ಅಡುಗೆ ಎಂದ ತತ್‌ಕ್ಷಣ ನೆನಪಾಗುವುದು ಬಗೆ-ಬಗೆಯ ಹೊಸ ರುಚಿ, ಖ್ಯಾದ್ಯ. ಇನ್ನು ಹೊಸ ಮೊಬೈಲ್ ಕೈಗೆ ಬಂದರಂತೂ ಅಡುಗೆಯಲ್ಲಿ ಆಸಕ್ತಿ ಇರುವವರು ಮೊದಲು ಮಾಡುವ ಕೆಲಸ ಯೂಟ್ಯೂಬ್ ನೋಡಿ ಅಡುಗೆಮನೆಯನ್ನು ತಮ್ಮ ಪ್ರಯೋಗ ಶಾಲೆಯನ್ನಾಗಿ (lab) ಮಾಡುವುದು.
ಅಂತಹವರಲ್ಲಿ ನಾನೂ ಸಹ ಒಬ್ಬಳು. ದಿನಪತ್ರಿಕೆ ನೋಡಿ ಶುರುವಾದ ಪ್ರಯೋಗ., ಕೊತ್ತಂಬರಿ ಸೊಪ್ಪಿನ ಪಲಾವ್ ಯಶಸ್ವಿ ಪ್ರದರ್ಶನ ಕಂಡ ಬಳಿಕ, ಯೂಟ್ಯೂಬ್ ನೋಡಿ ಪೊಂಗಲ್ ಮಾಡುವ ಮನಸಾಯ್ತು ನೋಡಿ. ದಕ್ಷಿಣ ಕನ್ನಡ-ಗಡಿನಾಡು ಭಾಗಗಳಲ್ಲಿ ಅತಿ ವಿರಳವಾಗಿರುವ ತಿಂಡಿ ಇದು. ಅಂತೂ ಮನೆಯವರ ಎಚ್ಚರಿಕೆಯೊಂದಿಗೆ ಪ್ರಯೋಗ ಶುರು ಮಾಡಿದೆ.
ಮೊದಲ ಪ್ರಯತ್ನ ‘ಆಪರೇಷನ್ ಸಕ್ಸಸ್ ಪೇಷಂಟ್ ಡೆಡ್’ ಅನ್ನುವ ಹಾಗೆ ಆಗಬೇಕೇ..! ನೋಡಲೇನೋ ಚೆನ್ನಾಗಿಯೇ ಇತ್ತು., ಎಲ್ಲರೂ ನನ್ನ ಸಮಾಧಾನಕ್ಕೆ ಸ್ವಲ್ಪ ರುಚಿ ನೋಡಿದ ಶಾಸ್ತ್ರ ಮಾಡಿದ್ದೂ ಆಯ್ತು. ರುಚಿ ಬಗ್ಗೆ ಕೇಳಬೇಡಿ.! ಅಂತೂ ಅಂದಿನ ನಗೆ ಪಾಟಲಿಗೆ ಗುರಿಯಾದವಳು ನಾನೇ..! ಹೆಚ್ಚು ಪ್ರಮಾಣದಲ್ಲಿ ಪ್ರಯೋಗ ಮಾಡಿದ್ದಕ್ಕಂತೂ ಒಂದು ಸಣ್ಣ ಕಿವಿಮಾತು ಸಿಕ್ಕಿತು. ಅದೇ ಕೊನೆ. ಮತ್ತೆ ಪೊಂಗಲ್ ನ ವಿಷಯಕ್ಕೆ ನಾನಿಲ್ಲಪ್ಪ.! ಕೊನೆಯಲ್ಲಿ ನನ್ನ ನೋಡಿಯೋ, ಇಲ್ಲ ನಾನು ಮಾಡಿದ ಅಡುಗೆ ವ್ಯರ್ಥ ಮಾಡೆ ಅಂತಲೋ ನನ್ನ ಮುದ್ದು ದನವೊಂದು ಅದನ್ನೆಲ್ಲ ಪೂರ್ತಿ ಖಾಲಿ ಮಾಡಿ, ನನ್ನನ್ನು ಸಮಾಧಾನಗೊಳಿಸಿತು. ಬಹುಶಃ ತುಂಬಾ ಇಷ್ಟ ಆಯೆ¤àನೋ (ಅಂತ ನಾನು ಅಂದುಕೊಂಡೆ).
ಅಯ್ಯೋ! ಇಂದಿಗೂ ಇದೊಂದು ವಿಷಯ ಇಟ್ಟುಕೊಂಡು ನನ್ನ ಅಣ್ಣ ನನ್ನನ್ನು ತಮಾಷೆ ಮಾಡವುದೂ ಉಂಟು. ಅದಕ್ಕೆ ಒಗ್ಗರಣೆ ಹಾಕುವ ಕಾರ್ಯಕ್ಕೆ ಅಮ್ಮ ಸೇರುವುದು ಕೂಡ ಇದ್ದದ್ದೇ., ತುಪ್ಪ ಸುರಿಯಲು ಅಪ್ಪ ಜೊತೆಗೂಡಿದರಂತೂ ನನಗಿದು ಬೇಕಿತ್ತಾ? ಎನ್ನುವ ಹಾಗೆ ನನ್ನ ಅವಸ್ಥೆ! ಹೊಸರುಚಿ ಎಂದಾಕ್ಷಣ ಪೊಂಗಲ್ ನ ನೆನಪು ಕಣ್ಣಿಗೆ ಕಟ್ಟುವುದಂತೂ ಸತ್ಯ. ಏನೋ ಮಾಡಲು ಹೋಗಿ ಏನು ಮಾಡಿದೆ ನೀನು?!’ ಅನ್ನುವ ಫಜೀತಿಯ ಪರಿಸ್ಥಿತಿಗೆ ಬಂದ ನೆನಪು ಈಗಲೂ ನಗು ತರಿಸುವಂತಹದ್ದು.
-ಕೃಪಾಶ್ರೀ
ಕುಂಬಳೆ