ಬಂಟ್ವಾಳ: ಬಿ.ಸಿ.ರೋಡಿನ ಪರ್ಲಿಯಾ ಬಳಿಯ ಮದ್ದದಲ್ಲಿ ಡಿ. 11ರ ತಡರಾತ್ರಿ 1.30ರ ಸುಮಾರಿಗೆ ಎರಡು ತಂಡಗಳ ಮಧ್ಯೆ ಮಾರಾಮಾರಿ ನಡೆದಿದ್ದು, ಎರಡೂ ತಂಡಗಳು ನೀಡಿದ ದೂರಿನಂತೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ದೂರು ದಾಖಲಾಗಿದೆ.
ಒಂದು ಪ್ರಕರಣಕ್ಕೆ ಸಂಬಂಧಿಸಿ ಮದ್ದ ಮನೆ ನಿವಾಸಿ ಸಾಹುಲ್ ಹಮೀದ್ ದೂರು ನೀಡಿದ್ದು, ತಮ್ಮ ಮನೆಯವರೆಲ್ಲ ಮಲಗಿರುವ ಸಮಯ ಆರೋಪಿಗಳು ಎರಡು ಕಾರಿನಲ್ಲಿ ಕೊಲೆ ಮಾಡುವ ಉದ್ದೇಶದಿಂದ ಮನೆಗೆ ಅಕ್ರಮ ಪ್ರವೇಶಗೈದಿದ್ದಾರೆ.
ಸುಮಾರು 15 ಮಂದಿ ಆರೋಪಿಗಳು ತಮ್ಮ ವಿಚಾರವನ್ನು ಪೊಲೀಸರಿಗೆ ತಿಳಿಸುತ್ತೀಯಾ ಎಂದು ತಗಾದೆ ತೆಗೆದು ಕೊಲೆ ಮಾಡದೆ ಬಿಡುವುದಿಲ್ಲ ಎಂದು ಬೆದರಿಕೆ ಹಾಕಿ ಮಾರಕಾಯುಧಗಳಿಂದ ಹಲ್ಲೆ ನಡೆಸಿದ್ದಲ್ಲದೇ ಪುತ್ರಿಯ ಕುತ್ತಿಗೆಯಲ್ಲಿದ್ದ ಚಿನ್ನದ ಸರವನ್ನು ದೋಚಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಮತ್ತೊಂದು ತಂಡದಿಂದ ತಾಳಿಪಡ್ಪು ನಿವಾಸಿ ಮಹಮ್ಮದ್ ಇರ್ಫಾನ್ ದೂರು ನೀಡಿದ್ದು, ಬಾಡಿಗೆ ಕೊಡುವ ವಿಚಾರಕ್ಕೆ ಸಂಬಂಧಿಸಿ ತಾನು ಸ್ನೇಹಿತರ ಜತೆ ಡಿ. 11ರಂದು ತಡರಾತ್ರಿ 1ಕ್ಕೆ ಪರ್ಲಿಯಾದ ಸಾಹುಲ್ ಅವರ ಮನೆಗೆ ಹೋಗಿ ಹಿಂದಿರುವ ವೇಳೆ ಆರೋಪಿಗಳಾದ ಸಾಹುಲ್ ಮತ್ತಿತರರು ತಮ್ಮ ಕಾರಿಗೆ ಕಲ್ಲು ಬಿಸಾಡಿ ಕಾರಿನ ಗಾಜಿಗೆ ಹಾನಿ ಮಾಡಿದ್ದಾರೆ.
ಈ ವೇಳೆ ಕಾರಿನಿಂದ ಇಳಿದಾಗ ಕೊಲೆ ಬೆದರಿಕೆ ಹಾಕಿ ಹಲ್ಲೆ ನಡೆಸಿದ್ದಲ್ಲದೇ ಕಿಸೆಯಲ್ಲಿದ್ದ 5 ಸಾವಿರ ರೂ. ನಗದು ದೋಚಿದ್ದಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ. ಎರಡೂ ಕಡೆಯ ದೂರನ್ನು ಸ್ವೀಕರಿಸಿ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಘಟನೆಯ ಸತ್ಯಾ ಸತ್ಯತೆಯ ಕುರಿತು ತನಿಖೆ ನಡೆಸು ತ್ತಿದ್ದಾರೆ.