ಬೆಂಗಳೂರು: ನಗರದ ಎಲೆಕ್ಟ್ರಾನಿಕ್ ಸಿಟಿ ಬಳಿಯ ಸಿಂಗಸಂದ್ರದಲ್ಲಿ ಕಾಣಿಸಿಕೊಂಡಿರುವ ಚಿರತೆಯನ್ನು ಸೆರೆ ಹಿಡಿಯಲು ಅರಣ್ಯಾಧಿಕಾರಿಗಳ ಮೂರು ತಂಡಗಳು ಬೀಡುಬಿಟ್ಟಿವೆ ಎಂದು ಅಧಿಕಾರಿಗಳು ಸೋಮವಾರ ತಿಳಿಸಿದ್ದಾರೆ.
ಸಿಂಗಸಂದ್ರ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಟ್ರಾಂಕ್ವಿಲೈಸರ್ ಗನ್‌ಗಳೊಂದಿಗೆ ಅರಣ್ಯ ಇಲಾಖೆಯ ಸುಮಾರು 30 ಮಂದಿಯನ್ನು ನಿಯೋಜಿಸಲಾಗಿದೆ.
“ನಮ್ಮ ತಂಡಗಳು ಈಗಾಗಲೇ ಪ್ರದೇಶದಲ್ಲಿ ಬೀಡುಬಿಟ್ಟಿದೆ. ಈಗಾಗಲೇ ಪಂಜರಗಳನ್ನು ಇರಿಸಲಾಗಿದೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಮತ್ತು ಕರ್ನಾಟಕದ ಮುಖ್ಯ ವನ್ಯಜೀವಿ ವಾರ್ಡನ್ ಸುಭಾಷ್ ಕೆ ಮಾಳಖೇಡೆ ಅವರು ಪಿಟಿಐಗೆ ತಿಳಿಸಿದ್ದಾರೆ.
ಬನ್ನೇರುಘಟ್ಟ ಮೃಗಾಲಯದ ವೈದ್ಯರಿಗೆ ಔಷಧಿಗಳೊಂದಿಗೆ ಸಿದ್ದವಿರುವಂತೆ ಹೇಳಿದ್ದೇವೆ ಮತ್ತು ಮುನ್ನೆಚ್ಚರಿಕೆ ಕ್ರಮವಾಗಿ ನಮ್ಮ ಅಧಿಕಾರಿಗಳನ್ನು ಟ್ರಾಂಕ್ವಿಲೈಸರ್ ಗನ್‌ಗಳೊಂದಿಗೆ ಸ್ಥಳದಲ್ಲಿ ನಿಯೋಜಿಸಲಾಗಿದೆ. ನಾವು ಚಿರತೆಯನ್ನು ಗುರುತಿಸಿದ ತತ್ ಕ್ಷಣ ಹಿಡಿದು ತೆಗೆದುಕೊಂಡು ಹೋಗುತ್ತೇವೆ ”ಎಂದು ತಿಳಿಸಿದ್ದಾರೆ.
ವೈಟ್‌ಫೀಲ್ಡ್ ಬಳಿ ಚಿರತೆ ಕಾಣಿಸಿಕೊಂಡಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಿಸಿಎಫ್ ಎಸ್.ಎಸ್. ಲಿಂಗರಾಜ ಅವರು ಈ ವಿಡಿಯೋ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನಕ್ಕೆ ಸಮೀಪವಿರುವ ಸಿಂಗಸಂದ್ರದಲ್ಲಿ ಸೆರೆಯಾಗಿದ್ದು ವೈಟ್‌ಫೀಲ್ಡ್ ನಲ್ಲಿ ಅಲ್ಲ ಎಂದು ಹೇಳಿದ್ದಾರೆ.
“ಚಿರತೆ ಮೊದಲು ಅಪಾರ್ಟ್‌ಮೆಂಟ್ ಆವರಣದಲ್ಲಿ ಕಾಣಿಸಿಕೊಂಡಿತ್ತು. ನಂತರ, ಅದು ರಸ್ತೆಯಲ್ಲೂ ಕಾಣಿಸಿಕೊಂಡಿತು. ನಮ್ಮ ಸಿಬಂದಿ ಚಿರತೆ ಪತ್ತೆಗೆ ಪ್ರಯತ್ನಿಸುತ್ತಿದ್ದಾರೆ. ನಾವು ತೀವ್ರ ನಿಗಾ ಇರಿಸಿದ್ದೇವೆ. ನಾವು ನಿಗಾ ಇಡುತ್ತಿದ್ದೇವೆ. ನಾವು ಈಗಾಗಲೇ ಸಿಂಗಸಂದ್ರದ ಬಳಿ ಬೋನುಗಳನ್ನು ಇರಿಸಿದ್ದು, ನಮ್ಮ ತಂಡಗಳು ಚಿರತೆ ಪತ್ತೆಗೆ ಪ್ರಯತ್ನಿಸುತ್ತಿವೆ ಎಂದು ಹೇಳಿದ್ದಾರೆ.
ಹಲವು ಪ್ರಮುಖ ಐಟಿ, ಬಿಟಿ ಸಂಸ್ಥೆಗಳು ಸಿಂಗಸಂದ್ರದ ಸುತ್ತಮುತ್ತಲಿನ ಪ್ರದೇಶಗಳಲ್ಲಿವೆ.