ಬೆಂಗಳೂರು: ಪಾರ್ಟಿ ಮುಗಿಸಿಕೊಂಡು ಸ್ನೇಹಿತನ ಜತೆ ಡಬಲ್ ಡೆಕ್ಕರ್ ಮೇಲು ಸೇತುವೆ ಮೇಲೆ ಬುಲೆಟ್ನಲ್ಲಿ ಹೋಗುವಾಗ ಕ್ಯಾಬ್ಗ ಡಿಕ್ಕಿ ಹೊಡೆದ ಪರಿಣಾಮ ಟೆಕಿಯೊಬ್ಬ ಮೃತಪಟ್ಟಿರುವ ಘಟನೆ ಮಡಿವಾಳ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
ಜೆ.ಪಿ.ನಗರ ನಿವಾಸಿ ಶ್ರೀನಿವಾಸರಾಜು (27) ಮೃತರು. ಘಟನೆಯಲ್ಲಿ ಈತನ ಸ್ನೇಹಿತ ವಿಜಯದಾಸ ರೆಡ್ಡಿ (27) ಎಂಬಾತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬುಧವಾರ ನಸುಕಿನ 1.40ರ ಸುಮಾರಿಗೆ ದುರ್ಘಟನೆ ನಡೆದಿದೆ ಎಂದು ಸಂಚಾರ ಪೊಲೀಸರು ಹೇಳಿದರು.
ಆಂಧ್ರಪ್ರದೇಶ ಮೂಲದ ಶ್ರೀನಿವಾಸರಾಜು ಮತ್ತು ವಿಜಯದಾಸ ರೆಡ್ಡಿ ಕೆಲ ವರ್ಷಗಳಿಂದ ಜೆ.ಪಿ.ನಗರದಲ್ಲಿ ವಾಸವಾಗಿದ್ದು, ನಗರದ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಕ್ರಿಸ್ಮಸ್ ರಜೆ ಹಿನ್ನೆಲೆಯಲ್ಲಿ ಸ್ನೇಹಿತರ ಜತೆ ಪಾರ್ಟಿ ಮಾಡಿದ್ದ ಇಬ್ಬರು, ನಸುಕಿನ 1.40ರ ಸುಮಾರಿಗೆ ಬುಲೆಟ್ನಲ್ಲಿ ಎಚ್ಎಸ್ಆರ್ ಲೇಔಟ್ನಿಂದ ರಾಗಿಗುಡ್ಡದ ಕಡೆಗೆ ಹೋಗಲು ಹೊಸದಾಗಿ ನಿರ್ಮಿಸಿರುವ ಡಬಲ್ ಡೆಕ್ಕರ್ ಮೇಲು ಸೇತುವೆಯ ಏಕಮುಖ ರಸ್ತೆಯಲ್ಲಿ ಹೋಗುತ್ತಿದ್ದರು. ಈ ವೇಳೆ ಎದುರು ಬರುತ್ತಿದ್ದ ಕ್ಯಾಬ್ಗ ಬುಲೆಟ್ ಡಿಕ್ಕಿಯಾಗಿದ್ದು, ಇಬ್ಬರು ಕೆಳಗೆ ಬಿದ್ದಿದ್ದಾರೆ.
ಪರಿಣಾಮ ಇಬ್ಬರಿಗೂ ತಲೆಗೆ ಗಾಯವಾಗಿತ್ತು. ಕೂಡಲೇ ಸಮೀಪದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಶ್ರೀನಿವಾಸರಾಜು ಬೆಳಗ್ಗೆ 5 ಗಂಟೆ ಸುಮಾರಿಗೆ ಮೃತಪಟ್ಟಿದ್ದಾರೆ. ವಿಜಯದಾಸ ರೆಡ್ಡಿಗೆ ಚಿಕಿತ್ಸೆ ಮುಂದುವರಿದಿದೆ.
ಹೆಲ್ಮೆಟ್ ಧರಿಸದೆ ಬುಲೆಟ್ನಲ್ಲಿ ಸಂಚಾರ:
ಬುಲೆಟ್ ಚಾಲನೆ ವೇಳೆ ಶ್ರೀನಿವಾಸ, ವಿಜಯದಾಸ ಇಬ್ಬರು ಹೆಲ್ಮೆಟ್ ಧರಿಸಿಲ್ಲ ಎಂಬುದು ಗೊತ್ತಾಗಿದೆ. ಜತೆಗೆ ಏಕಮುಖ ಸಂಚಾರ ರಸ್ತೆಯಲ್ಲಿ ಬಂದ ಆರೋಪದ ಮೇಲೆ ಬುಲೆಟ್ ಚಾಲನೆ ಮಾಡುತ್ತಿದ್ದ ವಿಜಯದಾಸ ವಿರುದ್ಧ ಕೇಸ್ ದಾಖಲಾಗಿದೆ.