Advertisement

Childhood Days: ಮರಳಿ ಬಾರದ ಬಾಲ್ಯ ಜೀವನ

03:20 PM Nov 23, 2024 | Team Udayavani |

ಎಲ್ಲರಿಗೂ ತಾವು ಕಳೆದುಕೊಂಡು ಬಂದಂತಹ ಬಾಲ್ಯದ ಜೀವನ ನೆನಪಿರುತ್ತದೆ. ಹಾಗೆಯೇ ಕೆಲವೊಂದು ನೆನಪುಗಳು ನಮ್ಮಲ್ಲಿ ಹಚ್ಚ ಹಸುರಾಗಿ ಉಳಿದುಕೊಂಡು ಬಿಡುತ್ತವೆ. ಕೆಲವೊಂದು ಸಿಹಿ ನೆನಪುಗಳಾದರೆ ಮತ್ತಷ್ಟು ಕಹಿ ನೆನಪುಗಳಿಂದ ಕೂಡಿರುತ್ತವೆ.

Advertisement

ನಾವು ಚಿಕ್ಕವರಿದ್ದಾಗ ಎಲ್ಲಾ ಸಣ್ಣ ಪುಟ್ಟ ವಿಷಯಕ್ಕೂ ಹೆಚ್ಚು ಖುಷಿ ಪಡುತ್ತಿದ್ದೆವು. ಶಾಲಾ ದಿನಗಳ ಆರಂಭದ ದಿನ ನಮಗೆ ಹೊಸ ಪುಸ್ತಕಗಳನ್ನು ನೀಡುತ್ತಿದ್ದರು. ಹೊಸ ಬ್ಯಾಗ್‌ ನೊಳಗೆ ಶಾಲೆಯಲ್ಲಿ ಸಿಕ್ಕಿದ ಪುಸ್ತಕಗಳನ್ನು, ಸ್ಲೇಟ್‌-ಬಳಪವನ್ನು ತುಂಬಿಕೊಂಡು ಬ್ಯಾಗನ್ನು ಬೆನ್ನಿಗೆ ಹಾಕಿಕೊಂಡು ಖುಷಿಯಿಂದ ಶಾಲೆಗೆ ಹೋಗುತ್ತಿದ್ದೆವು.

ಅಪ್ಪ ನಮ್ಮನ್ನು ಶಾಲೆಗೆ ಬಿಟ್ಟು ಮರಳುತ್ತಿದ್ದರು. ಹಾಗೆಯೇ ನಾವು ಶಾಲೆಗೆ ಹೋಗಿ ಪಾಲಿಯಂತೆ ತರಗತಿ ಗುಡಿಸಿ ಸ್ವತ್ಛವಾಗಿ ಇಟ್ಟುಕೊಳ್ಳುವುದು ಅದಾದ ಅನಂತರ ಮನೆಯಲ್ಲಿ ಮಾಡಿದ ತುಂಟಾಟದ ಬಗ್ಗೆ ಸ್ನೇಹಿತರಲ್ಲಿ ಹೇಳಿಕೊಳ್ಳುತ್ತ ಆನಂದಿಸುತ್ತಿದ್ದೆವು. ಬೆಳಿಗ್ಗೆ 9.30 ಆಯಿತು ಎಂದರೆ ಪ್ರಾರ್ಥನೆಯ ಬೆಲ್‌ ಹೊಡೆದು ಎಲ್ಲರನ್ನೂ ಸಾಲಿನಲ್ಲಿ ನಿಲ್ಲಿಸಿ ಪ್ರಾರ್ಥನೆ ಮಾಡಿಸುತ್ತಿದ್ದರು. ಪ್ರಾರ್ಥನೆ ಮುಗಿದ ಬಳಿಕ ಅವರವರ ಕ್ಲಾಸಿಗೆ ಹೋಗಿ ಗಲಾಟೆ ಮಾಡುತ್ತಾ ಕುಳಿತುಕೊಂಡುಬಿಡುವುದು.

ಮುಖ್ಯ ಮಂತ್ರಿ, ಉಪ ಮುಖ್ಯಮಂತ್ರಿ, ಪ್ರಾರ್ಥನ ಮಂತ್ರಿ, ಗ್ರಂಥಾಲಯ ಮಂತ್ರಿ, ನೀರಾವರಿ ಮಂತ್ರಿ, ಹೀಗೆ ವಿಧವಿಧದ ಸ್ಥಾನಕ್ಕೆ ನಮ್ಮಲ್ಲೇ ಮಂತ್ರಿಗಳನ್ನು ಮಂತ್ರಿಗಳನ್ನು ನೇಮಿಸುತ್ತಿದ್ದರು. ಮಧ್ಯಾಹ್ನ 12 ಗಂಟೆಯಾದರೆ ಸಾಕು ಎಲ್ಲರಿಗೂ ಹಸಿವು. ಯಾವಾಗ ಊಟಕ್ಕೆ ಆಗುತ್ತದೆಯೋ ಎಂಬ ಕಾತುರ. ಮನೆಯಲ್ಲಿ ಮಾಡುವ ಅಡುಗೆ ಹಿಡಿಸದಿದ್ದರು ಶಾಲೆಯಲ್ಲಿ ಮಾಡುವ ಅಡುಗೆ ತುಂಬಾ ರುಚಿಯೆನಿಸುತ್ತಿತ್ತು.

ಊಟದ ಬೆಲ್‌ ಆಗಿದ್ದೆ ತಡ ಎಲ್ಲರೂ ಪ್ಲೇಟನ್ನು ತೊಳೆದುಕೊಂಡು ಸಾಲಲ್ಲಿ ನಿಂತು ಊಟ ಹಾಕಿಸಿಕೊಂಡು ಹೋಗಿ ಕುಳಿತುಕೊಳ್ಳುತ್ತಿದ್ದೆವು. ಎಲ್ಲರೂ ಬಂದ ಅನಂತರ “ಅನ್ನಪೂರ್ಣೆ ಸಧಾಪೂರ್ಣೆ’ ಶ್ಲೋಕವನ್ನು ಹೇಳಿ ಊಟವನ್ನು ಶುರು ಮಾಡಬೇಕಿತ್ತು. ಒಂದೊಂದು ದಿನ ಶಾಲೆಯಲ್ಲಿ ಅಡುಗೆ ಮಾಡುವುದಿಲ್ಲ ಎಂದು ಗೊತ್ತಾದಾಗ ಮರುದಿನ ತಿಂಡಿ ತೆಗೆದುಕೊಂಡು ಹೋಗುವುದಕ್ಕೆ ಏನೋ ಖುಷಿ.

Advertisement

ಶಾಲೆಗೆ ಹೋದಾಗ ಸ್ನೇಹಿತರು ತಂದಿರುವ ತಿಂಡಿಯೇನು ಎಂದು ತಿಳಿದುಕೊಳ್ಳುವುದು ಬಹಳ ಕುತೂಹಲಕಾರಿ ವಿಷಯ. ಊಟದ ಸಮಯದಲ್ಲಿ ಮನೆಯಿಂದ ತಂದ ತಿಂಡಿಯನ್ನು ಎಲ್ಲ ಹಂಚಿಕೊಂಡು ತಿನ್ನುತ್ತಿದ್ದೆವು. ಮತ್ತೆ 2 ಗಂಟೆಗೆ ತರಗತಿಗೆ ಹೋಗಿ ಪಾಠವನ್ನು ಕೇಳಿ, ಗೆಳೆಯರ ಜೊತೆ ಒಂದಷ್ಟು ಆಟ ಆಡಿಕೊಂಡು, ಒಂದಷ್ಟು ಜಗಳ, ತುಂಟಾಟಗಳನ್ನು ಮಾಡಿಕೊಂಡು ಮನೆಗೆ ಮರಳುತ್ತಿದ್ದೆವು.

ಯಾರಾದರೂ ಒಬ್ಬರು ಇನ್ನೊಬ್ಬರನ್ನು ಬಿಟ್ಟು ಮೊದಲೇ ಹೋದರೆ ಅವರ ಮೇಲೆ ಹುಸಿಕೋಪ ತೋರಿ ಮರುದಿನ ಶಾಲೆಗೆ ಬಂದಾಗ ನಮ್ಮನ್ನು ಬಿಟ್ಟು ಹೋದವರಿಗೊಬ್ಬರಿಗೆ ಬಿಟ್ಟು ಬೇರೆ ಎಲ್ಲರಿಗೂ ಹಾಯ್‌ ಎಂದು ಹೇಳಿ ಮಾತನಾಡುತ್ತಿದ್ದೆವು.

ಪ್ರತಿಭಾ ಕಾರಂಜಿಗೆ ಹದಿನೈದು ದಿನ ಇದ್ದಾಗಲೇ ಅದಕ್ಕೆ ತಯಾರಿ ಮಾಡಿಕೊಳ್ಳುವುದು. ಬೆಳಿಗ್ಗೆ ಎದ್ದು ರೆಡಿಯಾಗಿ ಶಾಲೆಗೆ ಹೋಗಿ ಅಲ್ಲಿಂದ ಗಾಡಿ ಹತ್ತಿಕೊಂಡು ದಾರಿಯಲ್ಲಿ ಹೋಗುವಾಗ ಹಾಡಿನ ಬಂಡಿ ಆಡಿಕೊಂಡು ಹೋಗುತ್ತಿದ್ದೆವು. ಸ್ಪರ್ಧೆಯಲ್ಲಿ ಭಾಗವಹಿಸುವಾಗ ಸ್ವಲ್ಪ ಭಯ! ಆದರೂ ಗೆಲ್ಲಬೇಕು ಎಂಬ ಛಲದಿಂದ ಸ್ಪರ್ಧೆಯಲ್ಲಿ ಭಾಗವಹಿಸಿ, ಗೆದ್ದು ಬಹುಮಾನಗಳನ್ನು ತೆಗೆದುಕೊಂಡು ಬರುತ್ತಿದ್ದೆವು.

ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ ಮುಂತಾದ ಕಾರ್ಯಕ್ರಮ ಬಂದರೆ ಆ ದಿನ ಉಲ್ಲಾಸ, ಉತ್ಸಾಹದಿಂದ ಬೆಳಿಗ್ಗೆ ಬೇಗನೆ ಎದ್ದು ಬಿಳಿ ಬಟ್ಟೆ , ಶೂ, ಬೆಲ್ಟ್ ಹಾಕಿಕೊಂಡು ಶಾಲೆಗೆ ಹೋಗಿ ತಯಾರಿ ಮಾಡಿಕೊಳ್ಳುವುದು. ಕಾರ್ಯಕ್ರಮದಲ್ಲಿ ಭಾಷಣ, ಹಾಡು, ಡ್ಯಾನ್ಸ್‌ ಮಾಡಿ ಕೊನೆಗೆ ಚಾಕಲೇಟ್‌ ತಿಂದುಕೊಂಡು ಮನೆಗೆ ಹೋಗುವುದಾಗಿತ್ತು.

ಇವೆಲ್ಲ ಶಾಲೆಯ ತರಗತಿಗಳಿರುವ ಸಮಯದ ದಿನಚರಿಯಾದರೆ ಏಪ್ರಿಲ್‌ – ಮೇ ರಜೆ, ಅಕ್ಟೋಬರ್‌ ರಜೆಗಳಲ್ಲಿ ನಮ್ಮ ದಿನಚರಿಯೇ ಬೇರೆ. ಬೇಗ ಎಲ್ಲ ಹೋಂವರ್ಕ್‌ಗಳನ್ನು ಮುಗಿಸಿ ಆಟ ಆಡಲು ಹೋಗಿಬಿಡುತ್ತಿದ್ದೆವು (ಆದರೆ ಈಗ ಹಾಗಲ್ಲ ಸಣ್ಣ ಮಕ್ಕಳು ಆಟ ಆಡಲು ಹೋಗದೆ ಮೊಬೈಲ್‌, ಟಿವಿಯಲ್ಲಿ ಮುಳುಗಿರುತ್ತಾರೆ).

ರಜೆಗಳಲ್ಲಿ ನೆಂಟರ ಮನೆಗೆ ಹೋಗಿ ಸುತ್ತಾಡಿಕೊಂಡು ಬರುತ್ತಿದ್ದೆವು. ಚಿಕ್ಕವರಿದ್ದಾಗ ನಮ್ಮ ಹತ್ತಿರ ದೊಡ್ಡವರು ಮುಂದೆ ಏನಾಗುವೆ ಎಂದು ಕೇಳಿದಾಗ ಡಾಕ್ಟರ್‌, ಎಂಜಿನಿಯರ್‌, ಟೀಚರ್‌ ಎಂದು ಎಂದೆಲ್ಲ ಹೇಳಿಕೊಳ್ಳುತ್ತಿದ್ದೆವು. ಹೀಗೆ ಮಾಡುತ್ತಾ ನಮ್ಮ ಬಾಲ್ಯದ ಜೀವನವನ್ನು ಕಳೆದುಬಿಡುತ್ತೇವೆ. ಏನೇ ಆದರೂ ಆ ದಿನಗಳು ಮತ್ತೆ ಮರಳಿ ಬರುವುದಿಲ್ಲ. ಕಳೆದ ಪ್ರತಿಯೊಂದು ಸಿಹಿ – ಕಹಿ ಕ್ಷಣದ ನೆನಪುಗಳು ಮಾತ್ರ ಬದುಕಿನುದ್ದಕ್ಕೂ ಶಾಶ್ವತವಾಗಿರುತ್ತದೆ.

 ವೇದಾ ಭಟ್‌

ಎಂ.ಎಂ.,

ಮಹಾವಿದ್ಯಾಲಯ, ಶಿರಸಿ

 

Advertisement

Udayavani is now on Telegram. Click here to join our channel and stay updated with the latest news.

Next