Advertisement

ರೀಲ್‌ನಿಂದ ರಿಯಲ್‌ ಕೃಷಿಯತ್ತ ಚಿತ್ರೋದ್ಯಮಿ ಚಿತ್ತ; ‌ಬಸವರಾಜ ಚಿತ್ರ ಮಂದಿರದ ಮಾಲೀಕ ಕೋಳೂರು!

04:53 PM Nov 07, 2024 | Team Udayavani |

ಉದಯವಾಣಿ ಸಮಾಚಾರ
ಕುಷ್ಟಗಿ: ಇತ್ತೀಚಿನ ದಿನಗಳಲ್ಲಿ ಚಿತ್ರಮಂದಿರಗಳಲ್ಲಿ ಪ್ರೇಕ್ಷಕ ಸಂಖ್ಯೆ ಕಡಿಮೆಯಾಗುತ್ತಿದೆ. ಹೀಗಾಗಿ, ಮಾಲೀಕರಿಗೆ ನಿರ್ವಹಣೆ ವೆಚ್ಚ ಭರಿಸುವುದೂ ಕಷ್ಟಕರವಾಗಿದೆ. ಪರಿಣಾಮವಾಗಿ ಪರ್ಯಾಯ ಉದ್ಯೋಗ ದತ್ತ ಮುಖ ಮಾಡುವುದು ಅನಿವಾರ್ಯವಾಗಿದೆ. ಅಂತೆಯೇ ಸ್ಥಳೀಯ ಬಸವರಾಜ ಚಿತ್ರ ಮಂದಿರದ ಮಾಲೀಕ ಮಹೇಶ ಕೋಳೂರು ರೀಲ್‌ನಿಂದ ರಿಯಲ್‌ ಕೃಷಿಯತ್ತ ಮುಖ ಮಾಡಿದ್ದಾರೆ.

Advertisement

ತಾಲೂಕಿನ ಮೀಯಾಪೂರ ಸೀಮಾದಲ್ಲಿ 18 ಎಕರೆ ಜಮೀನು ಲೀಸ್‌ ಪಡೆದು ಕಬ್ಬು, ಕೆಂಪು ಮೆಣಸಿನಕಾಯಿ ಕೃಷಿ ಆರಂಭಿಸಿದ್ದಾರೆ. ಚಿತ್ರಮಂದಿರ ದಿಂದ ಸಿಹಿ, ಕಹಿ ಅನುಭವಿಸಿರುವ ಮಹೇಶ ಕೋಳೂರು ಅವರು, ಎರೆ ಜಮೀನಿನಲ್ಲಿ ಹನಿ ನೀರಾವರಿ ಆಶ್ರಿತ ವಾಗಿ ಕಬ್ಬು, ಕೆಂಪು ಮೆಣಸಿನಕಾಯಿ ಬೆಳೆಯ ಮೂಲಕ ಉತ್ತಮ ಲಾಭದ ನಿರೀಕ್ಷೆಯಲ್ಲಿದ್ದಾರೆ. ಈ ಬೆಳೆಯ ನಂತರ 18 ಎಕರೆ ಯಲ್ಲಿ ಕಬ್ಬು ಬೆಳೆಯುವ ಉದ್ದೇಶ ಹೊಂದಿದ್ದಾರೆ.10 ಎಕರೆಯಲ್ಲಿ ಸರ್ಫನ್‌ 102, ಡಬ್ಬಿ ಬ್ಯಾಡಗಿ ವಿಶೇಷ ತಳಿ ಮೆಣಸಿ ನಕಾಯಿ ಬೆಳೆದಿದ್ದಾರೆ.

ಉಳಿದ 8 ಎಕರೆಯಲ್ಲಿ ಕಬ್ಬು ಬೆಳೆದಿದ್ದು, ಕಬ್ಬು ಸದ್ಯ 9 ತಿಂಗಳ ಬೆಳೆ ಇದ್ದು, 18 ರಿಂದ 20 ಗಣಕಿ ಎತ್ತರ ಬೆಳೆದಿದೆ. ಪ್ರತಿ ಎಕರೆಗೆ 70 ರಿಂದ 80 ಟನ್‌ ಇಳುವರಿ ನಿರೀಕ್ಷೆ ಇದೆ. ಆಲಮಟ್ಟಿ ಸದಾಶಿವ ಫ್ಯಾಕ್ಟರಿ, ಬಾಲಾಜಿ ಫ್ಯಾಕ್ಟರಿಯವರು ಬಂದು ನೋಡಿಕೊಂಡು ಹೋಗಿದ್ದು, ಎಲ್ಲಿ ಉತ್ತಮ ದರ ಸಿಗುತ್ತದೋ ಅಲ್ಲಿ ಕಬ್ಬು ಸಾಗಣೆ ಮಾಡುವ ಲೆಕ್ಕಾಚಾರದಲ್ಲಿದ್ದಾರೆ.

ಲಾಭದ ನಿರೀಕ್ಷೆ
ಕಳೆದ ಮೇ ತಿಂಗಳಿನಲ್ಲಿ 60 ಸಾವಿರ ರೂ. ಬಿತ್ತನೆ ಬೀಜ ಖರೀದಿಸಿ, ನರ್ಸರಿಯಲ್ಲಿ 33 ದಿನಗಳವರೆಗೆ ಬೆಳೆಸಿ, ಜೂನ್‌
ತಿಂಗಳಿನಲ್ಲಿ ನಾಟಿ ಮಾಡಿದ್ದಾರೆ. ನಾಟಿ ಮಾಡಿದ 45 ದಿನಗಳಲ್ಲಿ ಇಳುವರಿ ಶುರುವಾಗಿದ್ದು, ಪ್ರತಿ ಗಿಡದಲ್ಲೂ ಗೊಂಚಲುಗಟ್ಟಲೇ ಕಾಯಿಗಳು ಹಿಡಿದಿದ್ದರಿಂದ ಎಕರೆಗೆ ಸರಾಸರಿ 10 ಕ್ವಿಂಟಲ್‌ ನಿರೀಕ್ಷೆಯಲ್ಲಿದ್ದರು. ಆದರೆ, ಸೆಪ್ಟೆಂಬರ್‌ ತಿಂಗಳಿನಲ್ಲಿ ನಿರಂತರ ಮಳೆ ಇಳುವರಿ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿದ್ದರಿಂದ, ಸದ್ಯ ಎಕರೆಗೆ 8 ಕ್ವಿಂಟಲ್‌ ಸರಾಸರಿ ಇಳುವರಿ ನಿರೀಕ್ಷೆಯಲ್ಲಿದ್ದಾರೆ.

Advertisement

ಕೆಂಪು ಮೆಣಸಿನಕಾಯಿಗೆ ಬೇಡಿಕೆ
ಸದ್ಯ ಮಾರುಕಟ್ಟೆಯಲ್ಲಿ ಪ್ರತಿ ಕ್ವಿಂಟಲ್‌ ಮೆಣಸಿನಕಾಯಿಗೆ 35 ಸಾವಿರ ರೂ. ಧಾರಣೆ ಇದೆ. ಮುಂದೆ ಜನವರಿ, ಫೆಬ್ರವರಿ ತಿಂಗಳಲ್ಲಿ ಇನ್ನೂ ಧಾರಣೆ ಹೆಚ್ಚಾಗುವ ನಿರೀಕ್ಷೆ ಇದೆ ಎನ್ನುತ್ತಾರೆ ಕೆಂಪು ಮೆಣಸಿನಕಾಯಿ ಬೆಳೆಗಾರ ಮಹೇಶ ಕೋಳೂರು. ಕಳೆದ ವರ್ಷ ಕೆಂಪು ಮೆಣಸಿನಕಾಯಿ ದಿಢೀರ್‌ ಬೆಲೆ ಕುಸಿತದಿಂದ ನಷ್ಟ ಮಾಡಿಕೊಂಡಿದ್ದ ಬಹುತೇಕ ರೈತರು, ಇದೇ ಬೆಳೆ ಬೆಳೆಯದೇ ಪರ್ಯಾಯವಾಗಿ ತೊಗರಿ, ಮೆಕ್ಕೆಜೋಳ ಈರುಳ್ಳಿ ಇತ್ಯಾದಿ  ಬೆಳೆ ಬೆಳೆದಿದ್ದರಿಂದ ಕೆಂಪು ಮೆಣಸಿನಕಾಯಿ ಕ್ಷೇತ್ರದ ವ್ಯಾಪ್ತಿ ವಿಸ್ತರಣೆಯಾಗಿಲ್ಲ. ಇದೇ ರೀತಿ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣದಲ್ಲೂ ಇದರ ನಿರೀಕ್ಷಿತ ಉತ್ಪನ್ನ ಪ್ರಮಾಣವೂ ತಗ್ಗಿದೆ.
ನರ್ಸರಿಗಳನ್ನು ನಿರ್ವಹಿಸುವವರ ಪ್ರಕಾರ ಪ್ರತಿವರ್ಷ ಶೇ.100ರಷ್ಟಿದ್ದ ಮೆಣಸಿನಗಿಡ ನರ್ಸರಿ, ಈ ವರ್ಷ ಶೇ.50 ರಷ್ಟಿಲ್ಲ. ಹೀಗಾಗಿ ಕೆಂಪು ಮೆಣಸಿನಕಾಯಿಗೆ ಇನ್ನೂ ಬೇಡಿಕೆ ಹೆಚ್ಚುವ ಸಾದ್ಯತೆಗಳಿವೆ ಎನ್ನುತ್ತಾರೆ ಮಹೇಶ ಕೋಳೂರು.

ಸರ್ಫನ್‌ 102, ಬ್ಯಾಡಗಿ ಡಬ್ಬಿ ವಿಶೇಷ ತಳಿಯಾಗಿದ್ದು, ಆಕರ್ಷಕ ಬಣ್ಣ, ರಿಂಕಲ್ಸ್‌ಗಳಿಂದ ಕೂಡಿದ್ದು ಟಾಪ್‌ ಒನ್‌ ಗುಣಮಟ್ಟದ ಇಳುವರಿಗೆ ಗುಣಮಟ್ಟದ ಬೆಲೆ ಸಿಗುವ ನಿರೀಕ್ಷೆ ಇದೆ. ಅಲ್ಲಿಯವರೆಗೂ ಕುಷ್ಟಗಿ ಕೋಲ್ಟ್ ಸ್ಟೋರೇಜ್‌ನಲ್ಲಿ ಒಂದೆರೆಡು ತಿಂಗಳು
ವೈಜ್ಞಾನಿಕವಾಗಿ ಸಂಗ್ರಹಿಸಿಟ್ಟು, ಮಾರುಕಟ್ಟೆಯಲ್ಲಿ ಬೆಲೆ ಇನ್ನಷ್ಟು ಚೇತರಿಸಿಕೊಂಡರೆ ಮಾರಾಟ ಮಾಡಲು ನಿರ್ಧರಿಸಿದ್ದೇನೆ.
ಮಹೇಶ ಕೋಳೂರು, ಕೃಷಿಕ

*ಮಂಜುನಾಥ ಮಹಾಲಿಂಗಪುರ

Advertisement

Udayavani is now on Telegram. Click here to join our channel and stay updated with the latest news.

Next