ಮೊದಲ ಬಾರಿ ಪೆನ್ ಕೈಗೆತ್ತಿಗೊಂಡ ಆ ಕ್ಷಣ ಈಗಲೂ ನನ್ನ ಮನಸ್ಸಿನಲ್ಲಿ ಹಸಿರಾಗಿದೆ. ಬಾಲ್ಯದ ದಿನಗಳಲ್ಲಿ ಪೆನ್ನು ಹಿಡಿಯುವುದೇ ನನ್ನ ದೊಡ್ಡ ಕನಸಾಗಿತ್ತು. ಮನೆಯಲ್ಲಿ ಅಕ್ಕ, ಅಣ್ಣ ಪೆನ್ನಿನಿಂದ ಸರಸರವಾಗಿ ಬರೆಯುವುದನ್ನು ಕುತೂಹಲದಿಂದ ನೋಡುತ್ತಿದ್ದ ನನಗೆ ಪೆನ್ನು ಬಳಸುತ್ತಿದ್ದ ಪ್ರತಿಯೊಬ್ಬರೂ ದೊಡ್ಡ ವ್ಯಕ್ತಿಯ ಹಾಗೆ ಕಾಣಿಸುತ್ತಿದ್ದರು. ನಾನು ಯಾವಾಗ ಅವರ ಹಾಗೆ “ದೊಡ್ಡ ವ್ಯಕ್ತಿ” ಆಗುತ್ತೇನೋ ಎಂದೆನಿಸುತ್ತಿತ್ತು.
ಶಿಕ್ಷಕರು ಬಳಸುವುದನ್ನು ನೋಡಿ ನಾವು ಯಾವಾಗ ಪೆನ್ನು ಬಳಸಲು ಆರಂಭಿಸುತ್ತೇವೆ ಎಂಬ ಕುತೂಹಲ ಮೂಡುತ್ತಿತ್ತು. ಒಂದು ದಿನ ಆ ಕ್ಷಣ ಬಂದೇಬಿಟ್ಟಿತು. ನಾಲ್ಕನೇ ತರಗತಿ ಮುಗಿಸಿಕೊಂಡು ಐದನೇ ತರಗತಿಗೆ ಕಾಲಿಟ್ಟಾಗ ಶಿಕ್ಷಕರು ಪೆನ್ನು ಬಳಸಲು ಅನುಮತಿ ನೀಡಿದರು. ಆ ದಿನ ಸಂಜೆ ಅಪ್ಪನೊಂದಿಗೆ ತುಂಬ ಹುರುಪಿನಿಂದ ಪೆನ್ನು ಖರೀದಿಸಲು ಅಂಗಡಿಗೆ ಹೋಗಿದ್ದೆ. ಜಗತ್ತನ್ನೇ ಗೆದ್ದ ಅನುಭವ ನನ್ನದಾಗಿತ್ತು. ಪೆನ್ನನ್ನು ಹಿಡಿದ ಆ ದಿನ ನನ್ನ ಜೀವನದ ಮುಖ್ಯವಾದ ದಿನಗಳಲ್ಲಿ ಒಂದಾಗಿದೆ ಎಂದರೆ ತಪ್ಪಿಲ್ಲ.
ಅದುವರೆಗೂ ಪೆನ್ಸಿಲ್‌ನಲ್ಲಿ ಬರೆದು ಅಭ್ಯಾಸವಾದ ನನಗೆ, ಪೆನ್ನಿನಲ್ಲಿ ಬರೆಯುವಾಗ ಮತ್ತೆ ನಾನು ಹೊಸದಾಗಿ ಬರೆಯುವುದನ್ನು ಕಲಿಯುತ್ತಿರುವ ಅನುಭವ, ಜತೆಗೆ ಒಂದು ದೊಡ್ಡ ಹಂತಕ್ಕೆ ಕಾಲಿಟ್ಟಿರುವ ಸಂಭ್ರಮ. ಎಷ್ಟೋ ಬಾರಿ ಪೆನ್ನಿನಿಂದ ಶಾಯಿ ಹೇಗೆ ಬರುತ್ತದೆ? ಇದು ಹೇಗೆ ಕೆಲಸ ಮಾಡುತ್ತದೆ? ಎನ್ನುವ ಪ್ರಶ್ನೆಗಳಿಗೆ ಉತ್ತರ ಹುಡುಕಲು ಹೋಗಿ ಅದನ್ನು ಹಾಳುಮಾಡಿರುವ ಉದಾಹರಣೆಗಳಿವೆ.
ಅಂದು ಪೆನ್ನಿನ ಬಳಕೆ ಊಹಿಸಿದಷ್ಟು ಸುಲಭವಾಗಿರಲಿಲ್ಲ. ಕ್ರಮೇಣ ಪೆನ್ನಿನಿಂದ ಬರೆಯುತ್ತಾ ಹೋದಂತೆ ಒಂದೊಂದೇ ಕಷ್ಟಗಳು ಎದುರಾಗುತ್ತಾ ಹೋದವು. ಶಾಯಿ ಹಾಕುವಾಗ ಕೈ, ಬಟ್ಟೆಯೆಲ್ಲಾ ಕೊಳೆಯಾಗಿ ಬೇಸರವಾಗಿದ್ದೂ ಇದೆ. ಬರೆಹವೋ ಸರಿಯಾಗಿರಲಿಲ್ಲ, ಕೈ ಹಿಡಿತವೂ ಸುಲಭವಾಗಿರಲಿಲ್ಲ, ಮುಖ್ಯವಾಗಿ ಪೆನ್ಸಿಲ್‌ನಲ್ಲಿ ತಪ್ಪಾದರೆ ಅಳಿಸಿ ಮತ್ತದೇ ಜಾಗದಲ್ಲಿ ಬರೆಯುವ ಸೌಲಭ್ಯ ಪೆನ್ನಿನಲ್ಲಿ ಇರಲಿಲ್ಲ. ಆ ಕ್ಷಣ ಅದರಿಂದ ಬರೆಯುವುದು ಎಷ್ಟು ಕಷ್ಟದ ಸಂಗತಿ ಜತೆಗೆ ತಪ್ಪು ಮಾಡದೇ ಬರೆಯುವುದು ಎಷ್ಟು ದೊಡ್ಡ ಜವಾಬ್ದಾರಿ ಎಂಬುದು ಅರಿವಾಯಿತು. ಹಲವು ಬಾರಿ ಪೆನ್ನಿಗಿಂತ ಪೆನ್ಸಿಲ್ ಬಳಕೆ ಎಷ್ಟೋ ಸುಲಭವೆನಿಸಿತ್ತು. ಪ್ರಯತ್ನಿಸುತ್ತಾ ಹೋದಂತೆ ಪೆನ್ನು ಹತ್ತಿರವಾಗಿ, ಬರಹದ ಶೈಲಿ ಸ್ವತ್ಛವಾಗಿ ಮತ್ತು ಸುಂದರವಾಗುತ್ತಾ ಹೋಯಿತು.
ಪ್ರಾರಂಭದಲ್ಲಿ ಬಳಪದಿಂದ ಶುರುವಾದ ಬರವಣಿಗೆ ಕ್ರಮೇಣ ಪೆನ್ಸಿಲ್‌ನ ಬಳಕೆ, ಅನಂತರದಲ್ಲಿ ಪೆನ್ನಿನ ಅಭ್ಯಾಸವಾಯಿತು. ಇತ್ತೀಚೆಗೆ ಅದರ ಬಳಕೆಯೂ ಕ್ರಮೇಣ ಕಡಿಮೆಯಾಗಿದ್ದು, ಬೆರಳಿನಲ್ಲೇ ಟೈಪ್ ಮಾಡಿ ಸಂದೇಶ ಕಳುಹಿಸುವ ಮಟ್ಟಿಗೆ ತಂತ್ರಜ್ಞಾನ ಬೆಳೆದಿದೆ. ಇದೇನೇ ಇರಲಿ, ಪೆನ್ನು ನನ್ನ ಬರವಣಿಗೆಯ ಜೀವನದಲ್ಲಿ ಮಹತ್ವದ ಪಾತ್ರ ವಹಿಸಿದೆ. ಅದು ನನಗೆ ಮತ್ತಷ್ಟು ವಿಶ್ವಾಸವನ್ನು ಮೂಡಿಸಿದೆ ಹಾಗೆಯೇ ಪೆನ್ನು ಖಡ್ಗಕ್ಕಿಂತ ಹರಿತ ಎಂಬ ಮಾತಿಗೆ ಅರ್ಥವನ್ನು ರೂಪಿಸಿಕೊಟ್ಟಿದೆ.
-ಮೇಘಾ ಗಲಗಲಿ
ಎಸ್‌ಡಿಎಂ ಕಾಲೇಜು, ಉಜಿರೆ