Advertisement
ಛೇ, ನನ್ನ ಯೂನಿಫಾರ್ಮ್ ಬೆಲ್ಟ್ ಸಿಕ್ತಿಲ್ಲ. ಸ್ಕೂಲಿಗೆ ಲೇಟ್ ಆಯ್ತು. ಈ ಗಡಿಬಿಡಿ ತುಂಬಿದ ಮಾತುಗಳು ಬೆಳಗ್ಗಿನ ಹೊತ್ತು ಅನೇಕ ಮನೆಗಳಲ್ಲಿ ಕೇಳಿಬರುವಂತಹವು. ಧಾವಂತದ ಜೀವನದಲ್ಲಿ ಇಟ್ಟ ವಸ್ತುಗಳು ಸಿಕ್ಕದಾದಾಗ ರಕ್ತದೊತ್ತಡ ಮಿತಿಮೀರುತ್ತದೆ. ಮನೆಮಂದಿಯೊಡನೆ ಮನಸ್ತಾಪಗಳು ಉಂಟಾಗುತ್ತವೆ. ಛೇ, ಎಲ್ಲ ನನ್ನ ಕರ್ಮ, ಎಲ್ಲ ಹಣೆಬರಹ ಎಂದು ದಿನವಿಡೀ ಹಳಿದುಕೊಳ್ಳುತ್ತಾ, ಆ ದಿನದ ಕೆಲಸಗಳು ಸುಸೂತ್ರವಾಗಿ ಸಾಗದೆ, ಮರುದಿನ ಭಾರವಾಗಿಬಿಡುತ್ತದೆ.
Related Articles
Advertisement
ಮಕ್ಕಳಿಗೆ ಅಂದಿನ ಕೆಲಸಗಳನ್ನು ಅಂದೇ ಮಾಡುವಂತೆ ನಯವಾಗಿ ತಿಳಿಹೇಳಬೇಕು.ಹಾಗೆ ಮಾಡಿದರೆ ಸಾಕಷ್ಟು ಸಮಯ ಸಿಕ್ಕಿ ಅದರಲ್ಲಿ ಆಟೋಟಗಳಿಗೆ, ಹವ್ಯಾಸಗಳಿಗೆ ತೊಡಗಿಸಿಕೊಳ್ಳಬಹುದೆಂದು ವಿವರಿಸಬೇಕು.
ಗೃಹಿಣಿಯಾದವಳು ನಾಳಿನ ಊಟ, ತಿಂಡಿಗಳ ತಯ್ನಾರಿ ಬಗ್ಗೆ ಇಂದಿನ ರಾತ್ರಿಯೇ ಯೋಜನೆ ಹಾಕಿಕೊಂಡರೆ ಅರ್ಧ ಅಡುಗೆ ಮುಗಿದ ಲೆಕ್ಕವೇ. ಇನ್ನು ಕಚೇರಿಗೆ ಹೋಗುವವರು ಏನಾದರೂ ಕಡತಗಳನ್ನು ಒಯ್ಯಬೇಕಿದ್ದಲ್ಲಿ/ ನಾಳೆಗೆ ಏನಾದರೂ ಮನೆಯಿಂದ ತಯ್ನಾರಿ ಮಾಡಿಕೊಂಡು ಹೋಗಬೇಕಿದ್ದಲ್ಲಿ ಅದು ಮಲಗುವ ಮುನ್ನ ಸಿದ್ಧವಾದರೆ ಒಳಿತು.ಮಕ್ಕಳು ತಮ್ಮ ಮನೆಗೆಲಸಗಳನ್ನು ಮುಗಿಸಿ,ಪೆನ್ಸಿಲ…, ಪೆನ್ ಇತ್ಯಾದಿ ಉಪಕರಣಗಳನ್ನು ಡಬ್ಬಿಯೊಳಗಿಟ್ಟು,ಮರುದಿನಕ್ಕೆ ಪಾಟಿಚೀಲವನ್ನು ಅಂದಿನ ಇರುಳೇ ಸಿದ್ಧಪಡಿಸಿಕೊಳ್ಳಬೇಕು. ಮರುದಿನಕ್ಕೆ ತಯ್ನಾರಿಯಾಗಿರುವ ನಿಶ್ಚಿಂತೆ,ಇಂದಿನ ರಾತ್ರಿಗೆ ಸುಖ ನಿದ್ರೆಯನ್ನು ತಂದೊಡ್ಡುತ್ತದೆ.ಒಳ್ಳೆಯ ನಿದ್ರೆ ಸುಂದರ ಮುಂಜಾವಿಗೆ ಇಂಬು ಕೊಡುತ್ತದೆ.ತನ್ಮೂಲಜ ದಿನಪೂರ್ತಿ ಲವಲವಿಕೆ ಇರುತ್ತದೆ.
ಯಾವುದೇ ವಸ್ತುಗಳಿರಲಿ ಅವನ್ನು ಎಲ್ಲಿಂದ ತೆಗೆದಿರಿತ್ತೇವೋ, ಕೆಲಸವಾದ ಅನಂತರ ಅವುಗಳನ್ನು ಮೊದಲ ಜಾಗದಲ್ಲೇ ಇಡುವುದನ್ನು ರೂಢಿಸಿಕೊಳ್ಳಬೇಕು. ಇದು ನಿಜವಾಗಿಯೂ ನಮ್ಮ ಒತ್ತಡವನ್ನು ಕಮ್ಮಿ ಮಾಡುವಲ್ಲಿ ಸಂದೇಹವೇ ಬೇಡ. ಮಕ್ಕಳಿಗೂ ಅಷ್ಟೇ ಆಟವಾಡಿದ ಅನಂತರ ಆಟಿಕೆಗಳನ್ನು ಬುಟ್ಟಿಯಲ್ಲಿ ಪೇರಿಸಿಡುವುದಕ್ಕೆ ನಿರ್ದೇಶಿಸಬೇಕು. ವಸ್ತುಗಳನ್ನು ಜತನ ಮಾಡುವಂತೆ ಹೇಳಬೇಕು.
ನಾವು ಬಳಸಿದ ತಟ್ಟೆ, ಲೋಟಗಳನ್ನು ನಾವೇ ಸ್ವಚ್ಛಗೊಳಿಸಲು ಕಲಿಯಬೇಕು. ಹ್ಮಾಂ ನೆನಪಿರಲಿ,ಇದಕ್ಕೆ ಹೆಣ್ಣು- ಗಂಡೆಂಬ ಭೇದ ಸಲ್ಲ. ಏನಾದರೂ ಖರೀದಿಗೆ ಹೋಗುವ ಮುನ್ನ ಅಗತ್ಯತೆಗಳ ಪಟ್ಟಿಯನ್ನು ತಯ್ನಾರಿಸಿಕೊಳ್ಳಬೇಕು.ಆಗ ಅಯ್ಯೋ ಇದು ನೆನಪಾಗಲಿಲ್ಲ,ಅದನ್ನು ಮರೆತೆ ಎಂದು ಹಲುಬುವುದು,ಮತ್ತೂಮ್ಮೆ ಹೋಗುವುದು ತಪ್ಪುತ್ತದೆ. ಅನಗತ್ಯವಾಗಿ ವಿದ್ಯುತ್ ದೀಪ,ಪಂಕಗಳ ಬಳಕೆಯನ್ನು ನಿಲ್ಲಿಸುವುದು ಕೂಡ ಶಿಸ್ತಾದ ಬದುಕಿನ ಭಾಗವೇ. ಸಾಧ್ಯವಾದಷ್ಟು ಸಮಯ ಪ್ರಜ್ಞೆ ಇರಲಿ. ಸಮಯ ಪಾಲನೆ ಶಿಸ್ತಿನ ಇನ್ನೊಂದು ಮುಖ. ಅಗತ್ಯವಿರುವಷ್ಟೇ ಬಡಿಸಿಕೊಂಡು, ಬಿಸುಡದೆ ಉಣ್ಣುವುದು ಕೂಡ ಶಿಸ್ತು. ಪರರ ವೈಯಕ್ತಿಕ ವಿಚಾರಗಳನ್ನು ಕೆದಕುವುದು ಮಾತು, ವರ್ತನೆಯಲ್ಲಿ ಕಾಣಬರುವ ಅಶಿಸ್ತೆಂದು ಸದಾ ನೆನಪಿರಬೇಕು.
ಶಿಸ್ತು ಕಲಿಸುವುದಕ್ಕೆ, ಕಲಿಯುವುದಕ್ಕೆ ನಮ್ಮ ಆರ್ಥಿಕ ಸ್ಥಿತಿಗಳು ನೆಪವಾಗದಿರಲಿ. ಸಾಧ್ಯವಾದಷ್ಟು ಶಿಸ್ತಿನ ಬಾಳು ನಮ್ಮದಾಗಲಿ.
ಶ್ರೀರಕ್ಷಾ ಎಂ.ಜಿ.
ಮುಂಡುಕೋಡು