Advertisement

ಚುಳಕಿನಾಲಾಕ್ಕಿಲ್ಲ ಒಳ ಹರಿವು

12:22 PM Aug 31, 2018 | Team Udayavani |

ಬಸವಕಲ್ಯಾಣ: ಮಳೆಗಾಲ ಪ್ರಾರಂಭವಾಗಿ ಮೂರು ತಿಂಗಳು ಗತಿಸುತ್ತ ಬಂದರೂ, ನಗರ ಹಾಗೂ ಸುತ್ತಮುತ್ತಲಿನ ಗ್ರಾಮೀಣ ಭಾಗದ ಜನರಿಗೆ, ರೈತರಿಗೆ ಕುಡಿಯುವ ನೀರಿಗೆ ಆಸರೆಯಾದ ಚುಳಕಿನಾಲಾ ಜನಾಶಯದಲ್ಲಿ ಈ ಪ್ರಸಕ್ತ ವರ್ಷದಲ್ಲಿ ಒಂದುಹನಿಯೂ ಹೊಸ ನೀರು ಸಂಗ್ರಹವಾಗಿಲ್ಲ.

Advertisement

ಜನಾಶಯದ ಗರಿಷ್ಠ ನೀರಿನ ಸಾಮರ್ಥ್ಯ 1.18 ಟಿಎಂಸಿ, ಶೇಖರಣಾ ಸಾಮರ್ಥ್ಯ ಒಟ್ಟು 0.983 ಟಿಎಂಸಿ ಹಾಗೂ ಕ್ರೇಸ್ಟನ್‌ ಮಟ್ಟ 58,700 ಮೀ. ಮತ್ತು ತೂಬಿನ ತಳಮಟ್ಟ 584.30 ಮೀ. ಇದೆ. ಎರಡು ವರ್ಷಗಳ ಹಿಂದೆ ಮಳೆ ಕೊರತೆಯಿಂದ ಜಲಾಶಯ ಸಂಪೂರ್ಣ ಬತ್ತಿ ಉಪಯೋಗಕ್ಕೆ ಬಾರದಂತಾಗಿ, ಕೋಟ್ಯಂತರ ರೂ. ವೆಚ್ಚದಲ್ಲಿ ಯೋಜನೆ ರೂಪಿಸಿ 10 ಕಿ.ಮೀ. ದೂರ ಇರುವ ನಗರಕ್ಕೆ ನೀರು ಸರಬರಾಜು ಮಾಡಲಾಗುತ್ತಿತ್ತು. 

ಕಳೆದ ವರ್ಷ ಅತಿವೃಷ್ಠಿಯಿಂದ ಜಲಾಶಯ ಭರ್ತಿ ಆಗಿರುವುದರಿಂದ ಜಲಾಶಯದ ಸಾಮರ್ಥ್ಯ ನೋಡಿಕೊಂಡು ಒಂದು ದಿನದಲ್ಲಿ ಎರಡು ಗೇಟ್‌ ನೀರು ಹೊರಗಡೆ ಹರಿಸುವ ಜೊತೆಗೆ, ಕೋಟ್ಯಂತರ ರೂ. ವೆಚ್ಚದ ಯೋಜನೆಗೆ ಮರು ಜೀವ ಸಿಕ್ಕಂತಾಗಿದ್ದು, ಬಸವಕಲ್ಯಾಣಕ್ಕೆ ನಿತ್ಯ ಇಂದು 1.94 ಕ್ಯೂಸೆಕ್‌ ನೀರು ಹರಿಸಲಾಗುತ್ತಿದೆ.

ಪ್ರಸಕ್ತ ವರ್ಷದ ಮಳೆಗಾಲ ಆರಂಭ ತಿಂಗಳಲ್ಲಿ 100 ಎಂ.ಎಂ. ಮಳೆ ಬಂದಾಗ 591 ಮೀ. ಹೊಸ ನೀರು ಸಂಗ್ರಹವಾಗಿತ್ತು. ಆದರೆ ಮಧ್ಯದಲ್ಲಿ ಒಂದು ತಿಂಗಳು ಮಳೆ ಬಾರದ ಹಿನ್ನೆಲೆಯಲ್ಲಿ 590.87 ಮೀ.ಗೆ ಇಳಿಕೆ ಆಗಿರುವುದು ಸಾರ್ವಜನಿಕರು ಮತ್ತು ರೈತರು ಆತಂಕ ಪಡುವಂತಾಗಿದೆ. ಕಾರಣ ಜಲಾಶಯದಲ್ಲಿ ನೀರು ಇದ್ದರೆ ಮಾತ್ರ ಸುತ್ತಮುತ್ತಲಿನ ಕೊಳವೆ ಬಾವಿ ಹಾಗೂ ತೋಟದ ಬಾವಿಗಳಲ್ಲಿ ಬೇಸಿಗೆಯಲ್ಲಿ ನೀರು ಇರುತ್ತವೆ.

ಇದರಿಂದ ಬೆಳೆಗಳಿಗೆ ಮತ್ತು ಜಾನುವಾರುಗಳಿಗೆ ನೀರು ಕಡಿಮೆ ಆಗುವುದಿಲ್ಲ. ಒಂದು ವೇಳೆ ಮಳೆ ಬಾರದಿದ್ದಲ್ಲಿ ಸಮಸ್ಯೆ ಎದುರಿಸಬೇಕಾಗುತ್ತದೆ ಎಂಬುದು ರೈತರ ಅಭಿಪ್ರಾಯವಾಗಿದೆ.

Advertisement

ಪ್ರತಿವರ್ಷ ಸೆಪ್ಟೆಂಬರ್‌ ತಿಂಗಳಲ್ಲಿ ಬರುವ ಮಳೆಯಿಂದ ಜಲಾಶಯಕ್ಕೆ ಹೆಚ್ಚು ನೀರು ಸಂಗ್ರಹವಾಗುತ್ತವೆ ಎನ್ನುವುದು
ಅಧಿಕಾರಿಗಳ ಮಾತು. ಮುಂದಿನ ತಿಂಗಳಲ್ಲೂ ಮಳೆ ಆಗದಿದ್ದರೆ ಸಾರ್ವಜನಿಕರು ಮತ್ತು ರೈತರು ಸಮಸ್ಯೆ ಎದುರಿಸಬೇಕಾಗುತ್ತದೆ.

ಸೆಪ್ಟೆಂಬರ್‌ನಲ್ಲಿ ಚನ್ನಾಗಿ ಮಳೆ ಬಂದರೆ ನಮ್ಮ ಜಲಾಶಯದ ಸಾಮರ್ಥ್ಯಕ್ಕೆ ತಕ್ಕಂತೆ ನೀರು ಶೇಖರಣೆ ಆಗಬಹುದು. ಒಂದು ವೇಳೆ ಮಳೆ ಕೈ ಕೊಟ್ಟರು ಒಂದು ವರ್ಷದ ವರೆಗೂ ನಗರಕ್ಕೆ ನೀರು ಸರಬರಾಜು ಮಾಡುವಷ್ಟು ನೀರು ಇದೆ. 
  ಚಂದ್ರಕಾಂತ ಸಕ್ಕರೆಭಾವಿ, ಜಲಾಶಯ ಅಧಿಕಾರಿ, ಬಸವಕಲ್ಯಾಣ

ವೀರಾರೆಡ್ಡಿ ಆರ್‌.ಎಸ್‌.

Advertisement

Udayavani is now on Telegram. Click here to join our channel and stay updated with the latest news.

Next