Advertisement

Paduperar: ಈ ಬಾರಿ ರಾಮ ಮಂದಿರ ಗೂಡುದೀಪ!

11:09 AM Oct 25, 2024 | Team Udayavani |

ಬಜಪೆ: ಪಡುಪೆರಾರದ ಶ್ರೀ ನಾಗಬ್ರಹ್ಮ ಯುವಕ ಮಂಡಲ ಕಳೆದ 27 ವರ್ಷಗಳಿಂದ ದೀಪಾವಳಿ ಹಬ್ಬಕ್ಕೆ ಹೊಸ ಹೊಸ ಮಾದರಿಯ ಗೂಡುದೀಪವನ್ನು ನಿರ್ಮಿಸುತ್ತಿದೆ. ಈ ಬಾರಿ 28ನೇ ವರ್ಷಕ್ಕೆ ಅಯೋಧ್ಯೆ ಶ್ರೀ ರಾಮ ಮಂದಿರದ ಮಾದರಿಯ ಗೂಡು ದೀಪವನ್ನು ನಿರ್ಮಿಸುವ ಕಾರ್ಯದಲ್ಲಿ ಯುವಕರು ನಿರತರಾಗಿದ್ದಾರೆ.

Advertisement

ಯುವಕರು ಅತ್ಯಂತ ಸಂಭ್ರಮದಿಂದ ತಯಾರಿಸುವ ಈ ಬೃಹತ್‌ ಗೂಡು ದೀಪವನ್ನು ಪ್ರತಿವರ್ಷವೂ ಪಡುಪೆರಾರ ಶ್ರೀ ಬ್ರಹ್ಮ ಬಲವಾಂಡಿ ದೈವಸ್ಥಾನದ ಮಹಾದ್ವಾರದ ಬಳಿ ಬಜಪೆ- ಕೈಕಂಬ ರಾಜ್ಯ ಹೆದ್ದಾರಿ101ರಲ್ಲಿ ಬದಿಯಲ್ಲಿ ಸ್ಥಾಪಿಸಲಾಗುತ್ತದೆ. ಇದು ಈ ರಸ್ತೆಯಲ್ಲಿ ಸಂಚರಿಸುವ ಪ್ರಯಾಣಿಕರಿಗೆ ಭಾರೀ ಆಕರ್ಷಣೀಯವಾಗಿದೆ. ಪ್ರತಿ ವರ್ಷವೂ ಪ್ರಚಲಿತ ವಿದ್ಯಮಾನಕ್ಕೆ ತಕ್ಕಂತೆ ವಿಶೇಷಗಳನ್ನೂಳಗೊಂಡ ಮಾದರಿಯನ್ನು ತಯಾರಿಸುವುದು ಯುವಕ ಮಂಡಲದ ಯುವಕರ ವಿಶೇಷತೆ.

ಧನಲಕ್ಷ್ಮಿ ಟ್ಯಾಬ್ಲೋ ಮಾದರಿ, ಬ್ರಹ್ಮರಥ, ವಿಮಾನ, ಉದ್ಭವ ಲಿಂಗ, ಗಾಳಿಪಟ, ರಂಗಸ್ಥಳ, ನಾಗಮಂಡಲ, ಹೆಲಿಕಾಪ್ಟರ್‌ ಮುಂತಾದ ವಿವಿಧ ಆಕಾರದ ಗೂಡುದೀಪಗಳನ್ನು ನಿರ್ಮಾಣ ಮಾಡುತ್ತಾ ಬಂದಿರುವ ಯುವಕ ಮಂಡಲದ ಸದಸ್ಯರು ಹೊಸ ಹೊಸ ಚಿಂತನೆಗಳೊಂದಿಗೆ ಸಾರ್ವಜನಿಕರಿಗೆ ಮನಸ್ಸಿಗೆ ಮುದ ನೀಡುತ್ತಿದ್ದಾರೆ.

27ನೇ ವರ್ಷಕ್ಕೆ ಚಂದ್ರಯಾನ 3 ಮಾದರಿಯ ಬೃಹತ್‌ ಗೂಡುದೀಪ ನಿರ್ಮಿಸಲಾಗಿತ್ತು.ಗೂಡುದೀಪ ಮಾದರಿಯನ್ನು ಅ.31ರಂದು ಕತ್ತಿಂಜದಿಂದ ಪೆರಾರ ದ್ವಾರಕ್ಕೆ ತರಲಾಗುತ್ತದೆ. ಅಲ್ಲಿ ವೇದಿಕೆಯಲ್ಲಿ ಇಡಲಾಗುತ್ತದೆ. ಅಯೋಧ್ಯ ಶ್ರೀರಾಮ ಮಂದಿರದ ಮಾದರಿಯಾದ ಕಾರಣ ಇದನ್ನು ನೇತಾಡಿಸುವ ಇರಾದೆ ಇಲ್ಲವಂತೆ. ಬಣ್ಣಬಣ್ಣದ ದೀಪದಿಂದ ಇದನ್ನು ಶೃಂಗಾರಗೊಳಿಸಲಾಗುತ್ತದೆ ಎಂದು ತಿಳಿಸಿದ್ದಾರೆ.

ರಾಮ ಮಂದಿರ: 2 ತಿಂಗಳಿನಿಂದ ನಿರ್ಮಾಣ!
ಅಯೋಧ್ಯ ಶ್ರೀರಾಮ ಮಂದಿರದ ಮಾದರಿಯ ಗೂಡು ದೀಪವನ್ನು ನಿರ್ಮಿಸಲು ಯುವಕ ಮಂಡಲ ಸದಸ್ಯರು ಕಳೆದ 2 ತಿಂಗಳಿನಿಂದ ಕೆಲಸ ಮಾಡುತ್ತಿದ್ದಾರೆ.  ಸದಸ್ಯರೆಲ್ಲರೂ ಸಂಜೆಯ ವೇಳೆಗೆ ಪಡುಪೆರಾರದ ಕಟ್ತಿಂಜದ ಜರ್ನಾದನ ಶೆಟ್ಟಿಯವರ ಮನೆಯಲ್ಲಿ ಸೇರಿ ಈ ಗೂಡುದೀಪ ನಿರ್ಮಾಣದಲ್ಲಿ ತೊಡಗಿದ್ದಾರೆ. ಕಬ್ಬಿಣದ ರಾಡ್‌, ಪಾಮ್‌ ಶೀಟ್‌ ಅಳವಡಿಸಿ, ನಾಲ್ಕು ಬಣ್ಣ ದಿಂದ ಕೂಡಿದ ಅಯೋಧ್ಯ ಶ್ರೀರಾಮ ಮಂದಿರದ ಮಾದರಿ ನಿರ್ಮಿಸುತ್ತಿದ್ದಾರೆ. ಈ ಗೂಡುದೀಪ 10 ಅಡಿ ಎತ್ತರ, 11 ಅಡಿ ಉದ್ದ, 7 ಅಡಿ ಅಗಲವಿದೆ.

Advertisement

-ಸುಬ್ರಾಯ ನಾಯಕ್‌ ಎಕ್ಕಾರು

Advertisement

Udayavani is now on Telegram. Click here to join our channel and stay updated with the latest news.

Next