ಹೊಸದಿಲ್ಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಆಗುವ ವರೆಗೆ ವಿರಮಿಸುವುದಿಲ್ಲ ಎಂದು ಹೇಳಿದ್ದ ವಿಶ್ವ ಹಿಂದೂಪರಿಷತ್ (ವಿಎಚ್‌ಪಿ) ನಿಲುವಿನಲ್ಲಿ ಬದಲು ಮಾಡಿಕೊಂಡಿದೆ. ಲೋಕಸಭೆ ಚುನಾ ವಣೆ ಮುಕ್ತಾಯವಾಗುವ ವರೆಗೆ ಈ ಬಗ್ಗೆ ಪ್ರತಿಭಟನೆ ಮತ್ತು ಒತ್ತಾಯ ಮಾಡದೇ ಇರುವ ನಿರ್ಧಾರ ಪ್ರಕಟಿಸಿದೆ. ಸಂಘಟನೆಯ ಕಾರ್ಯಾ ಧ್ಯಕ್ಷ ಅಲೋಕ್ ಕುಮಾರ್ ನವದಹೆಲಿಯಲ್ಲಿ ಈ ಮಾಹಿತಿ ನೀಡಿದ್ದಾರೆ. ಅಲಹಾಬಾದ್‌ನಲ್ಲಿ ಕಳೆದ ವಾರ ನಡೆದಿದ್ದ ಧರ್ಮ ಸಂಸತ್‌ನಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ. ಪ್ರತಿಭಟನೆ ನಡೆಸದೇ ಇದ್ದರೂ, ಮಂದಿರ ನಿರ್ಮಾಣದ ನಿಟ್ಟಿಲ್ಲಿ ದೇಶಾದ್ಯಂತ ಅದರ ಪ್ರಾಮುಖ್ಯತೆ ಬಗ್ಗೆ ಅರಿವು ಮೂಡಿಸುವ ಪ್ರಯತ್ನ ನಡೆಸಲಾಗುತ್ತದೆ. ಬಿಜೆಪಿ ನೇತೃತ್ವದ ಕೇಂದ್ರ ಸರಕಾರಕ್ಕೆ ಮುಜುಗರ ತಪ್ಪಿಸಲು ನಿಲುವಿನಲ್ಲಿ ಬದಲಾವಣೆಯೇ ಎಂಬ ಪ್ರಶ್ನೆಗೆ ಅದೂ ಹೌದು ಎಂದಿದ್ದಾರೆ. ವಿಎಚ್‌ಪಿಯ ಈ ನಿರ್ಧಾರದಿಂದಾಗಿ ಕೇಂದ್ರ ಸರಕಾರವೀ ನಿಟ್ಟುಸಿರು ಬಿಡುವಂತಾಗಿದೆ. ಎನ್‌ಡಿಎಯಲ್ಲಿನ ಕೆಲ ಪಕ್ಷಗಳು ಮಂದಿರ ನಿರ್ಮಾಣದ ಬಗ್ಗೆ ಅತೃಪ್ತಿ ವ್ಯಕ್ತಪಡಿಸಿದ್ದವು ಎಂದು ಹೇಳಲಾಗಿತ್ತು.