲೂ ಅವರ ಜೊತೆ ಇದ್ದೇನೆ, ನಾಳೆಯೂ ಇರುತ್ತೇನೆ, ಸಾಯುವವರೆಗೂ ಅವರ ಜತೆಗೆ ಇರುತ್ತೇನೆ. ಇದು ಈ ಕನಕಪುರ ಬಂಡೆಯ ಇತಿಹಾಸ” ಎಂದು ಡಿ.ಕೆ.ಶಿವಕುಮಾರ್ ಹೇಳಿದರು.

”25 ವರ್ಷದ ಬಳಿಕ ಹಾಸನದ ಮಹಾ ಜನತೆ ಕಾಂಗ್ರೆಸ್ ಪಕ್ಷದಿಂದ ಲೋಕಸಭಾ ಸದಸ್ಯರನ್ನ ಆಯ್ಕೆ ಮಾಡಿ ಸಂಸತ್ತಿಗೆ ಕಳುಹಿಸಿದ್ದೀರಿ. ಈ ಜಿಲ್ಲೆಯಲ್ಲಿ ಆಗುತ್ತಿರುವ ಅನ್ಯಾಯದ ವಿರುದ್ಧ ಆಕ್ರೋಶಗೊಂಡು, ನೊಂದ ತಾಯಂದಿರಿಗೆ ರಕ್ಷಣೆ ನೀಡಲು ನಮ್ಮ ಶ್ರೇಯಸ್ ಪಟೇಲ್ ಅವರನ್ನ ಆಯ್ಕೆ ಮಾಡಿದ್ದಕ್ಕಾಗಿ, ಈ ಮೂಲಕ ಈ ದೇಶಕ್ಕೆ ಒಂದು ಸಂದೇಶ ರವಾನಿಸಿದ್ದಕ್ಕಾಗಿ ಕೋಟಿ ಕೋಟಿ ನಮನ ಸಲ್ಲಿಸುವೆ” ಎಂದು ಡಿಸಿಎಂ ಹೇಳಿದರು.

”ಬಿಜೆಪಿ ಸರ್ಕಾರ ಕೆಎಂಎಫ್ ನಂದಿನಿಯನ್ನು ಗುಜರಾತಿನ ಅಮುಲ್ ನೊಂದಿಗೆ ವಿಲೀನಗೊಳಿಸಲು ಹೊರಟಿತ್ತು. ಆದರೆ ನಮ್ಮ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ನಂದಿನಿ ತುಪ್ಪವನ್ನು ತಿರುಪತಿ ತಿಮ್ಮಪ್ಪನ ಲಾಡು ಪ್ರಸಾದ ತಯಾರಿಕೆಗೆ ಕಳುಹಿಸುವ ಮೂಲಕ ಹೈನುಗಾರರಿಗೆ ಶಕ್ತಿ ನೀಡಿದೆ” ಎಂದರು.

ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ
”2014 ರಲ್ಲಿ ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಬಂದ ಬಳಿಕ ಕರ್ನಾಟಕದ ಬಿಜೆಪಿ ಸಂಸದರಾದ ಅನಂತ್ ಕುಮಾರ್ ಹೆಗಡೆ, “ನಮ್ಮ ಸರ್ಕಾರ ಬಂದಿರುವುದೇ ಸಂವಿಧಾನ ತೆಗೆಯಲು” ಎಂದು ಹೇಳಿದ್ದರು.ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಸಂವಿಧಾನ ಕೊಡದಿದ್ದರೆ ನಾವು, ನೀವೆಲ್ಲ ಇಷ್ಟು ದೊಡ್ಡಮಟ್ಟದ ಸಮಾವೇಶ ಮಾಡಲು ಸಾಧ್ಯವಾಗುತ್ತಿರಲ್ಲ. ಹಾಗಾಗಿ ಸಂವಿಧಾನ ರಕ್ಷಣೆ ನಮ್ಮೆಲ್ಲರ ಹೊಣೆ. ಸಿದ್ದರಾಮಯ್ಯ ಅವರು ಟಗರು ಅಷ್ಟು ಸುಲಭವಾಗಿ ಇಳಿಸಲು ಆಗುವುದಿಲ್ಲ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಅಬ್ಬರದ ಭಾಷಣ ಮಾಡಿದರು.

ಕೇಂದ್ರ  ಸರ್ಕಾರ ದಾಳಿ

‘5 ಗ್ಯಾರಂಟಿ ಯೋಜನೆಗಳ ಮೂಲಕ ಕರ್ನಾಟಕ ಕಾಂಗ್ರೆಸ್ ಸರ್ಕಾರ ಫಲಾನುಭವಿಗಳ ಖಾತೆಗೆ ನೇರವಾಗಿ ಹಣ ಜಮೆ ಮಾಡುತ್ತಿದ್ದು, ಇದರಿಂದ ಬಡವರಿಗೆ ಆರ್ಥಿಕ ಚೈತನ್ಯ ದೊರಕುತ್ತಿದೆ. ಇಂತಹ ಬಡವರ ಪರವಾದ ಗ್ಯಾರಂಟಿ ಯೋಜನೆಗಳ ಮೇಲೆ ಕೇಂದ್ರ ಬಿಜೆಪಿ ಸರ್ಕಾರ ದಾಳಿ ಮಾಡುತ್ತಿದೆ’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ವಾಗ್ದಾಳಿ ನಡೆಸಿದರು.

‘ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರ ವಿರುದ್ಧ ಕೇಂದ್ರ ಬಿಜೆಪಿ ಸರ್ಕಾರ ದ್ವೇಷ ಸಾಧಿಸುತ್ತದೆ. ಏಕೆಂದರೆ ಇವರೆಲ್ಲರೂ ಬಡವರು, ದಲಿತರು, ಹಿಂದುಳಿದ ವರ್ಗದವರು, ಆದಿವಾಸಿಗಳು, ಅಲ್ಪಸಂಖ್ಯಾತರು, ಯುವಕರು, ರೈತರು, ಮಹಿಳೆಯರ ಪರವಾಗಿ ಹೋರಾಟ ಮಾಡುತ್ತಾರೆ’ ಎಂದು ಸುರ್ಜೆವಾಲಾ ಆರೋಪ ಮಾಡಿದರು.

ಕೋಮುವಾದಿ ಎನ್ನುವುದನ್ನು ಸೇರಿಸಿಕೊಳ್ಳಿ
‘ಜೆಡಿಎಸ್ ನವರು ಜಾತ್ಯತೀತ ಎಂದು ಹೇಳಿಕೊಂಡು 25 ವರ್ಷದಿಂದ ಹಾಸನ ಜಿಲ್ಲೆಯ ಜನತೆಗೆ ಮಂಕು ಬೂದಿ ಎರಚುತ್ತಿದ್ದಾರೆ. ಕೋಮುವಾದಿ ಬಿಜೆಪಿ ಪಕ್ಷದ ಜತೆ ಸೇರಿಕೊಂಡು ಕೇಂದ್ರದಲ್ಲಿ ಸಚಿವರಾಗಿದ್ದೀರಿ, ನಾಚಿಕೆ ಆಗುವುದಿಲ್ಲವೇ ನಿಮಗೆ? ಮೊದಲು ಜಾತ್ಯಾತೀತ ಎನ್ನುವುದನ್ನು ಬದಲಾಯಿಸಿಕೊಂಡು, ಕೋಮುವಾದಿ ಎನ್ನುವುದನ್ನು ಸೇರಿಸಿಕೊಳ್ಳಿ’ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಕಿಡಿ ಕಾರಿದರು.

ಮುನಿಯಪ್ಪ ಕಾರು ಅಪಘಾತ
ಸಮಾವೇಶ’ಕ್ಕೆ ಆಗಮಿಸುತ್ತಿದ್ದ ಸಚಿವ ಕೆ.ಎಚ್‌.ಮುನಿಯಪ್ಪ ಅವರ ಕಾರಿಗೆ ಶಾಂತಿಗ್ರಾಮ ಬಳಿ ಹಿಂಬದಿಯಿಂದ ವೇಗವಾಗಿ ಬಂದ ಇನ್ನೋವಾ ಕಾರು ಢಿಕ್ಕಿ ಹೊಡೆಯಿತು. ನಂತರ ಸಚಿವ ಮುನಿಯಪ್ಪ ಬದಲಿ ಕಾರಿನಲ್ಲಿ ಸಮಾವೇಶಕ್ಕೆ ತೆರಳಿದರು.

Advertisement

Udayavani is now on Telegram. Click here to join our channel and stay updated with the latest news.

Next