Advertisement

Padubidri: ಪಲಿಮಾರು ಉಪ್ಪು ನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ!

01:45 PM Dec 24, 2024 | Team Udayavani |

ಪಡುಬಿದ್ರಿ: ಪಲಿಮಾರಿನಲ್ಲಿ ಸಣ್ಣ ನೀರಾವರಿ ಇಲಾಖೆ ಮೂಲಕ 6.5 ಕೋಟಿ ರೂ. ವೆಚ್ಚದಲ್ಲಿ ಶಾಂಭವಿ ನದಿಗೆ ಅಡ್ಡಲಾಗಿ ಕಟ್ಟಲಾದ ಉಪ್ಪುನೀರು ತಡೆ ಅಣೆಕಟ್ಟು ನಾಲ್ಕೇ ವರ್ಷದಲ್ಲಿ ಜೀರ್ಣಾವಸ್ಥೆಗೆ ತಲುಪಿದಂತಿದೆ. ಕಳಪೆ ಕಾಮಗಾರಿಯಿಂದಾಗಿ ಈ ಸ್ಥಿತಿ ನಿರ್ಮಾಣಗೊಂಡಿದೆ ಎಂಬ ಆರೋಪಗಳು ಕೇಳಿಬರುತ್ತಿವೆ.

Advertisement

ಸುಮಾರು 600 ಎಕರೆ ಪ್ರದೇಶಕ್ಕೆ ನೀರೊದಗಿಸಲು 25 ವರ್ಷಗಳ ಹಿಂದೆ ಈ ಪ್ರದೇಶದಲ್ಲಿ ನಿರ್ಮಿಸಿದ್ದ ಅಣೆಕಟ್ಟು ಕಾಮಗಾರಿ ದೋಷದಿಂದಾಗಿ ಹಲವಾರು ಬಾರಿ ದುರಸ್ತಿಗೆ ಒಳಗಾಗಿತ್ತು. ಸ್ಥಳೀಯರ ಬೇಡಿಕೆ ಹಿನ್ನೆಲೆಯಲ್ಲಿ ನಾಲ್ಕು ವರ್ಷಗಳ ಹಿಂದೆ ಹೊಸ ಅಣೆಕಟ್ಟು ನಿರ್ಮಿಸಲಾಗಿತ್ತು.

ಸಣ್ಣ ನೀರಾವರಿ ಮತ್ತು ಅಂತರ್ಜಲ ಅಭಿವೃದ್ಧಿ ಇಲಾಖೆಯ ಪಶ್ಚಿಮ ವಾಹಿನಿ ಯೋಜನೆಯಲ್ಲಿ ಬೆಳಗಾವಿಯ ಜಯಶೀಲಾ ನಾರಾಯಣ ಶೆಟ್ಟಿ ಗುತ್ತಿಗೆ ವಹಿಸಿಕೊಂಡಿದ್ದರು. 2019ರಲ್ಲಿ ಆರಂಭಗೊಂಡಿರುವ ಕಾಮಗಾರಿ 2020ರ ಜೂನ್‌ನಲ್ಲಿ ಪೂರ್ಣಗೊಂಡಿತ್ತು. ಅಣೆಕಟ್ಟನ್ನೂ ಹಿಂದಿನ ಅಣೆಕಟ್ಟೆಯಷ್ಟೇ ಅಂದರೆ 7.5 ಮೀಟರ್‌ವರೆಗೆ ಎತ್ತರಿಸಲಾಗಿತ್ತು. ಅಣೆಕಟ್ಟಿನ ನಾಲ್ಕೂ ಕಡೆ 100 ಮೀಟರ್‌ ವ್ಯಾಪ್ತಿಯಲ್ಲಿ ನದಿಗೆ ತಡೆಗೋಡೆ ನಿರ್ಮಾಣ ಮಾಡಲಾಗಿದ್ದು, ಮೂವತ್ತಕ್ಕಿಂತ ಹೆಚ್ಚಿನ ಕಿಂಡಿಗಳನ್ನೂ ನಿರ್ಮಿಸಲಾಗಿತ್ತು.

ಆದರೆ ಇದೀಗ ಈ ಕಾಮಗಾರಿ ಎರಡೂ ಕಡೆಯ ಕಬ್ಬಿಣದ ಗೇಟ್‌ವಾಲ್‌ಗ‌ಳು ಮತ್ತು ಗೇಟ್‌ವಾಲ್‌ ತಳಪಾಯ ತುಕ್ಕು ಹಿಡಿದಿದ್ದು, ಕಿತ್ತು ಹೋಗುವ ಸ್ಥಿತಿಯಲ್ಲಿದೆ. ಇದರಿಂದ ಅಣೆಕಟ್ಟುವಿನ ನೀರು ಹೊರ ಬಿಡಲು ಸಮಸ್ಯೆಯಾಗುತ್ತಿದೆ.

ಈ ಬಗ್ಗೆ ಸ್ಥಳೀಯ ಕೃಷಿಕರು ಅಸಮಾಧಾನ ವ್ಯಕ್ತಪಡಿಸಿದ್ದು, ನಿರ್ಮಾಣಗೊಂಡ ನಾಲ್ಕು ವರ್ಷದಲ್ಲಿಯೇ ಗೇಟ್‌ವಾಲ್‌ಗ‌ಳು ತುಕ್ಕು ಹಿಡಿದು ಕಿತ್ತು ಹೋಗುವ ಸ್ಥಿತಿಯಲ್ಲಿದೆ. ಈ ಕಳಪೆ ಕಾಮಗಾರಿ ನಡೆಸಿದವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.

Advertisement

ಹಿಂದೆ ಇದ್ದದ್ದೇ ಚೆನ್ನಾಗಿತ್ತು
ಈ ಹಿಂದೆ ಇದ್ದ ಅಣೆಕಟ್ಟು ಉತ್ತಮ ಸ್ಥಿತಿಯಲ್ಲಿತ್ತು. ಅದನ್ನು ದುರಸ್ತಿ ಮಾಡುವ ಬದಲು ಹೊಸ ಅಣೆಕಟ್ಟು ನಿರ್ಮಾಣವಾಗಿದೆ. ಹೊಸ ಅಣೆಕಟ್ಟಿನ ಕಬ್ಬಿಣದ ಗೇಟ್‌ವಾಲ್‌ಗ‌ಳು ಕಿತ್ತು ಹೋಗಿವೆ. ಕೆಲವು ಕಿಡಿಗೇಡಿಗಳು ಇಲ್ಲಿ ಬಂದು ಸಮಸ್ಯೆ ಮಾಡುತ್ತಿದ್ದಾರೆ. ಇದಕ್ಕಾಗಿ ಇಲ್ಲಿ ಪ್ರತಿನಿತ್ಯ ಕಾವಲುಗಾರ ನೇಮಕವಾಗಬೇಕು ಎನ್ನುತ್ತಾರೆ ಸ್ಥಳೀಯ ಕೃಷಿಕ ಹರಿಯಪ್ಪ.

ನದಿದಂಡೆಗಳೂ ನೀರುಪಾಲು
ಗೇಟ್‌ಗಳು ತುಕ್ಕು ಹಿಡಿದು ಕಿತ್ತು ಹೋಗುವುದರ ಜತೆಗೆ ಹೊಸದಾಗಿ ನಿರ್ಮಿಸಿದ ನದಿ ದಂಡೆಗಳು ನದಿ ಪಾಲಾಗುತ್ತಿವೆ. ಕಾಮಗಾರಿ ಸಂಪೂರ್ಣ ಕಳಪೆಯಾಗಿದೆ. ಇದರಿಂದ ಸ್ಥಳೀಯ ಕೃಷಿಕರಿಗೆ ಸಮಸ್ಯೆಯಾಗುತ್ತದೆ ಎನ್ನುವುದು ಮಾಜಿ ತಾ. ಪಂ. ಸದಸ್ಯ ದಿನೇಶ್‌ ಪಲಿಮಾರು ಅವರ ಆಕ್ರೋಶ.

ಬ್ರಿಟಿಷರ ಕಾಲದ್ದೂ ಚೆನ್ನಾಗಿತ್ತು
ವೈಜ್ಞಾನಿಕವಾಗಿ ಬ್ರಿಟಿಷರ ಕಾಲದಲ್ಲಿ ನಿರ್ಮಾಣಗೊಂಡು ಸುಸ್ಥಿತಿಯಲ್ಲಿದ್ದ ಪಲಿಮಾರು ಗ್ರಾಮದ ಕೃಷಿ ಸಹಾಯಕಾಗಿದ್ದ ಅಣೆಕಟ್ಟನ್ನು ಕೆಡವಿ ಅವೈಜ್ಞಾನಿಕವಾಗಿ ಹೊಸತನ್ನು ನಿರ್ಮಿಸಲಾಗಿದೆ. ಅದರ ಗೇಟ್‌ಗಳು ಆಗಲೇ ಕಿತ್ತುಹೋಗಿದೆ. ಈ ಅಣೆಕಟ್ಟನ್ನು ಅವರಾಲು ಮಟ್ಟುವಿನಲ್ಲಿ ನಿರ್ಮಿಸಿದ್ದಲ್ಲಿ ಸುತ್ತಮುತ್ತಲ ಗ್ರಾಮಗಳಿಗೆ ಬಹುಗ್ರಾಮ ಕುಡಿಯುವ ನೀರಿನ ಯೋಜನೆಗೆ ಸೂಕ್ತವಾಗಿತ್ತು, ಆದರೆ ಸಣ್ಣ ನೀರಾವರಿ ಇಲಾಖೆಯು ಸ್ಥಳೀಯರನ್ನು ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂದು ಗ್ರಾ. ಪಂ. ಉಪಾಧ್ಯಕ್ಷ ರಾಯೇಶ್ವರ ಪೈ ಬೇಸರ ವ್ಯಕ್ತಪಡಿಸಿದ್ದಾರೆ.

ಗುತ್ತಿಗೆದಾರರಿಗೆ ನೋಟಿಸು
ಪಲಿಮಾರು ಅಣೆಕಟ್ಟು ಪ್ರದೇಶಕ್ಕೆ ಭೇಟಿ ನೀಡಿದ್ದೇನೆ. ಅಲ್ಲಿನ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗುತ್ತಿಗೆದಾರರಿಗೆ ಕೂಡಲೇ ನೋಟೀಸು ನೀಡಲಿದ್ದೇವೆ. ಕೂಡಲೇ ಗೇಟ್‌ವಾಲ್‌ಗ‌ಳನ್ನು ಸರಿಪಡಿಸಲಾಗುವುದು. ಮುಂದಿನ ಮೇ ವೇಳೆಗೆ ಎಲ್ಲವೂ ಪೂರ್ಣಗೊಳ್ಳಲಿದೆ.
-ಸಣ್ಣ ನೀರಾವರಿ ಇಲಾಖಾ ಸಹಾಯಕ ಎಂಜಿನಿಯರ್‌

-ಆರಾಮ

Advertisement

Udayavani is now on Telegram. Click here to join our channel and stay updated with the latest news.

Next