Advertisement
ಹೊಸ ವರ್ಷಾಚರಣೆಯ ಬಂದೋಬಸ್ತ್ ಗೆ ಒಟ್ಟು 11,830 ಪೊಲೀಸರನ್ನು ನಿಯೋಜಿಸಲಾಗಿದೆ. ತಡರಾತ್ರಿ 1 ಗಂಟೆಯವರೆಗೆ ಹೊಸ ವರ್ಷಾಚರಣೆಗೆ ಅವಕಾಶ ಕಲ್ಪಿಸಲಾಗಿದೆ. ನಿಯಮ ಉಲ್ಲಂಘಿಸಿದವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ನಗರ ಪೊಲೀಸ್ ಆಯುಕ್ತ ಬಿ.ದಯಾನಂದ್ ಎಚ್ಚರಿಕೆ ನೀಡಿದ್ದಾರೆ.
Related Articles
Advertisement
ಮಹಿಳೆಯರ ಸುರಕ್ಷತೆಗೆ ಆದ್ಯತೆ: ಮಹಿಳೆಯರ ಸುರಕ್ಷತೆ ಗಾಗಿ ಪ್ರಮುಖ ಸ್ಥಳಗಳಲ್ಲಿ ಮಹಿಳಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳಿರುವ ಮಹಿಳಾ ಸುರಕ್ಷತಾ ಸ್ಥಳಗಳನ್ನು ತೆರೆಯಲಾಗಿದೆ. ಮಹಿಳೆಯರು ಇದರ ಸದುಪಯೋಗ ಪಡಿಸಿಕೊಳ್ಳಬಹುದಾಗಿದೆ. ಆಯಕಟ್ಟಿನ ಪ್ರದೇಶಗಳಲ್ಲಿ ಪೊಲೀಸ್ ಕಿಯೋಸ್ಕ್ ಗಳನ್ನು ತೆರದಿದ್ದು, ಮಕ್ಕಳು ಕಾಣೆಯಾದಲ್ಲಿ, ಯಾವುದೇ ರೀತಿಯ ಕಳುವಿನ ದೂರುಗಳಿಗೆ ಅಥವಾ ಯಾವುದೇ ತುರ್ತು ಸಂದರ್ಭಗಳಲ್ಲಿ ಅವಶ್ಯಕ ಸೇವೆಯನ್ನು ಪಡೆಯಬಹುದಾಗಿದೆ. ಹೆಚ್ಚು ಜನಸಂದಣಿ ಸೇರುವ ಸ್ಥಳಗಳಲ್ಲಿ ಸೂಕ್ತ ಕಣ್ಗಾವಲು ಏರ್ಪಡಿಸಲು ಸಿಬ್ಬಂದಿಗೆ ವೀಕ್ಷಣಾ ಗೋಪುರಗಳನ್ನು ನಿರ್ಮಿಸಿದ್ದು, ವೀಕ್ಷಣಾ ಗೋಪುರಗಳಲ್ಲಿ ಕರ್ತವ್ಯಕ್ಕೆ ನೇಮಕ ಮಾಡಲಾಗುವ ಸಿಬ್ಬಂದಿಗಳಿಗೆ ಬೈನಾಕುಲರ್ ಉಪಕರಣ ಒದಗಿಸಲಾಗುವುದು ಎಂದು ತಿಳಿಸಿದರು.
ಎಚ್ಚರ ವಹಿಸಿ: ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮೋದಿಸಲ್ಪಟ್ಟ ಅಧಿಕೃತ ಸ್ಥಳಗಳಲ್ಲಿ ವರ್ಷಾಚರಣೆ ಆಚರಿಸಿ. ತುರ್ತು ಸಂದರ್ಭಗಳಲ್ಲಿ 112 ಅಥವಾ ಸಮೀಪದ ಪೊಲೀಸ್ ಠಾಣೆಯನ್ನು/ಪೊಲೀಸ್ ಕಿಯೋಸ್ಕ್ ಅನ್ನು ಸಂಪರ್ಕಿಸುವುದು. ವರ್ಷಾಚರಣೆ ಯನ್ನು ಆಚರಿಸುವ ಸಾರ್ವಜನಿಕ ಸ್ಥಳಗಳಲ್ಲಿ ಮಹಿಳೆಯರು ಮತ್ತು ಮಕ್ಕಳು ಬೆಲೆಬಾಳುವ ಆಭರಣಗಳನ್ನು ಧರಿಸದೇ ಇರುವುದು ಒಳಿತು. ಅಲ್ಲದೇ ಮೊಬೈಲ್ ಪೋನ್ ಮತ್ತು ಹಣವನ್ನು ಸುರಕ್ಷಿತವಾಗಿ ಇಟ್ಟುಕೊಳ್ಳಿ. ಇತರೆ ಧರ್ಮದವರಿಗೆ ಘಾಸಿಯಾಗದಂತೆ ವರ್ಷಚರಣೆಯನ್ನು ಆಚರಿಸಿ. ಆಟೋ ಮತ್ತು ಕ್ಯಾಬ್‌ಗಳಲ್ಲಿ ಪ್ರಯಾಣಿಸುವಾಗ ಅಧಿಕೃತವೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.
ಪರಿಸರ ಮಾಲಿನ್ಯ ತಡೆಯಿರಿ: ಮದ್ಯಪಾನ ಮತ್ತು ಮಾದಕ ವಸ್ತುಗಳನ್ನು ಸೇವಿಸಿ ವಾಹನ ಚಾಲನೆ ಮಾಡಬೇಡಿ. ಪಟಾಕಿಗಳನ್ನು ಸಿಡಿಸಬಾರದು. ಪರಿಸರ ಮಾಲಿನ್ಯ ಉಂಟಾಗುವುದನ್ನು ತಪ್ಪಿಸಿ. ಪೊಲೀಸರು ಮತ್ತು ಸ್ಥಳೀಯ ಆಡಳಿತದಿಂದ ಅನುಮತಿ ಪಡೆಯದೇ ಯಾವುದೇ ಸಮಾರಂಭಗಳನ್ನು ಆಯೋಜಿಸುವಂತಿಲ್ಲ. ತಮಾಷೆ ಮತ್ತು ಮೋಜಿಗಾಗಿ ತುರ್ತು ಕರೆಗಳಿಗೆ ಸಂಪರ್ಕಿಸುವ ಕೆಲಸದಲ್ಲಿ ತೊಡಗಿಸಿಕೊಳ್ಳಬೇಡಿ. ಸಾರ್ವಜನಿಕ ಸ್ಥಳಗಳಲ್ಲಿ ಮದ್ಯಪಾನ ಮತ್ತು ದೂಮಪಾನವನ್ನು ಮಾಡುವುದು ಕಾನೂನು ಬಾಹಿರವಾಗಿರುತ್ತದೆ.
ರಾತ್ರಿ 10ರ ಬಳಿಕ ಎಲ್ಲಾ ಫ್ಲೈಓವರ್‌ಗಳ ಮೇಲೆ ಸಂಚಾರ ನಿರ್ಬಂಧ
ಸುರಕ್ಷತೆ ದೃಷ್ಟಿಯಿಂದ ಡಿ.31ರಂದು ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯವರೆಗೆ ನಗರದ ಎಲ್ಲ ಮೇಲುಸೇತುವೆಗಳಲ್ಲಿ ವಾಹನ ಸಂಚಾರ ನಿರ್ಬಂಧಿಸಲಾಗಿದೆ. ಪ್ರಮುಖ ಸ್ಥಳಗಳಲ್ಲಿ ಹೆಚ್ಚುವರಿಯಾಗಿ ಸಿಸಿ ಕ್ಯಾಮರಾ, ಡ್ರೋನ್ ಕ್ಯಾಮೆರಾ ಕಾರ್ಯಾಚರಣೆಗೊಳಿಸಲಾಗಿದೆ. ನಗರದ ಪ್ರಮುಖ ಸ್ಥಳಗಳನ್ನು ಶ್ವಾನದಳ ಮತ್ತು 16 ಎ.ಎಸ್.ಚೆಕ್ ತಂಡಗಳಿಂದ ತಪಾಸಣೆ ಕೈಗೊಳ್ಳಲಾಗುತ್ತದೆ ಎಂದು ಕಮಿಷನರ್ ತಿಳಿಸಿದರು.
ಮಫ್ತಿಯಲ್ಲಿ 600 ಪೊಲೀಸ್ ನಿಯೋಜನೆ
ಸಿಸಿ ಕ್ಯಾಮೆರಾ-817, ವಾಚ್‌ಟವರ್-63, ಮಹಿಳೆಯರ ಸುರಕ್ಷತಾ ಸ್ಥಳ-114, ಕಿಯೋಸ್ಕ್ -48 ಹಾಗೂ 54 ಹೆಲ್ತ್ ಸೆಂಟರ್ ಕಲ್ಪಿಸಲಾಗಿದೆ. ಹೆಚ್ಚುವರಿ ಪೊಲೀಸ್ ಆಯುಕ್ತ-2, ಡಿಸಿಪಿ-15, ಎಸಿಪಿ-44, ಪೊಲೀಸ್ ಇನ್‌ಸ್ಪೆಕ್ಟರ್ 135, ಪಿಎಸ್‌ಐ-530, ಎಎಸ್‌ಐ 655, ಹೆಡ್‌ಕಾನ್ ಸ್ಟೇಬಲ್-4,833, ಹೆಚ್ಚುವರಿ ಸಿಬ್ಬಂದಿ 1,048, ಮಫ್ತಿ ಸಿಬ್ಬಂದಿ 597, ಹೋಮ್‌ಗಾರ್ಡ್ಸ್ 3,170, ಸಿವಿಲ್ ಡಿಫೆನ್ಸ್-800 ಸೇರಿ ಒಟ್ಟು 11,830 ಪೊಲೀಸರನ್ನು ನಿಯೋಜಿಸಲಾಗಿದೆ. ಇದಲ್ಲದೇ ಡಿ.31ರ ರಾತ್ರಿ 72 ಕೆಎಸ್‌ಆರ್‌ಪಿ, 21 ಸಿಎಆರ್ ತುಕಡಿ ಹಾಗೂ ಜ.1ರಂದು ಬೆಳಗ್ಗೆ 17 ಕೆಎಸ್‌ಆರ್‌ಪಿ ನಿಯೋಜಿಸಲಾಗಿದೆ.
ಬ್ರಿಗೇಡ್ ರಸೆಯಲ್ಲಿ ವಾಹನ ಸಂಚಾರ ನಿರ್ಬಂಧ, ಏಕಮುಖ ನಡಿಗೆ ಅವಕಾಶ
ಡಿ.31ರಂದು ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿರ್ಬಂಧಿಸಿ, ಸಾರ್ವಜನಿಕರಿಗೆ ನಡಿಗೆಯ ಮೂಲಕ ಏಕ ಮುಖ ಪ್ರವೇಶಕ್ಕೆ ಮಾತ್ರ ಅವಕಾಶ ಮಾಡಿದ್ದು, ಎಂ.ಜಿ ರಸ್ತೆಗೆ ಪ್ರವೇಶಿಸುವವರಿಗೆ ಅನಿಲ್ ಕುಂಬ್ಳೆ ಸರ್ಕಲ್‌ನಿಂದ ಹಾಗೂ ಮೆಯೋ ಹಾಲ್ ಜಂಕ್ಷನ್ ಮೂಲಕ ಎಂ.ಜಿ.ರಸ್ತೆ ಪ್ರವೇಶಿಸಬಹುದಾಗಿದೆ. ನಂತರ ಬ್ರಿಗೇಡ್ ರಸ್ತೆ ಜಂಕ್ಷನ್ ಮೂಲಕ ಬ್ರಿಗೇಡ್ ರಸ್ತೆಗೆ ಪ್ರವೇಶಿಸಿ ಏಕಮುಖವಾಗಿ ಚಲಿಸಿ ಒಪೇರಾ ಜಂಕ್ಷನ್ ನಲ್ಲಿ ಹೊರ ಹೋಗಲು ಅವಕಾಶ ಮಾಡಲಾಗಿದೆ. ಡಿ.31ರಂದು ರಾತ್ರಿ ಬ್ರಿಗೇಡ್ ರಸ್ತೆಯಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಇದಕ್ಕೆ ಪರ್ಯಾಯ ವ್ಯವಸ್ಥೆ ಕಲ್ಪಿಸಲಾಗಿದೆ. ಇಂದಿರಾನಗರ, ಮಹದೇವಪುರದ ಕೆಲವು ರಸ್ತೆಗಳಲ್ಲಿ ಅಂದು ವಾಹನ ನಿಲುಗಡೆ ನಿರ್ಬಂಧಿಸಲಾಗಿದೆ. ಕೋರಮಂಗಲದ ಕೆಲ ರಸ್ತೆಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದೆ. ಮಾಲ್‌ಆಫ್ ಏಷಿಯಾ, ಓರೆಯನ್ ಮಾಲ್ ಪಕ್ಕ ವಾಹನ ನಿಲುಗಡೆ ನಿಷೇಧಿಸಲಾಗಿದೆ.