Advertisement

ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಇನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯಾಗಿ ಕಾರ್ಯನಿರ್ವಹಣೆ

02:06 AM Dec 28, 2024 | Team Udayavani |

ಮಂಗಳೂರು: ಮೂರು ವರ್ಷಗಳಿಂದ ಅನುದಾನ ಕಡಿತದ ಸಂಕಷ್ಟ ಎದುರಿಸಿದ್ದ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಈಗ ಕರಾವಳಿ ಅಭಿವೃದ್ಧಿ ಮಂಡಳಿಯಾಗಿ ಮುಂದಿನ ಆರ್ಥಿಕ ವರ್ಷದಿಂದ ಕಾರ್ಯಾಚರಿಸಲಿದ್ದು, ಹೆಚ್ಚಿನ ಅನುದಾನದ ನಿರೀಕ್ಷೆಯಲ್ಲಿದೆ.

Advertisement

ಮಲೆನಾಡು, ಬಯಲು ಸೀಮೆ ಅಭಿವೃದ್ಧಿ ಮಂಡಳಿಯಂತೆಯೇ ಕರಾವಳಿ ಅಭಿವೃದ್ಧಿ ಪ್ರಾಧಿಕಾರ ವನ್ನು ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿ ಆಗಿ ಪುನರ್‌ನಾಮಕರಣ ಗೊಳಿಸುವ ಮಸೂದೆಗೆ ರಾಜ್ಯ ಸಚಿವ ಸಂಪುಟ 2023ರ ಆ.10ರಂದು ಅನುಮೋದನೆ ನೀಡಿತ್ತು.

ಅ ಬಳಿಕ ಅದು ಮಸೂದೆಯಾಗಿ ಅಂಗೀಕರಿಸಿ, ಕಾಯ್ದೆ ಯಾಗಿ ಮಾರ್ಪಟ್ಟಿದ್ದು, ರಾಜ್ಯಪಾಲರ ಅನುಮೋದನೆ ಸಿಕ್ಕು 2024ರ ಜೂನ್‌ನಲ್ಲಿ ಅಧಿಸೂಚನೆ ಹೊರಡಿಸಲಾಗಿತ್ತು. ಈಗ 2025ರ ಎ.1(ಮುಂದಿನ ಆರ್ಥಿಕ ವರ್ಷ)ರಿಂದ ಕಾರ್ಯನಿರ್ವಹಣೆಗೆ ನಿಯಮಾವಳಿ ರೂಪಿಸಲಾಗಿದೆ. ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಇಲಾಖೆಯಲ್ಲಿ ಪರಿಶೀಲಿಸಲಾಗುತ್ತಿದೆ. 2025-26ನೇ ಸಾಲಿನ ಬಜೆಟ್‌ನಲ್ಲಿ ಅನುದಾನ ಸಿಗುವ ಲೆಕ್ಕಾಚಾರ ಇದೆ. ಪ್ರಸ್ತುತ ಸಾಂಖ್ಯೀಕ ಇಲಾಖೆಯ ಸಚಿವರು ಮಂಡಳಿ ಹಾಗೂ ಪ್ರಾಧಿಕಾರಕ್ಕೆ ಅಧ್ಯಕ್ಷರಾಗಿದ್ದು, ಕಾರ್ಯದರ್ಶಿಯನ್ನು ನಿಯೋಜಿತ ಕಾರ್ಯದರ್ಶಿಯನ್ನಾಗಿಸಲಾಗಿದೆ.

ಹಿಂದಿನ ಅನುಭವ ಸಿಹಿಯಾಗಿಲ್ಲ
ಪ್ರಾಧಿಕಾರವಾಗಿ ಕಾರ್ಯ ನಿರ್ವಹಿಸುವಾಗಿನ ಅನುಭವ ಅಷ್ಟೊಂದು ಸಿಹಿಯಾಗಿಲ್ಲ. ಯಾಕೆಂದರೆ 2022-23ನೇ ಸಾಲಿನಲ್ಲಿ 30 ಕೋ.ರೂ.ಅನುದಾನ ನೀಡಲಾಗಿತ್ತು. ಈ ಪೈಕಿ 29.28 ಕೋ.ರೂ. ಕಾಮಗಾರಿ ಕೈಗೊಳ್ಳಲಾಗಿತ್ತು. 2023-24ರಲ್ಲಿ 10.50 ಕೋ.ರೂ.ಗೆ ಇಳಿಸಲಾಗಿದ್ದು, 6.70 ಕೋ.ರೂ. ಮೊತ್ತದಲ್ಲಿ ವಿವಿಧ ಯೋಜನೆಗಳನ್ನು ಜಾರಿಗೊಳಿಸಲಾಗಿತ್ತು. ಈ ಸಾಲಿನಲ್ಲಿ 10.50 ಕೋ.ರೂ.ಅನುದಾನ ನಿಗದಿಪಡಿಸಿ,ಅಕ್ಟೋಬರ್‌ ಅಂತ್ಯದ ವರೆಗೆ 5.25 ಕೋ.ರೂ. ನೀಡಲಾಗಿದೆ. ಇದರಲ್ಲಿ 3.88 ಕೋ.ರೂ. ಮೊತ್ತದ ಯೋಜನೆ ಕೈಗೊಳ್ಳಲಾಗಿದೆ. ಉಳಿದ ಅನುದಾನದ ನಿರೀಕ್ಷೆಯಲ್ಲಿದ್ದಾರೆ ಅಧಿಕಾರಿಗಳು.

ಕಾನೂನಾತ್ಮಕವಾಗಿಯೂ ಬಲ
ಯೋಜನಾ ಇಲಾಖೆಗಳ ವ್ಯಾಪ್ತಿಗೆ ಬರುವ ಮಂಡಳಿಯು, ಬಯಲು ಸೀಮೆ ಪ್ರದೇಶಾಭಿವೃದ್ಧಿ ಮಂಡಳಿ ಮತ್ತು ಮಲೆನಾಡು ಪ್ರದೇಶಾಭಿವೃದ್ಧಿ ಮಂಡಳಿಗಳ ಮಾದರಿಯಲ್ಲಿ ಕಾರ್ಯನಿರ್ವಹಿಸಲಿದೆ. ಕರಾವಳಿಯ ದಕ್ಷಿಣ ಕನ್ನಡ, ಉಡುಪಿ ಮತ್ತು ಉತ್ತರ ಕನ್ನಡ ಜಿಲ್ಲಾ ಕಾರ್ಯವ್ಯಾಪ್ತಿ ಹೊಂದಿದೆ. ಪ್ರಾಧಿಕಾರವನ್ನು ಮಂಡಳಿಯಾಗಿ ರೂಪಿಸಿದರೆ ಕಾನೂನಾತ್ಮಕವಾಗಿಯೂ ಹೆಚ್ಚಿನ ಬಲ ಲಭ್ಯ. ಜತೆಗೆ ಹೆಚ್ಚಿನ ಅನುದಾನವನ್ನೂ ಪಡೆಯಬಹುದು. ಪ್ರಾಧಿಕಾರದಲ್ಲಿ ಸ್ವಂತ ಎಂಜಿನಿಯರಿಂಗ್‌ ವಿಭಾಗ ಇಲ್ಲ, ಸಿಬಂದಿಯೂ ಕಡಿಮೆ. ಮಂಡಳಿ ಯಾದರೆ ಈ ಎಲ್ಲ ಸಮಸ್ಯೆಗಳು ಬಗೆ ಹರಿಯಲಿದೆ.

Advertisement

ಆಡಳಿತ ಮಂಡಳಿ ರಚನೆ ಹೇಗೆ?
ಅಧ್ಯಕ್ಷರನ್ನು ರಾಜ್ಯ ಸರಕಾರವೇ ನೇಮಿಸಲಿದ್ದು, ವಿಭಾಗೀಯ ಆಯುಕ್ತರ ದರ್ಜೆಯ ಅಧಿಕಾರಿ ಮಂಡಳಿಯ ಕಾರ್ಯದರ್ಶಿಯಾಗಿರುವರು. ಸಂಸದರು, ಶಾಸಕರು, ವಿಧಾನ ಪರಿಷತ್‌ ಸದಸ್ಯರು, ಮೂರು ಜಿಲ್ಲೆಗಳ ಜಿ.ಪಂ. ಅಧ್ಯಕ್ಷರು, ಪ.ಜಾತಿ ಮತ್ತು ಪ. ಪಂಗಡದ ಇಬ್ಬರನ್ನು ಒಳಗೊಂಡಂತೆ, ನಾಮನಿರ್ದೇಶಿತ ಸದಸ್ಯರು, 3ಜಿಲ್ಲೆಯ ಜಿಲ್ಲಾಧಿಕಾರಿಗಳು ಇದರ ಸದಸ್ಯರು. ಅಧ್ಯಕ್ಷರು ಮತ್ತು ಸದಸ್ಯರು 3 ವರ್ಷಗಳ ಸೇವಾವಧಿ ಹೊಂದಿರುತ್ತಾರೆ.

ಹೆಚ್ಚಿನ ಅನುದಾನ ನಿರೀಕ್ಷೆ
ಪ್ರಸ್ತುತ ಮಲೆನಾಡು ಅಭಿವೃದ್ಧಿ ಮಂಡಳಿಗೆ 43 ಕೋ.ರೂ. ಮತ್ತು ಬಯಲು ಸೀಮೆ ಅಭಿವೃದ್ಧಿ ಮಂಡಳಿಗೆ 35 ಕೋ. ರೂ. ಅನುದಾನವನ್ನು ಬಜೆಟ್‌ನಲ್ಲಿ ಒದಗಿಸಲಾಗು ತ್ತಿದೆ. ಈ ಹಿನ್ನೆಲೆಯಲ್ಲಿ ಕರಾವಳಿ ಪ್ರದೇಶಾಭಿವೃದ್ಧಿ ಮಂಡಳಿಯ ಅನುದಾನ ಕ್ಷಾಮ ನೀಗುವ ನಿರೀಕ್ಷೆಯಿದೆ.

ಕರಾವಳಿ ಅಭಿವೃದ್ಧಿ ಪ್ರಾಧಿಕಾರವನ್ನು ಈಗಾಗಲೇ ಕರಾವಳಿ ಅಭಿವೃದ್ಧಿ ಮಂಡಳಿಯನ್ನಾಗಿ ರೂಪಿಸಲಾಗಿದ್ದು, ಮುಂದಿನ ಆರ್ಥಿಕ ವರ್ಷದಿಂದ ಕಾರ್ಯನಿರ್ವಹಣೆ ಆರಂಭವಾಗಲಿದೆ. ಮುಂದಿನ ಬಜೆಟ್‌ನಲ್ಲಿ ಮಂಡಳಿಗೆ ಅನುದಾನ ಘೋಷಣೆಯಾಗಲಿದ್ದು, ಬಳಿಕ ಅಧ್ಯಕ್ಷರ ಆಯ್ಕೆಯೂ ನಡೆಯಲಿದೆ.
– ಡಾ| ಶ್ರೀಧರ ಐ. ಬಾರಕೇರ,
ಕಾರ್ಯದರ್ಶಿ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next