ಹೈದರಾಬಾದ್: ಟಾಲಿವುಡ್ ಸೂಪರ್ ಸ್ಟಾರ್ ರಾಮ್ ಚರಣ್ (Ram Charan) ಅವರಿಗೆ ಅಪಾರ ಅಭಿಮಾನಿಗಳಿದ್ದಾರೆ. ಇತ್ತೀಚೆಗೆ ಅವರು ದರ್ಗಾವೊಂದಕ್ಕೆ ಭೇಟಿ ನೀಡಿರುವ ವಿಚಾರಕ್ಕೆ ಸುದ್ದಿಯಾಗಿದ್ದಾರೆ.
ಕಳೆದ ಕೆಲ ದಿನಗಳಿಂದ ರಾಮ್ ಚರಣ್ ಆಧ್ಯಾತ್ಮಿಕ ಪ್ರವಾಸದಲ್ಲಿದ್ದಾರೆ. ಅಯ್ಯಪ್ಪ ಮಾಲೆ ಧರಿಸಿರುವ ರಾಮ್ ಚರಣ್ ಇತ್ತೀಚೆಗೆ ದೇವಸ್ಥಾನ ಹಾಗೂ ದರ್ಗಾವೊಂದಕ್ಕೆ ಭೇಟಿ ನೀಡಿದ್ದಾರೆ.
ಇದನ್ನೂ ಓದಿ: Divorce: ಗಂಡನಿಂದ ವಿಚ್ಚೇದನ ಪಡೆದ ಎ.ಆರ್.ರೆಹಮಾನ್ ತಂಡದ ಸದಸ್ಯೆ ಮೋಹಿನಿ
ಶ್ರೀ ವಿಜಯ ದುರ್ಗಾ ದೇವಿ ದೇವಸ್ಥಾನದಲ್ಲಿ ಭೇಟಿ ನೀಡಿದ ಬಳಿಕ ಆಂಧ್ರಪ್ರದೇಶದ ಕಡಪದಲ್ಲಿರುವ ಅಮೀನ್ ಪೀರ್ ದರ್ಗಾ ಭೇಟಿ ನೀಡಿ ಚಾದರ್ ಅರ್ಪಿಸಿದ್ದಾರೆ.
ಅಯ್ಯಪ್ಪನ ಮಾಲಾಧಾರಣೆಯಲ್ಲಿ ದರ್ಗಾಕ್ಕೆ ಭೇಟಿ ನೀಡಿ ಹಿಂದೂಗಳ ಭಾವನಗೆ ಧಕ್ಕೆ ತಂದಿದ್ದಾರೆ ಎಂದು ಅನೇಕರು ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬೇರೆ ಸಮಯದಲ್ಲಿ ಬೇಕಾದರೆ ಅವರು ದರ್ಗಾಕ್ಕೆ ಭೇಟಿ ನೀಡಬಹುದಿತ್ತು ಆದರೆ ಅಯ್ಯಪ್ಪನ ಮಾಲಾಧಾರಣೆಯಲ್ಲಿ ಭೇಟಿ ನೀಡಿದ್ದು ತಪ್ಪು ಎಂದು ಕೆಲವರು ವಾದಿಸಿದ್ದಾರೆ.
ಇತರ ಧರ್ಮಗಳನ್ನು ಗೌರವಿಸುವುದು ಎಂದರೆ ನೀವು ಅಯ್ಯಪ್ಪ ಮಾಲೆಯಲ್ಲಿ ಅವರ ದರ್ಗಾಕ್ಕೆ ಹೋಗುತ್ತೀರಿ ಎಂದಲ್ಲ. ಅವರ ನಂಬಿಕೆಯನ್ನು ಅವಮಾನಿಸದೆ ಅವರ ಧರ್ಮವನ್ನು ನಾವು ಗೌರವಿಸಬಹುದು ಮತ್ತು ನಮ್ಮ ಧರ್ಮದಲ್ಲಿ ಹಸ್ತಕ್ಷೇಪ ಮಾಡದೆ ಅವರು ಮಾಡುವ ಕೆಲಸವನ್ನು ಗೌರವಿಸಬಹುದು ಎಂದು ಒಬ್ಬರು ರಾಮ್ ಚರಣ್ ದರ್ಗಾ ಭೇಟಿ ಬಗ್ಗೆ ಟ್ವೀಟ್ ಮಾಡಿದ್ದಾರೆ.
ಇದಕ್ಕೆ ಅವರ ಪತ್ನಿ ಉಪಾಸನಾ ಕೊನಿಡೇಲ (Upasana Konidela) ಟ್ವೀಟ್ ಮೂಲಕವೇ ಪ್ರತಿಕ್ರಿಯೆ ನೀಡಿದ್ದಾರೆ. “ಭಾರತೀಯರಾಗಿ ನಂಬಿಕೆಯು ನಮ್ಮನ್ನು ಒಂದುಗೂಡಿಸುತ್ತದೆ ವಿನಃ ವಿಭಜಿಸುವುದಿಲ್ಲ. ನಾವು ದೈವಿಕತೆಯ ಎಲ್ಲಾ ಮಾರ್ಗಗಳನ್ನು ಗೌರವಿಸುತ್ತೇವೆ ನಮ್ಮ ಶಕ್ತಿ ಏಕತೆಯಲ್ಲಿದೆ. ರಾಮ್ ಚರಣ್ ಅವರು ತಮ್ಮ ಧರ್ಮವನ್ನು ಪಾಲಿಸುವ ಜೊತೆಗೆ ಇತರ ಧರ್ಮಗಳನ್ನೂ ಗೌರವಿಸುತ್ತಾರೆ ಎಂದು ಟ್ವೀಟ್ ಮಾಡಿ ಗಂಡನ ದರ್ಗಾ ಭೇಟಿಯನ್ನು ಸಮರ್ಥಿಸಿಕೊಂಡಿದ್ದಾರೆ.
ಎಆರ್ ರೆಹಮಾನ್ ಈ ದರ್ಗಾಕ್ಕೆ ಆಗಾಗ ಭೇಟಿ ನೀಡುತ್ತಿರುತ್ತಾರೆ. ಈ ವರ್ಷ ರಾಮ್ ಚರಣ್ ಅವರನ್ನು ದರ್ಗಾದ ವಾರ್ಷಿಕ ಕಾರ್ಯಕ್ರಮಕ್ಕೆ ಕರೆತರುವುದಾಗಿ ಹೇಳಿದ್ದರು. ಅದರಂತೆ ರಾಮ್ ಚರಣ್ 80ನೇ ರಾಷ್ಟ್ರೀಯ ಮುಷೈರಾ ಗಜಲ್ ಕಾರ್ಯಕ್ರಮಕ್ಕಾಗಿ ದರ್ಗಾಕ್ಕೆ ಭೇಟಿ ನೀಡಿದ್ದರು.
ದರ್ಗಾ ಭೇಟಿ ವೇಳೆ ಅಪಾರ ಅಭಿಮಾನಿಗಳನ್ನು ನಿಯಂತ್ರಿಸಲು ಪೊಲೀಸರು ಹರಸಾಹಸ ಪಟ್ಟಿದ್ದಾರೆ.
ಸದ್ಯ ರಾಮ್ ಚರಣ್ ʼಗೇಮ್ ಚೇಂಜರ್ʼ ಸಿನಿಮಾದಲ್ಲಿ ಬ್ಯುಸಿಯಾಗಿದ್ದಾರೆ. ಇದಾದ ಬಳಿಕ ಬುಚ್ಚಿ ಬಾಬು ಸನಾ ಅವರ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.