Advertisement

Belman: ಅಣೆಕಟ್ಟಿನ ಹಲಗೆ ಅಳವಡಿಕೆ; ತುಂಬಿದ ಶಾಂಭವಿ ನದಿ

02:39 PM Jan 09, 2025 | Team Udayavani |

ಬೆಳ್ಮಣ್‌: ಸಂಕಲಕರಿಯ, ಏಳಿಂಜೆ, ಕೊಟ್ರಪಾಡಿ, ಪೊಸ್ರಾಲು ಭಾಗದ ಕೃಷಿಕರ ಪಾಲಿನ ಜೀವ ನದಿಯಾದ ಶಾಂಭವಿ ನದಿ ತುಂಬಿ ತುಳುಕಲಾರಂಭಿಸಿದೆ. ಇಲ್ಲಿನ ಕಿಂಡಿ ಅಣೆಕಟ್ಟಿಗೆ ಹಲಗೆ ಹಾಕುವ ಕೆಲಸ ನಡೆಯುತ್ತಿರುವುದರಿಂದ ನದಿಯಲ್ಲಿ ನೀರು ತುಂಬಿದೆ.

Advertisement

ಸಂಕಲಕರಿಯದ ರಂಗನಟ ಸುಧಾಕರ ಸಾಲ್ಯಾನ್‌ ಈ ಆಣೆಕಟ್ಟು ನಿರ್ವಹಣೆಯ ನೇತೃತ್ವ ವಹಿಸಿದ್ದಾರೆ. ಸಣ್ಣ ನೀರಾವರಿ ಇಲಾಖೆಯ ಒಂದಿಷ್ಟು ಅನುದಾನವನ್ನು ಹೊರತುಪಡಿಸಿ ಮಿಕ್ಕುಳಿದೆಲ್ಲವನ್ನೂ ತಾನೇ ಭರಿಸಿ ಜಲ ಸಂರಕ್ಷಣೆಯ ಔದಾರ್ಯ ತೋರಿದ್ದಾರೆ. ಈ ಹಿಂದೆ ನದೀ ತೀರದ ಪಂಪ್‌ ಸೆಟ್‌ ಹೊಂದಿರುವ ಕೃಷಿಕರು ಸುಧಾಕರನ ಈ ಕಳಕಳಿಗೆ ನೆರವು ನೀಡುತ್ತಿದ್ದರೆ ಬಳಿಕದ ಒಂದು ವರ್ಷ ಕಿನ್ನಿಗೋಳಿ ರೋಟರಿ ಬ್ಯಾಂಕೊಂದರ ಸಹಯೋಗದಲ್ಲಿ ಆರ್ಥಿಕ ನೆರವು ನೀಡಿತ್ತು. ನಂತರ ಸುಧಾಕರ್‌ ಅವರೇ ಭರಿಸುತ್ತಿದ್ದಾರೆ. ಅಣೆಕಟ್ಟು ನಿರ್ವಹಣೆಗೆ ವರ್ಷಕ್ಕೆ ಸುಮಾರು ಒಂದು ಲಕ್ಷ ರೂ.ನಷ್ಟು ವೆಚ್ಚವಾಗಲಿದ್ದು ಇಲಾಖೆ ನೀಡುವ ಅನುದಾನ ಏನೇನೂ ಸಾಲದು ಎನ್ನುತ್ತಾರೆ ಸುಧಾಕರ್‌.

ನದಿ ತೀರದ ಕೃಷಿಕರು ನೆರವು ನೀಡಲಿ
ಸಾವಿರಾರು ಎಕರೆಗಟ್ಟಲೆ ಕೃಷಿ ಭೂಮಿಗೆ ನೆರವಾಗುವುದರ ಜತೆಗೆ ನೂರಾರು ಮನೆಗಳ ಬಾವಿಗಳ ನೀರಿನ ಒರತೆ ಹೆಚ್ಚಳಕ್ಕೂ ನೆರವಾಗುವ ಈ ಆಣೆಕಟ್ಟಿನ ನದಿ ತೀರದ ಪಂಪ್‌ ಸೆಟ್‌ ಹೊಂದಿರುವ ಕೃಷಿಕರು ಶಾಂಭವಿ ಅಣೆಕಟ್ಟು ನಿರ್ವಹಣೆಗೆ ನೆರವಾಗಬೇಕೆಂದು ಏಳಿಂಜೆಯ ಪ್ರಗತಿಪರ ಕೃಷಿಕ ಪ್ರಕಾಶ್‌ ಶೆಟ್ಟಿ ನಂದನಮನೆ ತಿಳಿಸಿದ್ದಾರೆ. ಅಣೆಕಟ್ಟಿನ ನಿರ್ವಹಣೆಗೆ ಮುಂಡ್ಕೂರು ಹಾಗೂ ಐಕಳ ಪಂಚಾಯತ್‌ಗಳು ಸ್ಪಂದಿಸಬೇಕಾಗಿದೆ.

ನಿರ್ವಹಣೆಗೆ ಅನುದಾನದ ಅಗತ್ಯ
ಶಾಂಭವಿ ಅಣೆಕಟ್ಟು ನಿರ್ವಹಣೆಗೆ ಅನುದಾನದ ಅಗತ್ಯ ಇದೆ. ನದಿ ತೀರದ ಕೃಷಿಕರೂ ಸ್ಪಂದಿಸಬೇಕಾಗಿದೆ.
– ಸುಧಾಕರ ಸಾಲ್ಯಾನ್‌, ಸಂಕಲಕರಿಯ

Advertisement

Udayavani is now on Telegram. Click here to join our channel and stay updated with the latest news.

Next