Advertisement

UV Fusion: ಕುಟುಂಬ ಎಂಬ ಬೆಚ್ಚಗಿನ ರಕ್ಷಾ ಕವಚ

04:46 PM Nov 20, 2024 | Team Udayavani |

ಜಗತ್ತು ಆಧುನಿಕತೆಗೆ ತನ್ನನ್ನು ತಾನು ತೆರೆದುಕೊಳ್ಳುತ್ತಿದೆ. ತಂತ್ರಜ್ಞಾನ ಮನುಷ್ಯನ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಮೌಲ್ಯ, ಸಂಸ್ಕೃತಿ, ನೈತಿಕತೆ, ಸದಾಚಾರಗಳೆಲ್ಲವೂ ತನ್ನ ಅಸ್ಥಿತ್ವವನ್ನು ಕಳೆದುಕೊಳ್ಳುತ್ತಿರುವ ಈ ದಿನಮಾನಗಳಲ್ಲಿ ಕೌಟುಂಬಿಕ ವ್ಯವಸ್ಥೆಗೆ ಹೆಚ್ಚಿನ ಪಾಶಸ್ತ್ಯ ನೀಡುವ ಅಗತ್ಯವಿದೆ. ಮನುಷ್ಯ ಹುಟ್ಟಿದ ಕ್ಷಣದಿಂದಲೇ ಈ ಕುಟುಂಬ ಸಂಬಂಧ ಬೆಸೆದುಕೊಳ್ಳುತ್ತದೆ. ಕುಟುಂಬ ಎಂಬುದು ಭೂಮಿ ಮೇಲಿರುವ ಪ್ರತಿ ಜೀವಿಗೂ ಪ್ರಕೃತಿ ಕೊಟ್ಟಿರುವ ಅದ್ಭುತ ಕೊಡುಗೆ ಅಥವಾ ಉಡುಗೆಯಾಗಿದೆ.

Advertisement

ಮೂಲಭೂತವಾಗಿ ಕುಟುಂಬ ಎಂದರೇನು? ಎಂಬ ಪ್ರಶ್ನೆ ಸಹಜವಾಗಿ ಮೂಡುತ್ತದೆ. ಪರಸ್ಪರ ರಕ್ತ ಸಂಬಂಧ ಹೊಂದಿರುವವರೆಲ್ಲರೂ ಒಂದೇ ಮನೆಯಲ್ಲಿ ಒಟ್ಟಾಗಿ, ಸಂತೋಷವಾಗಿ ವಾಸ ಮಾಡುವುದನ್ನೇ ಕುಟುಂಬ ಎನ್ನಬಹುದು. ಒಬ್ಬ ವ್ಯಕ್ತಿಯ ವ್ಯಕ್ತಿತ್ವ ಅವನ ಕುಟುಂಬದಿಂದಲೇ ನಿರ್ಮಾಣಗೊಳ್ಳುತ್ತದೆ. ಕುಟುಂಬವೇ ಬದುಕಿನ ಆರಂಭವೂ ಹೌದು. ಇಲ್ಲಿಂದಲೇ ನಾವು ಎಲ್ಲವನ್ನೂ ಕಲಿಯುತ್ತೇವೆ. ಅದು ಕೆಟ್ಟದ್ದೂ ಆಗಿರಬಹುದು ಅಥವಾ ಒಳ್ಳೆಯದೂ ಆಗಿರಬಹುದು. ಯಾವುದೇ ಕಲಿಕೆಯ ಮೂಲ ಸ್ಥಾನ ಕುಟುಂಬವೇ ಆಗಿರುತ್ತದೆ.

ಕುಟುಂಬ ಕೇವಲ ಭಾವನಾತ್ಮಕವಾದ ಸಂಬಂಧ ಅಷ್ಟೇ ಅಲ್ಲ; ಅದೊಂದು ಮಾನಸಿಕ ಸಂಬಂಧವೂ ಹೌದು. ವ್ಯಕ್ತಿಯ ಪ್ರತಿ ಸಂದರ್ಭದಲ್ಲೂ ಜತೆಯಾಗಿ ನಿಂತು ಕಷ್ಟ ಬಂದಾಗ ಹೆಗಲು ಕೊಟ್ಟು ಸುಖ ಬಂದಾಗ ನಗುವನ್ನು ಹಂಚಿಕೊಳ್ಳುವ ಏಕೈಕ ತಾಣವೆಂದರೆ ಕುಟುಂಬ ಮಾತ್ರ. ಅಷ್ಟೇ ಅಲ್ಲದೇ, ಉತ್ತಮ ಮಾರ್ಗದರ್ಶನ ಸಿಗುವುದೂ ಇದೇ ಜಾಗದಲ್ಲಿ. ಆದ್ದರಿಂದ ಕುಟುಂಬವು ನಮಗೆ ಸಿಕ್ಕಂತ ಒಂದು ಉಡುಗೊರೆಯೇ ಆಗಿದೆ.

ಇಲ್ಲಿ ಯಾರಿಗೂ ಹೇಳಲಾಗದ ಸಮಸ್ಯೆ ಅಥವಾ ದುಃಖವನ್ನು ಕುಟುಂಬದವರ ಜತೆಗೆ ಯಾವುದೇ ಮುಜುಗರ ಇಲ್ಲದೆ ನೇರವಾಗಿ ಹಂಚಿಕೊಳ್ಳುವುದರಿಂದ ನಮ್ಮ ಮನಸ್ಸು ಹಗೂರವಾಗುತ್ತದೆ. ಬದುಕಿನಲ್ಲಿ ಎಂತಹದ್ದೇ ಸಂದರ್ಭದಲ್ಲೂ ನಮ್ಮನ್ನು ಒಂಟಿಯಾಗಿ ಬಿಟ್ಟು ಬಿಡುವುದಿಲ್ಲ. ಎಲ್ಲರೂ ಎಲ್ಲ ಕಾಲಕ್ಕೂ ಜತೆಯಾಗಿ ನಿಂತು ದಡ ಸೇರಲು ಸಹಾಯ ಮಾಡುತ್ತಾರೆ. ಇದೇ ನಿಜವಾದ ಬಾಂಧವ್ಯ.

ಒಬ್ಬ ವ್ಯಕ್ತಿ ಸಮಾಜದಲ್ಲಿ ಯಶಸ್ಸನ್ನು ಸಾಧಿಸಬೇಕಾದರೆ ಆ ಸಾಧನೆಯ ಹಿಂದೆ ಕುಟುಂಬದ ಬೆಂಬಲ ಮತ್ತು ಕುಟುಂಬ ಸದಸ್ಯರ ಪ್ರೋತ್ಸಾಹ ಪ್ರಮುಖ ಪಾತ್ರವನ್ನು ನಿರ್ವಹಿಸುತ್ತದೆ. ಕುಟುಂಬದಲ್ಲಿ ನೀಡುವ ಭರವಸೆ, ಪ್ರೀತಿ, ಸಹನೆ ನಾವು ಸಮಾಜವನ್ನು ಎದುರಿಸುವ ಶಕ್ತಿ ತುಂಬುತ್ತದೆ. ಕುಟುಂಬ ನಮಗೆ ಹಲವಾರು ಮೌಲ್ಯಗಳನ್ನು ಕಲಿಸುತ್ತದೆ. ಪ್ರಪಂಚದೊಂದಿಗೆ ಉತ್ತಮವಾದ ವ್ಯವಹಾರ ಹಾಗೂ ಸಂವಹನ ನಡೆಸಲು ಇದು ಅತ್ಯಂತ ಸಹಕಾರಿಯಾದುದಾಗಿದೆ.

Advertisement

ಕುಟುಂಬ ಆತ್ಮ ವಿಶ್ವಾಸ ಮತ್ತು ಸಮಾಜದಲ್ಲಿ ಎಲ್ಲರೊಂದಿಗೆ ಪ್ರೀತಿಯಿಂದ ನಡೆದುಕೊಳ್ಳುವಂತೆ ನೋಡಿಕೊಳ್ಳುತ್ತದೆ. ಬದುಕಿನ ಮೌಲ್ಯಗಳ ಜತೆಗೆ ನಮ್ಮ ಪೂರ್ವಿಕರು ಅನುಸರಿಸಿಕೊಂಡು ಬಂದಿರುವ ಆಚರಣೆ, ಸಂಸ್ಕೃತಿ, ಸಂಪ್ರದಾಯ ರೂಢಿಗಳನ್ನು ಮುಂದುವರೆಸಿಕೊಂಡು ಹೋಗುವ ಮೌಲ್ಯವನ್ನು ಹೇಳಿಕೊಡುತ್ತದೆ.

ಆದ್ದರಿಂದ ಕುಟುಂಬವು ನಮ್ಮ ಜೀವನದ ಒಂದು ಮುಖ್ಯವಾದ ಅಂಗವಾಗಿದೆ. ನಮಗೆ ಎಲ್ಲಿಯೂ ಸಿಗದ ಪ್ರೀತಿ ನಮ್ಮ ಕುಟುಂಬವು ನಮಗೆ ನೀಡುತ್ತದೆ. ಕುಟುಂಬದ ಪ್ರೀತಿ ಇಲ್ಲದೇ ಸಮಾಜದಲ್ಲಿ ಮನುಷ್ಯನ ಜೀವನವು ಸಂಪೂರ್ಣವಾಗಿ ಇರುವುದಿಲ್ಲ. ವಿಶೇಷವಾಗಿ ಕುಟುಂಬದ ಸದಸ್ಯರೊಂದಿಗೆ ಕಷ್ಟದ ಸಮಯ ಹಂಚಿಕೊಳ್ಳುವಲ್ಲಿ, ಸಂತೋಷದ ಸಮಯವನ್ನು ಕುಟುಂಬದೊಂದಿಗೆ ಆಚರಿಸುವ ವೇಳೆಯಲ್ಲಾಗಲೀ, ಕುಟುಂಬ ನಮಗೆ ಉತ್ತಮ ಮೌಲ್ಯಗಳನ್ನು ಹೇಳಿಕೊಡುವ ಮೂಲಕ ಉತ್ತಮ ವ್ಯಕ್ತಿಯಾಗುವ ನಿಟ್ಟಿನಲ್ಲಿ ಮಾರ್ಗದರ್ಶನ ನೀಡಿ ಸಲಹುತ್ತದೆ.

ಕುಟುಂಬ ಎಂಬುದು ಒಬ್ಬ ವ್ಯಕ್ತಿ ಜೀವನದಲ್ಲಿ ಅತ್ಯಂತ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ನಿಮಗೂ ಇಂತಹದ್ದೇ ಕುಟುಂಬವನ್ನು ಹೊಂದಿದ್ದರೆ ಎಂದಿಗೂ ಅದನ್ನು ಕಳೆದುಕೊಳ್ಳಬೇಡಿ. ಕುಟುಂಬದ ಜತೆಗೆ ಪರಿಪೂರ್ಣವಾಗಿ ಬದುಕುವ ಮೂಲಕ ನಿಮ್ಮ ಬದುಕನ್ನು ಸಾರ್ಥಕಪಡಿಸಿಕೊಳ್ಳಿ.

-ಸೈಮ

ಮಂಗಳೂರು ವಿವಿ

Advertisement

Udayavani is now on Telegram. Click here to join our channel and stay updated with the latest news.

Next