ಅದೊಂದು ರಜಾದಿನ ನಾನು ಮತ್ತು ನನ್ನ ಅಪ್ಪ ಮನೆಯನ್ನು ಒಂದು ಕಡೆಯಿಂದ ಸ್ವಚ್ಛ ಮಾಡುತ್ತಾ ಇದ್ದೆವು. ಮನೆಯ ಜಗಲಿಯಲ್ಲಿ ಬಲೆಗಡೆಯ ಗೋಡೆಯ ಮೇಲೆ ಸುಮಾರು 40 ರಿಂದ 50 ವರ್ಷ ಹಳೆಯ 28 ಇಂಚು ಉದ್ದ 12 ಇಂಚು ಅಗಲದ ಢಣ್ ಢಣ್ ಎಂದು ಶಬ್ದ ಬರುವ ಗಡಿಯಾರ. ಇನ್ನು ಅದನ್ನು ಸ್ವತ್ಛ ಮಾಡಲು ನಮ್ಮಪ್ಪ ನನ್ನ ಹತ್ತಿರವೇ ಹೇಳುತ್ತಾರೆಂದು ಆ ಕೆಲಸದಿಂದ ತಪ್ಪಿಸಿಕೊಳ್ಳಬೇಕೆಂದು ಬೇರೆ ಕೆಲಸಕ್ಕೆ ಕೈ ಹಾಕಿದೆ.
ಆದರೂ ಆ ಗಡಿಯಾರದ ಒಳಗೆ ಏನಿದೆ ಎಂದು ನೋಡುವ ಕುತೂಹಲ ಅದರ ಹತ್ತಿರ ನನ್ನನ್ನು ಬರುವಂತೆ ಮಾಡಿತು. ಗಾಜಿನ ಬಾಗಿಲು ನಿಧಾನವಾಗಿ ತೆಗೆದೆ ಅಬ್ಟಾ! ಸ್ವಲ್ಪ ಧೂಳು ಇತ್ತು. ಆದರು ಎಂದಿಗೂ ಅಷ್ಟು ದೊಡ್ಡ ಗಡಿಯಾರವನ್ನು ನೋಡಿರಲಿಲ್ಲ ಅದನ್ನು ನೋಡಿದ ಕೂಡಲೇ ಧೂಳು ಇರುವುದನ್ನು ಮರೆತು, ಟಕ್ ಟಕ್ ಎಂಬ ಶಬ್ದ ತರುವ ಆ ಕಡೆಯಿಂದ ಈ ಕಡೆ ನೇತಾಡುವ ಲೋಲಕ, ಹಾಗೆ ಕೆಳಗೆ ನೋಡಿದೆ, ಅಲ್ಲಿ ಏನೊ ಕೀಲಿ ಇರುವ ಹಾಗೆ ಕಾಣಿಸಿತು.
ಅದನ್ನು ತೆಗೆದು ಅಪ್ಪ ಇಲ್ಲಿ ಯಾವುದೋ ಕಿಣಿ ಇದೆ ಎಂದೇ. ಅದಕ್ಕೆ ಅಪ್ಪ ನಗುಮುಖದಿಂದ ಅದು ಗಡಿಯಾರಕ್ಕೆ ಊಟ ತಿನಿಸುವ ಚಮಚ ಎಂದರು. ನಾನು ಆ…. ಅಂದರೇನು ಎಂದು ಗೊಂದಲದಿಂದ ಅವರ ಮುಖ ನೋಡಿದೆ. ಆಮೇಲೆ ತಿಳಿಯಿತು ಅದು ಶೇಲ್ ಹಾಕೋ ತರ ಗಡಿಯಾರ ಅಲ್ಲ ಕೀಲಿ ಕೋಡುವ ಗಡಿಯಾರ. ಈ ತರಹದ ಗಡಿಯಾರ ಈಗ ಮ್ಯೂಸಿಯಂ ಗಳಲ್ಲಿ ಕಾಣಲು ಸಾಧ್ಯ. ಹಾಗೆ ಹಳೆ ಕಾಲದ ಒಂದೊಂದು ಮನೆಗಳಲ್ಲಿ ಮಾತ್ರ ಇದನ್ನು ನೋಡಲು ಸಿಗುತ್ತದೆ. ಮನೆ ಕಟ್ಟಿದ ಹೊಸದರಲ್ಲಿ ತಂದು ನೇತು ಹಾಕಿದ ಆ ಗಡಿಯಾರದ ಜಾಗ, ಬೇರೆ ವಸ್ತುಗಳ ಜಾಗ ಬದಲಾದರೂ ತಾತನ ನೆನಪಿನಲ್ಲಿಯೇ ಆ ಗಡಿಯಾರದ ಜಾಗ ತಟಸ್ಥವಾಗಿದೆ.
ಇನ್ನು ವಾರಕ್ಕೊಮ್ಮೆ ಆ ಗಡಿಯಾರಕ್ಕೆ ಕೀಲಿ ಕೊಡಬೇಕೆಂದು ತಾತ ತನ್ನ ಕೈಲಿ ಆಗದಿದ್ದರೂ ಬೇರೆಯವರ ಸಹಾಯವಿಲ್ಲದೆ ಟಿಪಾಯಿ ಹತ್ತಿ ಅದಕ್ಕೆ ಕೀ ಕೊಡುತ್ತಿದ್ದರಂತೆ. ಅದನ್ನು ನೋಡಿದರೆ ತಾತನ ನೆನಪುಗಳೇ ಮೂಡುತ್ತದೆ. ಕೆಲವೊಂದು ವಸ್ತುಗಳು ಜೀವನದಲ್ಲಿ ಎಷ್ಟು ಮುಖ್ಯ ಎಂದು ಇದರಿಂದ ತಿಳಿಯುತ್ತದೆ. ಅದರಿಂದ ವಸ್ತುಗಳನ್ನು ಎಷ್ಟು ಸಾಧ್ಯವೋ ಅಷ್ಟು ಜೋಪಾನವಾಗಿ ಇಟ್ಟುಕೊಳ್ಳಬೇಕು. ಕಳೆದುಕೊಂಡ ನಂತರ ಅದು ಬೇಕು ಎಂದರೆ ಎಂದು ಸಿಗಲಾಗದು ಹಾಗೆ ಅವತ್ತಿನ ಗಡಿಯಾರ ಇವತ್ತಿನ ಕಾಲದ ಲಕ್ಷದ ಸಾಮಾನುಗಳಿಗೆ (ವಸ್ತುಗಳಿಗೆ) ಸಮಾನ.
-ಪ್ರಜ್ಞಾ ಹೆಗಡೆ
ಎಸ್‌ಡಿಎಂ, ಉಜಿರೆ